ಆಂಧ್ರಪ್ರದೇಶ ವಿಶೇಷ ಸ್ಥಾನಮಾನ ವಿವಾದ: ಸರ್ವಪಕ್ಷ ಸಭೆ ಕರೆದ ಸಿಎಂ ಚಂದ್ರಬಾಬು ನಾಯ್ಡು
ಆಂಧ್ರಪ್ರದೇಶ ರಾಜ್ಯಕ್ಕೆ ವಿಶೇಷ ಸ್ಥಾನಮಾನ ವಿವಾದಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮುಖ್ಯಂತ್ರಿ ಚಂದ್ರಬಾಬು ನಾಯ್ಡು ಅವರು ಮಂಗಳವಾರ ಸರ್ವಪಕ್ಷ ಸಭೆ ಕರೆದಿದ್ದಾರೆಂದು ತಿಳಿದುಬಂದಿದೆ...
ನವದೆಹಲಿ: ಆಂಧ್ರಪ್ರದೇಶ ರಾಜ್ಯಕ್ಕೆ ವಿಶೇಷ ಸ್ಥಾನಮಾನ ವಿವಾದಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮುಖ್ಯಂತ್ರಿ ಚಂದ್ರಬಾಬು ನಾಯ್ಡು ಅವರು ಮಂಗಳವಾರ ಸರ್ವಪಕ್ಷ ಸಭೆ ಕರೆದಿದ್ದಾರೆಂದು ತಿಳಿದುಬಂದಿದೆ.
ಇಂದು ಬೆಳಿಗ್ಗೆ ಸರ್ವಪಕ್ಷ ನಡೆಯಲಿದ್ದು, ಸಭೆಯಲ್ಲಿ ಆಂಧ್ರಪ್ರದೇಶ ರಾಜ್ಯಕ್ಕೆ ಕೇಂದ್ರ ಸರ್ಕಾರ ವಿಶೇಷ ಸ್ಥಾನಮಾನ ನೀಡಲು ನಿರಾಕರಿಸಿದ್ದೇ ಆದರೆ, ಕೇಂದ್ರದ ವಿರುದ್ಧ ಹಲವು ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ವಿವಾದ ಸಂಬಂಧ ಕೇಂದ್ರದ ವಿರುದ್ಧ ಕಿಡಿಕಾರಿದ್ದ ಚಂದ್ರಬಾಬು ನಾಯ್ಡು ಅವರು, ಬಿಜೆಪಿ ಸರ್ಕಾರದ ರಾಜ್ಯಕ್ಕೆ ಅನ್ಯಾಯ ಮಾಡುವುದರ ಜೊತೆಗೆ ನನ್ನ ವಿರುದ್ಧ ದಾಳಿ ಮಾಡುವ ಮೂಲಕ ರಾಜ್ಯದ ಶಕ್ತಿಯನ್ನು ಕುಂದಿಸುವ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿದ್ದರು.
ನನ್ನ ವಿರುದ್ಧ ದಾಳಿ ಮಾಡುತ್ತಿದೆ ಎಂದರೆ, ರಾಜ್ಯವನ್ನು ನಿಶ್ಯಕ್ತಿಗೊಳಿಸುತ್ತಿದೆ ಎಂದು ಅರ್ಥ. ರಾಜ್ಯವನ್ನು ನಿಶ್ಯಕ್ತಿಗೊಳಿಸುವುದನ್ನು ಅವರು ಬಯಸುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಬಗ್ಗೆ ಅವರು ಆಸಕ್ತಿಯನ್ನು ತೋರಿದ್ದರೆ, ಈ ರೀತಿಯ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
ಕೇಂದ್ರ ಬಜೆಟ್ ನಲ್ಲಿ ಆಂಧ್ರಪ್ರದೇಶ ರಾಜ್ಯವನ್ನು ಕಡೆಗಣಿಸಲಾಗಿದೆ ಎಂದು ಈ ಹಿಂದೆ ಟಿಡಿಪಿ ಆರೋಪ ಮಾಡಿತ್ತು. ನಂತರ ಎನ್'ಡಿಎ ಪಕ್ಷದ ಜೊತೆಗಿನ ಟಿಡಿಪಿ ಸಂಬಂಧದಲ್ಲಿ ಒಡಕು ಮೂಡಿತ್ತು. ಇದರ ಬೆನ್ನಲ್ಲೇ ಕೇಂದ್ರದ ನಾಗರಿಕ ವಿಮಾನಯಾನ ಸಚಿವರಾದ ಟಿಡಿಪಿಯ ಅಶೋಕ್ ಗಜಪತಿ ರಾಜು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ವೈ.ಎಸ್.ಚೌಧರಿಯವರು ಸಚಿವ ಸಂಪುಟಕ್ಕೆ ರಾಜಿನಾಮೆ ನೀಡಿದ್ದರು.