ನವದೆಹಲಿ; ಕೇಂದ್ರದ ಆಡಳಿತಾರೂಢ ಮೋದಿ ಸರ್ಕಾರಕ್ಕೆ 43 ಬಾರಿ ಬರೆದಿದ್ದೆ, ಒಂದಕ್ಕೂ ಪ್ರತಿಕ್ರಿಯೆ ಬಂದಿಲ್ಲ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಯವರು ಶನಿವಾರ ಹೇಳಿದ್ದಾರೆ.
ಸಮರ್ಥ ಲೋಕಪಾಲ ನೇಮಕ ಮತ್ತು ರೈತರ ಬೆಳೆಗಳಿಗೆ ಸೂಕ್ತ ಬೆಲೆ ನೀಡುವಂತೆ ಆಗ್ರಹಿಸಿ ರಾಜಧಾನಿ ದೆಹಲಿಯ ರಾಮ್'ಲೀಲಾ ಮೈದಾನದಲ್ಲಿ ಅಣ್ಣಾ ಹಜಾರೆಯವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಸತ್ಯಾಗ್ರಹದ ವೇಳೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿರುವ ಅವರು, ಪ್ರಧಾನಮಂತ್ರಿಗಳಿಗೆ ಈ ವರೆಗೂ 43 ಪತ್ರಗಳನ್ನು ಬರೆದಿದ್ದೇನೆ. ಆದರೆ, ಸರ್ಕಾರದಿಂದ ಒಂದಕ್ಕೂ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಯಾವುದೇ ದಾರಿಯಿಲ್ಲದೆ ನಾನು ಸತ್ಯಾಗ್ರಹ ನಡೆಸುತ್ತೇನೆಂದು ಹೇಳಿದ್ದಾರೆ.
ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಮತ್ತು ಮಹಾರಾಷ್ಟ್ರ ರಾಜ್ಯದ ಇತರೆ ಸಚಿವರು ಕೆಲ ದಿನಗಳ ಹಿಂದೆ ನನ್ನನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆಗಳನ್ನು ನೀಡಿದ್ದರು. ಆದರೆ, ಅವರನ್ನು ನಾನು ನಂಬಲಿಲ್ಲ. ನಮ್ಮ ಹಿತಾಸಕ್ತಿಗಳ ಬಗ್ಗೆ ಸರ್ಕಾರ ಗಮನಹರಿಸುತ್ತದೆ ಎಂದು ಅವರು ಹೇಳಿದ್ದರು. ಈ ವರೆಗೂ ನೀವು ಕೊಟ್ಟಿದ್ದ ಎಷ್ಟು ಭರವಸೆಗಳನ್ನು ಈಡೇರಿಸಿದ್ದೀರಿ? ಯಾವುದೂ ಇಲ್ಲ ಎಂದು ಕಿಡಿಕಾರಿದ್ದಾರೆ.
ಸರ್ಕಾರದೊಂದಿಗೆ ಚರ್ಚೆಯನ್ನು ನಡೆಸುತ್ತೇನೆ. ಆದರೆ, ಸೂಕ್ತ ಕ್ರಮಗಳ ಕೈಗೊಳ್ಳುವವರೆಗೂ ನನ್ನ ಈ ಸತ್ಯಾಗ್ರಹ ಮಾತ್ರ ನಿಲ್ಲುವುದಿಲ್ಲ. ರೈತರಿಗೆ ಬರಬೇಕಿರುವ ಹಣ ಬರುತ್ತಿಲ್ಲ. ಜನರು ಪ್ರತಿಭಟನೆಯಲ್ಲಿ ಭಾಗಿಯಾಗಲು ಕೇಂದ್ರ ಸರ್ಕಾರ ಬಿಡುತ್ತಿಲ್ಲ. ದೆಹಲಿಗೆ ಬರುತ್ತಿದ್ದ ಪ್ರತಿಭಟನಾಕಾರರನನ್ನು ತಡೆಯಲು ರೈಲುಗಳನ್ನು ರದ್ದು ಪಡಿಸಿದ್ದೀರಿ. ಹಿಂಸಾಚಾರಕ್ಕೆ ತಿರಲು ನೀವು ಯತ್ನಿಸುತ್ತಿದ್ದೀರಿ. ನನ್ನ ಸುತ್ತಮುತ್ತಲೂ ಪೊಲೀಸ್ ಪಡೆಗಳನ್ನು ನಿಯೋಜಿಸಿದ್ದೀರಿ. ಪೊಲೀಸರ್ ರಕ್ಷಣೆ ನನಗೆ ಬೇಡ ಎಂದು ನಾನು ಹಲವು ಬಾರಿ ಪತ್ರಗಳನ್ನು ಬರೆದಿದ್ದೇನೆ. ನಿಮ್ಮ ರಕ್ಷಣೆ ನನ್ನನ್ನು ಕಾಪಾಡುವುದಿಲ್ಲ. ಮೋಸ ವರ್ತನೆಯನ್ನು ಸರ್ಕಾರ ತೋರಬಾರದು ಎಂದಿದ್ದಾರೆ.