

ನವದೆಹಲಿ : 2 ಜಿ ಸ್ಪೆಕ್ಟ್ರಮ್ ಹಗರಣದ ಪ್ರಮುಖ ಆರೋಪಿಗಳಾದ ಮಾಜಿ ಸಚಿವ ಎ. ರಾಜಾ, ಕನ್ನಿಮೋಳಿ ಸೇರಿದಂತೆ ಎಲ್ಲಾ ಆರೋಪಿಗಳಿಗೆ ದೆಹಲಿ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ.
ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಸಲ್ಲಿಸಿದ ಮನವಿ ಆಧಾರದ ಮೇಲೆ ನೋಟಿಸ್ ಜಾರಿಗೊಳಿಸಲಾಗಿದ್ದು, ಮುಂದಿನ ವಿಚಾರಣೆಯನ್ನು ಮಾರ್ಚ್ 25ಕ್ಕೆ ಮುಂದೂಡಿದೆ.
ಅಲ್ಲದೇ, ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿರುವ ಆಸ್ತಿಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ನಿರ್ವಹಣೆ ಮಾಡುವಂತೆಯೂ ಹೈಕೋರ್ಟ್ ಆದೇಶಿಸಿದೆ.
ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಎಲ್ಲರಿಗೂ ನೋಟಿಸ್ ಜಾರಿಗೊಳಿಸಿದ್ದು, ಇಡಿ ವಶಪಡಿಸಿಕೊಂಡಿರುವ ಆಸ್ತಿ ಪಾಸ್ತಿ ಸ್ಥಿತಿಗತಿ ವರದಿಸುವಂತೆಯೂ ಸೂಚಿಸಲಾಗಿದೆ ಎಂದು ಇಡಿ ಪರ ವಕೀಲ ರಾಜೀವ್ ಅವಾಸ್ತಿ ತಿಳಿಸಿದ್ದಾರೆ.
2 ಜಿ ಸ್ಪೇಕ್ಟ್ರಮ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ಮಾಜಿ ಸಚಿವ ಎ. ರಾಜಾ, ಕನ್ನಿಮೋಳಿ ಮತ್ತಿತರರನ್ನು ದೋಷಮುಕ್ತಗೊಳಿಸಿರುವುದನ್ನು ವಿರೋಧಿಸಿ ಜಾರಿ ನಿರ್ದೇಶನಾಲಯ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿತ್ತು.
ಈ ಮಧ್ಯೆ ಹೈಕೋರ್ಟ್ ಗೆ ಮೇಲ್ಮನವಿ ಬಗ್ಗೆ ಈ ಮೊದಲೇ ನಿರೀಕ್ಷಿಸಲಾಗಿತ್ತು. ಮೇಲ್ಮನವಿ ಸಲ್ಲಿಸಲು ಹಕ್ಕಿದೆ . ಇದರಲ್ಲಿ ವಿಶೇಷವೇನಿಲ್ಲಾ ಎಂದು ಎ. ರಾಜಾ ತಿಳಿಸಿದ್ದಾರೆ.
ಸಾಕ್ಷ್ಯಧಾರಗಳ ಕೊರತೆ ಹಿನ್ನೆಲೆಯಲ್ಲಿ ವಿಶೇಷ ಸಿಬಿಐ ನ್ಯಾಯಾಲಯ 2 ಜಿ ಹಗರಣದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿತ್ತು.