ನವದೆಹಲಿ: 100.04 ಟಿಎಂಸಿ ನೀರಿನ ಬದಲು ತಮಿಳುನಾಡಿಗೆ ಈಗಾಗಲೇ 116.697 ಟಿಎಂಸಿ ನೀರನ್ನು ಬಿಟ್ಟಿದ್ದೇವೆ ಎಂದು ಕರ್ನಾಟಕ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ಈ ವರ್ಷ ಕರ್ನಾಟಕಕ್ಕೇ ನೀರಿನ ಅಭಾವ ಎದುರಾಗಿದ್ದರೂ ತಮಿಳುನಾಡಿಗೆ 116.697 ಟಿಎಂಸಿ ನೀರನ್ನು ಬಿಡಲಾಗಿದೆ ಎಂದು ಸುಪ್ರೀಂ ಕೋರ್ಟ್ ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ತಮಿಳುನಾಡಿಗೆ ಸಾಕಷ್ಟು ನೀರನ್ನು ಬಿಡದೇ ಇರುವುದಕ್ಕೆ ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಅಫಿಡವಿಟ್ ಸಲ್ಲಿಸಿರುವ ರಾಜ್ಯ ಸರ್ಕಾರ 116.97 ಟಿಎಂಸಿ ನೀರು ಬಿಟ್ಟಿದ್ದೇವೆ ಎಂದಿದೆ.
ಆದರೆ ತಮಿಳುನಾಡಿನ ಪರ ವಕೀಲರು ಕರ್ನಾಟಕದ ವಿರುದ್ಧದ ಆರೋಪವನ್ನು ಮುಂದುವರೆಸಿದ್ದು, ಕರ್ನಾಟಕ ತನ್ನದೇ ಆದ ನ್ಯಾಯವನ್ನು ಪಾಲಿಸುತ್ತಿದೆ. ಟ್ರಿಬ್ಯುನಲ್ ನ ಆದೇಶವನ್ನು ಪಾಲಿಸುವಲ್ಲಿ ವಿಫಲವಾಗಿದ್ದು ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.