ದೆಹಲಿ: ಬುಲೆಟ್ ನೊಂದಿಗೆ ಸಿಎಂ ಕೇಜ್ರಿವಾಲ್ ನಿವಾಸಕ್ಕೆ ಬಂದ ಮೌಲ್ವಿ, ಪೊಲೀಸರಿಂದ ಬಂಧನ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಲೆಂದು ಅವರ ನಿವಾಸಕ್ಕೆ ತೆರಳಿದ್ದ ವ್ಯಕ್ತಿಯೊಬ್ಬನ ಬಳಿ...
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಲೆಂದು ಅವರ ನಿವಾಸಕ್ಕೆ ತೆರಳಿದ್ದ ವ್ಯಕ್ತಿಯೊಬ್ಬನ ಬಳಿ ಬುಲೆಟ್ ಪತ್ತೆಯಾದ ಹಿನ್ನಲೆಯಲ್ಲಿ ಬಂಧಿಸಿದ ಘಟನೆ ನಡೆದಿದೆ. ವ್ಯಕ್ತಿಯನ್ನು ತಪಾಸಣೆ ಮಾಡುತ್ತಿದ್ದ ವೇಳೆ ಆತನ ಬಳಿ ಬುಲೆಟ್ ಪತ್ತೆಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿಯ ಸೀಲಾಂಪುರ್ ಪ್ರದೇಶದ ಕರೊಲ್ ಬಾಗ್ ನಲ್ಲಿ ಮಸೀದಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮೊಹಮ್ಮದ್ ಇಮ್ರಾನ್ ಬಂಧಿತ ಮೌಲ್ವಿ. ಈತ ಮುಖ್ಯಮಂತ್ರಿ ಕೇಜ್ರಿವಾಲ್ ನಿವಾಸಕ್ಕೆ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲು ನಿನ್ನೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಈತ ಮಸೀದ್ ಬವ್ಲಿ ವಾಲಿ ಮಸೀದಿಯಲ್ಲಿ ಮೌಲ್ವಿ ಆಗಿದ್ದ.

ಕಳೆದ ವಾರ ದೆಹಲಿ ಕಾರ್ಯದರ್ಶಿಗಳ ಕಚೇರಿಯ ಒಳಗೆ ಅರವಿಂದ್ ಕೇಜ್ರಿವಾಲ್ ಮೇಲೆ ವ್ಯಕ್ತಿಯೊಬ್ಬ ಮೆಣಸಿನ ಪುಡಿಯನ್ನು ಎರಚಿದ್ದ. ಈ ಹಿಂದೆಯೂ ಅರವಿಂದ್ ಕೇಜ್ರಿವಾಲ್ ಮೇಲೆ ಹಲ್ಲೆ ಮಾಡಲು ನಡೆಸಿದ ಯತ್ನ ನಡೆದಿತ್ತು.

ನಿನ್ನೆ ಬೆಳಗ್ಗೆ 11.15ರ ಹೊತ್ತಿಗೆ ಇಮ್ರಾನ್ 12 ಮಂದಿ ಇಮಾಮ್ಸ್ ಮತ್ತು ಮೌಲ್ವಿಗಳ ಜೊತೆ ದೆಹಲಿಯ ವಕ್ಫ್ ಮಂಡಳಿಯ ಸಿಬ್ಬಂದಿಗೆ ವೇತನ ಹೆಚ್ಚಳ ಮಾಡಿಸುವ ಬಗ್ಗೆ ಮಾತುಕತೆ ನಡೆಸಲು ಮುಖ್ಯಮಂತ್ರಿಗಳ ನಿವಾಸಕ್ಕೆ ಬಂದಿದ್ದ. ಈ ವೇಳೆ ಆತನನ್ನು ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದಾಗ ಆತನ ಚೀಲದಲ್ಲಿ ಬುಲೆಟ್ ಪತ್ತೆಯಾಗಿದೆ.



ಇಮ್ರಾನ್ ನನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಲಾಗಿದ್ದು ಶಸ್ತ್ರಾಸ್ತ್ರ ಕಾಯ್ದೆಯಡಿ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.

ವಿಚಾರಣೆ ವೇಳೆ ಇಮ್ರಾನ್, ತಾನು ಮಸೀದಿಯಲ್ಲಿ ಮೌಲ್ವಿ ಆಗಿದ್ದು ಮೂರು ತಿಂಗಳ ಹಿಂದೆ ಮಸೀದಿಯ ದಾನ ಪೆಟ್ಟಿಗೆಯಲ್ಲಿ ಸಿಡಿಮದ್ದುಗಳು ಪತ್ತೆಯಾದವು. ಅದನ್ನು ಯಮುನಾ ನದಿ ತೀರಕ್ಕೆ ಎಸೆಯಲು ಯೋಚಿಸಿದ್ದೆ, ಆದರೆ ಕೊನೆಗೆ ಮನಸ್ಸು ತೋರದೆ ತನ್ನ ಚೀಲದಲ್ಲಿ ಇಟ್ಟುಕೊಂಡಿರುವುದಾಗಿ ಹೇಳಿದನು.

ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com