ದೆಹಲಿ: ರೈತರ ಪ್ರತಿಭಟನೆಗೆ ಕೇಜ್ರಿವಾಲ್, ರಾಹುಲ್ ಗಾಂಧಿ ಸಾಥ್; ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ

ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜಧಾನಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಬೃಹತ್ ಪ್ರತಿಭಟನೆಗೆ...
ರೈತರ ಪ್ರತಿಭಟನೆಗೆ ಕೈಜೋಡಿಸಿದ ರಾಹುಲ್
ರೈತರ ಪ್ರತಿಭಟನೆಗೆ ಕೈಜೋಡಿಸಿದ ರಾಹುಲ್
Updated on: 
ನವದೆಹಲಿ: ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜಧಾನಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಬೃಹತ್ ಪ್ರತಿಭಟನೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಕೈಜೋಡಿಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ. 
ರೈತರೊಂದಿಗೆ ಪ್ರತಿಭಟನೆಯಲ್ಲಿ ಭಾಗಿಯಾದ ರಾಹುಲ್ ಗಾಂಧಿಯವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದರು. 
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೈತರಿಗೆ ಟೊಳ್ಳು ಭರವಸೆಗಳನ್ನಷ್ಟೇ ನೀಡಿದ್ದಾರೆ, ರೈತರ ಕ್ಷೇಮಾಭಿವೃದ್ಧಿಗಾಗಿ ಏನನ್ನೂ ಮಾಡಿಲ್ಲ ಎಂದು ಹೇಳಿದ್ದಾರೆ. 
ಕನಿಷ್ಠ ಬೆಂಬಲ ಬೆಲೆ ಹೆಚ್ಚುವುದಾಗಿ, ಬೋನಸ್ ನೀಡುವುದಾಗಿ ಮೋದಿಯವರು ಈ ಹಿಂದೆ ಹೇಳಿದ್ದರು. ಆದರೆ, ಅದಾವೂದೂ ಅಗಿಲ್ಲ. ದೊಡ್ಡ ದೊಡ್ಡ ಉದ್ಯಮಿಗಳ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ. ಆದರೆ, ನಿಮಗಾಗಿ ಏನ್ನೂ ಮಾಡಿಲ್ಲ. ಕೇವಲ ಟೊಳ್ಳು ಭರವಸೆಗಳನ್ನಷ್ಟೇ ನೀಡಿದ್ದಾರೆ. ಉದ್ಯಮಿಗಳ ಸಾಲ ಮನ್ನಾ ಮಾಡಿದಂತೆ ರೈತರ ಸಾಲ ಕೂಡ ಮನ್ನಾ ಮಾಡಬೇಕು. ನಾವು ನಿಮ್ಮೊಂದಿಗಿದ್ದೇವೆ. ಭೀತಿಗೊಳಗಾಗಬೇಡಿ. ನಿಮ್ಮ ಶಕ್ತಿಯೇ ದೇಶವನ್ನು ನಿರ್ಮಾಣ ಮಾಡಿದೆ ಎಂಬ ಭರವಸೆಯನ್ನು ರೈತರಿಗೆ ನೀಡುತ್ತೇನೆಂದು ತಿಳಿಸಿದ್ದಾರೆ. 
ಇದರಂತೆ ಸಿಪಿಐ(ಎಂ) ನಾಯಕ ಸೀತಾರಾಮ್ ಯೆಚೂರಿಯವರು ಮಾತನಾಡಿದ್ದು, ಬಿಜೆಪಿ, ಪ್ರಧಾನಿ ಮೋದಿ ಹಾಗೂ ಆರ್'ಎಸ್ಎಸ್ ಬಳಿ ರಾಮ ಮಂದಿರ ಎಂಬ ಏಕೈಕ ಶಸ್ತ್ರಾಸ್ತ್ರವಿದೆಯಷ್ಟೇ. ಚುನಾವಣೆ ಬಂದ ಕೂಡಲೇ ರಾಮ ರಾಮ ಎಂದು ಜಪ ಮಾಡುತ್ತಾರೆಂದು ತಿಳಿಸಿದ್ದಾರೆ. 
ರೈತರ ಪ್ರತಿಭಟನೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರೂ ಕೂಡ ಸಾಥ್ ನೀಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. 
ಸ್ವಾಮಿನಾಥನ್ ವರದಿ ಜಾರಿಗೆ ತರುವಂತೆ ಆಗ್ರಹಿಸಿ 5 ತಿಂಗಳು ಕಳೆದಿವೆ. ಆದರೂ, ಕೇಂದ್ರ ಸರ್ಕಾರ ಏನನ್ನೂ ಮಾಡಿಲ್ಲ. ನ್ಯಾಯೋಚಿತ ಬೆಲೆಗಳಿಂದ ರೈತರಿಗೆ ಮೋಸ ಮಾಡಲಾಗುತ್ತಿದೆ. ರೈತರು ಭಿಕ್ಷುಕರಲ್ಲ ಎಂದು ಹೇಳಿದ್ದಾರೆ. 
ರೈತರ ಪ್ರತಿಭಟನೆಗೆ ರಾಹುಲ್, ಸೀತಾರಾಮ್ ಯೆಚೂರಿ, ಕೇಜ್ರಿವಾಲ್ ಅಷ್ಟೇ ಅಲ್ಲದೆ, ಎನ್'ಸಿಪಿ ಮುಖ್ಯಸ್ಥ ಶರದ್ ಪವಾರ್, ಫಾರೂಖ್ ಅಬ್ದುಲ್ಲಾ, ದಿನೇಶ್ ತ್ರಿವೇದಿ, ಶರದ್ ಯಾದವ್, ಸಾಮಾಜಿಕ ಕಾರ್ಯಕರ್ತರು, ಮೇಧಾ ಪಾಟ್ಕರ್, ಪತ್ರಕರ್ತ ಸಾಯಿನಾಥ್ ಸೇರಿ ಹಲವರು ಬೆಂಬಲ ಸೂಚಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com