ಭಾರತೀಯ ರಾಯಭಾರಿಗಳಿಗೆ ಕಿರುಕುಳ: ಪಾಕ್ ವಿರುದ್ಧ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ ಭಾರತ

ಪಾಕಿಸ್ತಾನದಲ್ಲಿರುವ ರಾಯಭಾರಿಗಳಿಗೆ ನೀಡಲಾಗುತ್ತಿರುವ ಕಿರುಕುಳ ಪ್ರಕರಣಗಳ ಸರಣಿ ಮುಂದುವರೆಸಿದ್ದು, ಪ್ರಕರಣಗಳ ಸಂಬಂಧ ಪಾಕಿಸ್ತಾನದ ವಿರುದ್ಧ ಭಾರತ ಗುರುವಾರ ತೀವ್ರವಾಗಿ ಪ್ರತಿಭಟನೆ ವ್ಯಕ್ತಪಡಿಸಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಪಾಕಿಸ್ತಾನದಲ್ಲಿರುವ ರಾಯಭಾರಿಗಳಿಗೆ ನೀಡಲಾಗುತ್ತಿರುವ ಕಿರುಕುಳ ಪ್ರಕರಣಗಳ ಸರಣಿ ಮುಂದುವರೆಸಿದ್ದು, ಪ್ರಕರಣಗಳ ಸಂಬಂಧ ಪಾಕಿಸ್ತಾನದ ವಿರುದ್ಧ ಭಾರತ ಗುರುವಾರ ತೀವ್ರವಾಗಿ ಪ್ರತಿಭಟನೆ ವ್ಯಕ್ತಪಡಿಸಿದೆ. 
ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿಗಳಿಗೆ ಕಿರುಕುಳ ಮುಂದುವರೆಸಿರುವ ಹಿನ್ನಲೆಯಲ್ಲಿ ಪಾಕಿಸ್ತಾನದ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿ ಭಾರತ ಪತ್ರ ಬರೆದಿದ್ದು, ಎಲ್ಲಾ ಪ್ರಕರಣಗಳ ಸಂಬಂಧ ಸೂಕ್ತ ರೀತಿಯಲ್ಲಿ ತನಿಖೆ ನಡೆಸುವಂತೆ ಆಗ್ರಹಿಸಿದೆ. 
ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಅಧಿಕಾರಿ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ರಾಯಭಾರಿ ಕಚೇರಿ ಬಳಿ ತೆರಳುತ್ತಿದ್ದಾಗ ಟೊಯೋಟಾ ಕೊರೊಲ್ಲಾ ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಆಕ್ರಮಣಕಾರಿ ರೀತಿಯಲ್ಲಿ ಹಿಂಬಾಲಿಸಿದ್ದಾರೆಂದು ಮೂಲಗಳು ತಿಳಿಸಿವೆ. 
ಇದರಂತೆ ಭಾರತೀಯ ರಾಯಭಾರಿ ಕಚೇರಿಗೆ ಸೇರಿದ ಮತ್ತೊಬ್ಬ ಅಧಿಕಾರಿ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಸೆರೆನಾ ಹೋಟೆಲ್'ಗೆ ತೆರಳುತ್ತಿದ್ದ ಸಂದರ್ಭದಲ್ಲಿಯೂ ದ್ವಿಚಕ್ರ ವಾಹನದಲ್ಲಿ ಬಂದಿರುವ ವ್ಯಕ್ತಿಗಳು ಆಕ್ರಮಣಕಾರಿ ರೀತಿಯಲ್ಲಿ ಹಿಂಬಾಲಿಸಿದ್ದಾರೆ. 
ಇದಲ್ಲದೆ ಮತ್ತೊಬ್ಬ ಅಧಿಕಾರಿಗೂ ಪಾಕಿಸ್ತಾನದಲ್ಲಿ ಕಿರುಕುಳ ನೀಡಲಾಗಿದೆ. ರಾಯಭಾರಿ ಕಚೇರಿ ಬಳಿಯಿರುವ ಸ್ಟ್ರೀಟ್-1 ಕೆಫೆ ಬಳಿ ತೆರಳುತ್ತಿದ್ದ ಸಂದರ್ಭದಲ್ಲಿ ಆಕ್ರಮಣಾಕಾರಿ ರೀತಿಯಲ್ಲಿ ಬಂದಿರುವ ವ್ಯಕ್ತಿಗಳು ಅಧಿಕಾರಿಗೆ ಕಿರುಕುಳ ನೀಡಿದ್ದಾರೆಂದು ವರದಿಗಳು ತಿಳಿಸಿವೆ. 
ಇದರ ಜೊತೆಗೆ ಭಾರತೀಯ ರಾಯಭಾರಿ ಕಚೇರಿಯ ವೆಬ್ ಸೈಟ್ ನ್ನು ಕೂಡ ಆಗಾಗ ಸ್ಥಗಿತಗೊಳ್ಳುವಂತೆ ಮಾಡಲಾಗುತ್ತಿದ್ದು, ಇದು ರಾಯಭಾರಿ ಕಚೇರಿಯ ಕಾರ್ಯವೈಖರಿ ಮೇಲೆ ಸಾಕಷ್ಟು ಪರಿಣಾಮಗಳು ಬೀರುತ್ತಿವೆ. 
ಪಾಕಿಸ್ತಾನದ ಈ ವರ್ತನೆಗೆ ಭಾರತ ಇದೀಗ ತೀವ್ರವಾಗಿ ಪ್ರತಿಭಟನೆ ವ್ಯಕ್ತಪಡಿಸಿದ್ದು, ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿ ಅಧಿಕಾರಿಗಳು, ಸಿಬ್ಬಂದಿಗಳು, ರಾಯಭಾರಿ ಕಚೇರಿದ ಸದಸ್ಯರು ಹಾಗೂ ಅವರ ಕುಟುಂಬಸ್ಥರ ಸುರಕ್ಷತೆ ಹಾಗೂ ಭದ್ರತೆ ಪಾಕಿಸ್ತಾನ ಸರ್ಕಾರ ಜವಾಬ್ದಾರಿಯಾಗಿದೆ ಎಂದು ತಿಳಿಸಿದೆ. 
ರಾಯಭಾರಿ ಅಧಿಕಾರಿಗಳಿಗೆ ಕಿರುಕುಳ ನೀಡಿರುವ ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ಈಗಾಗಲೇ ಪಾಕಿಸ್ತಾನದ ಬಳಿ ಮನವಿ ಮಾಡಿಕೊಳ್ಳಲಾಗಿದೆ. ಮತ್ತೆ ಈ ರೀತಿಯ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವಂತೆಯೂ ಆಗ್ರಹಿಸಲಾಗಿದೆ. ತನಿಖೆಯ ವರದಿಗಳನ್ನು ರಾಯಭಾರಿ ಕಚೇರಿಗಳೊಂದಿಗೆ ಪಾಕಿಸ್ತಾನ ಹಂಚಿಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com