

ನವದೆಹಲಿ : ಉದ್ಯಮಿ ನೀರವ್ ಮೋದಿಯಿಂದ ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಾದ 2 ಬಿಲಿಯನ್ ಅಮೆರಿಕನ್ ಡಾಲರ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇಂದು ಮೊದಲ ಚಾರ್ಜ್ ಶೀಟ್ ದಾಖಲಿಸಿದೆ. ಇದರಲ್ಲಿ ಅಲಹಾಬಾದ್ ಬ್ಯಾಂಕ್ ಸಿಇಓ , ವ್ಯವಸ್ಥಾಪಕ ನಿರ್ದೇಶಕಿ ಉಷಾ ಅನಂತ ಸುಬ್ರಮಣಿಯನ್ ಅವರ ಪಾತ್ರವಿದೆ ಎಂದು ಆರೋಪಿಸಲಾಗಿದೆ.
ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಚಾರ್ಚ್ ಶೀಟ್ ಸಲ್ಲಿಕೆಯಾಗಿದ್ದು, ಬ್ಯಾಂಕಿನ ಇನ್ನಿತರ ಉನ್ನತ ಅಧಿಕಾರಿಗಳ ಹೆಸರುಗಳು ಕೂಡಾ ಇವೆ. ಉಷಾ ಅನಂತ ಸುಬ್ರಮಣಿಯನ್ 2015 ರಿಂದ 2017ರವರೆಗೂ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಸಿಇಓ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಈ ಪ್ರಕರಣ ಸಂಬಂಧ ಸಿಬಿಐನಿಂದ ಇತ್ತೀಚಿಗೆ ಅವರನ್ನು ವಿಚಾರಣೆಗೊಳಪಡಿಸಲಾಗಿತ್ತು.
ಪಂಜಾಬ್ ನ್ಯಾಷನಲ್ ಬ್ಯಾಂಕಿನ ಕಾರ್ಯಕಾರಿ ನಿರ್ದೇಶಕರಾದ ಕೆ. ವಿ. ಬ್ರಹ್ಮಾಜಿ ರಾವ್, ಸಂಜೀವ್ ಶರಣ್, ಮತ್ತು ಜನರಲ್ ಮ್ಯಾನೇಜರ್ ನೇಹಲ್ ಅಹಾದ್ ಹೆಸರು ಕೂಡಾ ಚಾರ್ಜ್ ಶೀಟ್ ನಲ್ಲಿದೆ.
ಈ ಹಗರಣದಲ್ಲಿ ನೀರವ್ ಮೋದಿ , ಆತನ ಸಹೋದರ ನಿಶಾಲ್ ಮೋದಿ ಮತ್ತು ನೀರವ್ ಮೋದಿ ಕಂಪನಿಯ ಕಾರ್ಯಕಾರಿ ಸುಭಾಷ್ ಪರಬ್ ಅವರ ಪಾತ್ರದ ಕುರಿತಂತೆಯೂ ಸಿಬಿಐ ಮಾಹಿತಿ ಕಲೆಹಾಕಿದೆ.
ಡೈಮಂಡ್ ಆರ್ ಯುಎಸ್, ಸೋಲಾರ್ ಎಕ್ಸ್ ಪೋರ್ಟ್ಸ್ ಮತ್ತು ಸ್ಟೆಲ್ಲಾರ್ ಡೈಮಂಡ್ಸ್ ಗೆ 6000 ಕೋಟಿ ವಿಮೆ ಪತ್ರ ಮೋಸದ ವಿಚಾರಣೆಗೆ ಸಂಬಂಧಿಸಿದಂತೆ ಮೊದಲ ಎಫ್ಐಆರ್ ದಾಖಲಿಸಲಾಗಿದೆ.
ಈ ಚಾರ್ಚ್ ಶೀಟ್ ನಲ್ಲಿ ಮೆಹುಲ್ ಚೋಕ್ಸಿ ಪಾತ್ರದ ಬಗ್ಗೆ ಸಿಬಿಐ ಯಾವುದೇ ಮಾಹಿತಿ ನೀಡಿಲ್ಲ. ಗೀತಾಂಜಲಿ ಸಮೂಹದ ತನಿಖೆಗೆ ಸಂಬಂಧಿಸಿದ ಪ್ರಕರಣದ ಪೂರಕ ಜಾರ್ಜ್ ಶೀಟ್ ನಲ್ಲಿ ಮಾಹಿತಿ ನೀಡುವ ಸಾಧ್ಯತೆ ಇದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ನೀರವ್ ಮೋದಿ, ಆತನ ಸಂಬಂಧಿ ಮೆಹೂಲ್ ಚೊಕ್ಸಿ ವಿರುದ್ಧ ಸಿಬಿಐ ಮೂರು ಪ್ರತ್ಯೇಕ ಎಫ್ ಐ ಆರ್ ದಾಖಲಿಸಿಕೊಂಡಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಿಬಿಐ ನಲ್ಲಿ ದೂರು ದಾಖಲಿಸುವ ಮುನ್ನವೇ ಇಬ್ಬರು ಮೋದಿ ಹಾಗೂ ಚೋಕ್ಸಿ ದೇಶದಿಂದ ಪಲಾಯನ ಮಾಡಿದ್ದರು.