ಸಿಬಿಎಸ್ ಇ ಪ್ರಶ್ನೆ ಪತ್ರಿಕೆ ಸೋರಿಕೆ: ಹಗರಣದ ಹಿಂದೆ ಟ್ಯುಟೋರಿಯಲ್ ಗಳ ಕೈವಾಡ ಶಂಕೆ

ಭಾರಿ ಚರ್ಚೆಗೆ ಕಾರಣವಾಗಿರುವ ಸಿಬಿಎಸ್ ಇ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ಖಾಸಗಿ ಟುಟೋರಿಯಲ್ ಗಳ ಕೈವಾಡದ ಶಂಕೆ ವ್ಯಕ್ತವಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನವದೆಹಲಿ: ಭಾರಿ ಚರ್ಚೆಗೆ ಕಾರಣವಾಗಿರುವ ಸಿಬಿಎಸ್ ಇ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ಖಾಸಗಿ ಟುಟೋರಿಯಲ್ ಗಳ ಕೈವಾಡದ ಶಂಕೆ ವ್ಯಕ್ತವಾಗುತ್ತಿದೆ.
ಇತ್ತೀಚೆಗೆ ಮಾಧ್ಯಮಗಳಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಸಿಬಿಎಸ್ ಇ 10 ಮತ್ತು 12ನೇ ತರಗತಿಯ ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ ಖಾಸಗಿ ಟುಟೋರಿಯಲ್ ಗಳ ಕೈವಾಡ ಶಂಕೆ ಮೂಡಿದ್ದು, ಮತ್ತೊಂದು ಬೆಳವಣಿಗೆಯಲ್ಲಿ ಅನಾಮಿಕರೊಬ್ಬರು ಮಾರ್ಚ್ 26ರಂದು ಸಿಬಿಎಸ್ ಇ ಕಚೇರಿಗೆ 12ನೇ ತರಗತಿಯ ಅರ್ಥಶಾಸ್ತ್ರ ಪ್ರಶ್ನೆ ಪತ್ರಿಕೆಯ ಪ್ರಶ್ನೆಗಳಿಗೆ ಕೈಯಲ್ಲಿ ಉತ್ತರ ಬರೆದು ರವಾನೆ ಮಾಡಿರುವ ಎನ್ವಲಪ್ ಲಭ್ಯವಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಪೇಪರ್ ಲೀಕ್ ಆಗಿರುವ ಕುರಿತು ಮನಗಂಡ ಸಿಬಿಎಸ್ ಇ ಸಂಸ್ಥೆ ಮರು ಪರೀಕ್ಷೆಗೆ ಸೂಚನೆ ನೀಡಿದೆ. 
ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ದೆಹಲಿ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದು, ಸಿಸಿಬಿ ಪೊಲೀಸರಿಗೆ ಫ್ಯಾಕ್ಸ್ ಮೂಲಕ ದೂರು ನೀಡಲಾಗಿದೆ. ಮಾರ್ಚ್ 23ರಂದೇ ಸಿಸಿಬಿ ಪೊಲೀಸರಿಗೆ ಅನಾಮಧೇಯ ವ್ಯಕ್ತಿಯೋರ್ವ ಫ್ಯಾಕ್ಸ್ ನಲ್ಲಿ  ದೂರು ರವಾನೆ ಮಾಡಿದ್ದ. ಪೊಲೀಸರು ಶಂಕೆ ವ್ಯಕ್ತಪಡಿಸಿರುವಂತೆ ದೆಹಲಿಯ ರಾಜಿಂದರ್ ನಗರದಲ್ಲಿರುವ ಟುಟೋರಿಯಲ್ ನಿಂದ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಶಂಕೆ ಇದ್ದು, ಪೊಲೀಸರಿಗೆ ಬಂದಿರುವ ದೂರಿನಲ್ಲೂ ಇದೇ ರಾಜಿಂದರ್ ನಗರದ ಎರಡು ಖಾಸಗಿ ಶಾಲೆಗಳ ವಿರುದ್ಧ ಆರೋಪ ಮಾಡಲಾಗಿದೆ. ಅಲ್ಲದೆ ಮಾರ್ಚ್ 26ರಂದು ಶನಿವಾರ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಂತೆಯೇ ಎನ್ವಲಪ್ ನಲ್ಲಿ ಪ್ರಶ್ನೆ ಪತ್ರಿಕೆಗೆ ಉತ್ತರ ಬರೆದಿರುವ ಶೀಟ್ ಗಳು ಲಭ್ಯವಾಗಿತ್ತು. ಇದರಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬುದು ಅಧಿಕಾರಿಗಳಿಗೆ ಖಚಿತವಾಗಿತ್ತು. 
ಅಲ್ಲದೆ ವಾಟ್ಸಪ್ ಮೂಲಕ ಪ್ರಶ್ನೆ ಪತ್ರಿಕೆ ಶೇರ್ ಆಗಿರುವ ಕುರಿತೂ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ದೆಹಲಿ ಪೊಲೀಸರು 2 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಮಾರ್ಚ್ 27ರಂದು ಅರ್ಥಶಾಸ್ತ್ರ ಪತ್ರಿಕೆ ಸೋರಿಕೆ ಸಂಬಂಧ ಮತ್ತು ಮಾರ್ಚ್ 28ರಂದು ಗಣಿತಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ದೂರು ದಾಖಲಾಗಿದೆ. 
ಇಡೀ ಪರೀಕ್ಷೆಯನ್ನು ಮರು ಘೋಷಣೆ ಮಾಡುವಂತೆ ವಿದ್ಯಾರ್ಥಿ, ಪೋಷಕರ ಆಗ್ರಹ
ಇತ್ತ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಅಧಿಕಾರಿಗಳು ತನಿಖೆ ನಡೆಸುತ್ತಿರುವ ಬೆನ್ನಲ್ಲೇ ಅತ್ತ ಆತಂಕಕ್ಕೀಡಾಗಿರುವ ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಲಿ ನಡೆಯುತ್ತಿರುವ ಇಡೀ ಪರೀಕ್ಷೆಯನ್ನೇ ಮರು ಘೋಷಣೆ ಮಾಡುವಂತೆ ಸಿಬಿಎಸ್ ಇಗೆ ಆಗ್ರಹಿಸುತ್ತಿದ್ದಾರೆ. ಯಾವ ವಿಷಯಗಳ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ವಿಚಾರ ಸ್ಪಷ್ಟವಾಗಿ ತಿಳಿಯುತ್ತಿಲ್ಲ, ಹೀಗಾಗಿ ಎಲ್ಲ ವಿಷಯಗಳ ಪರೀಕ್ಷೆಯನ್ನು ಮತ್ತೆ ನಡೆಸುವಂತೆ ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದಾರೆ. ಈ ಸಂಬಂಧ ದೆಹಲಿಯ ಜಂತರ್ ಮಂತರ್ ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com