ಶಬರಿಮಲೆ (ಸಂಗ್ರಹ ಚಿತ್ರ)
ಶಬರಿಮಲೆ (ಸಂಗ್ರಹ ಚಿತ್ರ)

ನಾಳೆಯಿಂದ ಶಬರಿಮಲೆ ಓಪನ್, ಮಹಿಳೆಯರಿಗೆ ಸಿಗುತ್ತಾ ಅಯ್ಯಪ್ಪನ ದರ್ಶನ?

ಪುರಾಣ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ 10 ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ಸುಪ್ರೀಂಕೋರ್ಟ್ ಪ್ರವೇಶಾಕಾಶ ಕಲ್ಪಿಸಿದ ಬಳಿಕ ಇದೇ ಮೊದಲ ಬಾರಿ ದೇಗುಲದ ಬಾಗಿಲು ಬುಧವಾರ ತೆರಯಲಿದ್ದು, ಈ ಹಿನ್ನಲೆಯಲ್ಲಿ ಕೇರಳದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ...
Published on
ತಿರುವನಂತಪುರ: ಪುರಾಣ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ 10 ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ಸುಪ್ರೀಂಕೋರ್ಟ್ ಪ್ರವೇಶಾಕಾಶ ಕಲ್ಪಿಸಿದ ಬಳಿಕ ಇದೇ ಮೊದಲ ಬಾರಿ ದೇಗುಲದ ಬಾಗಿಲು ಬುಧವಾರ ತೆರಯಲಿದ್ದು, ಈ ಹಿನ್ನಲೆಯಲ್ಲಿ ಕೇರಳದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. 
ದೇವಾಲಯದ ಬಾಗಿಲು ನಾಳೆಯಿಂದ ತೆರೆಯಲಿದ್ದು, ಈ ಹಿನ್ನಲೆಯಲ್ಲಿ ದೇವಾಲಯ ಪ್ರವೇಶಕ್ಕೆ ಪ್ರಗತಿಪರ ಮಹಿಳೆಯರು ಹಾಗೂ ಸಂಘಟನೆಗಳ ಸದಸ್ಯರು ತುದಿಗಾಲಲ್ಲಿ ನಿಂತಿದ್ದರೆ, ಇದನ್ನು ತಡೆಯಲು ತಾವು ಟೊಂಕ ಕಟ್ಟಿ ನಿಲ್ಲುವುದಾಗಿ ಸಂಪ್ರದಾಯವಾದಿ ಪಕ್ಷಗಳು ಹಾಗೂ ಸಂಘ-ಸಂಸ್ಥೆಗಳು, ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ. 
ಈ ಹಿನ್ನೆಲೆಯಲ್ಲಿ ಅಂದು ದೇವಾಲಯದ ಪ್ರದೇಶದಲ್ಲಿ ಭಾರೀ ಪ್ರಮಾಣದ ಕೋಲಾಹಲ ಏರ್ಪಡುವ ಭೀತಿ ಉಂಟಾಗಿದೆ. ಇಲ್ಲಿನ ಪರಿಸ್ಥಿತಿ ಕೇರಳದ ವಿವಿಧೆಡೆ ಪರಿಣಾಮ ಬೀರುವ ಸಾಧ್ಯತೆಗಳು ಕೂಡ ಇದೆ. ಹೀಗಾಗಿ ಬುಧವಾರ ಏನಾಗಬಹುದು ಎಂಬ ಭಾರೀ ಕುತೂಹಲ ಮೂಡಿಸಿದೆ. 
ಈ ಹಿನ್ನಲೆಯಲ್ಲಿ ಶಬರಿಮಲೆ ದೇವಾಲಯದ ಸುತ್ತಮುತ್ತಲ ಪರಿಸರದಲ್ಲಿ ಭಾರೀ ಪ್ರಮಾಣದ ಬಿಗಿ ಪೊಲೀಸ್ ಬಂದೋಬಸ್ತ್ ಹಮ್ಮಿಕೊಳ್ಳಲಾಗಿದೆ. ಆದರೆ, ಈ ವರೆಗೆ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರ ಪ್ರವೇಶ ಸಂಬಂಧ ಯಾವುದೇ ವಿಶೇಷ ವ್ಯವಸ್ಥೆಗಳನ್ನು ದೇವಾಲಯದ ಆಡಳಿತ ಮಂಡಳಿ ಮಾಡಿಕೊಂಡಿಲ್ಲ ಎಂದು ಮೂಲಗಳು ಹೇಳಿವೆ. ಮಾಸಿಕ ಪೂಜೆ ಅಂಗವಾಗಿ ಅಕ್ಟೋಬರ್ 17 ರಂದು ದೇವಾಲಯದ ಬಾಗಿಲು ತೆರೆಯಲಿದ್ದು, ಅಕ್ಟೋಬರ್ 22 ರಂದು ಮುಚ್ಚಲಿದೆ. 
ದೇಗುಲಕ್ಕೆ ಮಹಿಳೆಯರು ಬಂದಿದ್ದೇ ಆದರೆ, ಅವರಿಗೆ ರಕ್ಷಣೆ ನೀಡುತ್ತೇವೆ. ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸುತ್ತೇವೆಂದು ರಾಜ್ಯ ಪೊಲೀಸ್ ಆಯುಕ್ತ ಲೋಕನಾಥ್ ಬೆಹೆರಾ ಅವರು ಹೇಳಿದ್ದಾರೆ. 
ಮಹಿಳಾಧಿಕಾರಿಗಳನ್ನು ಪಂಪಾ ನದಿ ಹಿಂದೆ ನಿಯೋಜಿಸಲಾಗಿರುತ್ತದೆ. ಆದರೆ, ಸನ್ನಿಧಿಯೊಳಗೆ ಮಹಿಳಾಧಿಕಾರಿಗಳನ್ನು ನಿಯೋಜಿಸುವ ಕುರಿತು ನಿರ್ಧಾರಗಳನ್ನು ಕೈಗೊಂಡಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 
ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಪರಿಶೀಲನೆ ನಡೆಸಲಾಗುತ್ತಿದೆ. ಪ್ರತಿಭಟನೆಯಿಂದಾಗಿ ಕಾನೂನು ವ್ಯವಸ್ಥೆ ಹಾಳಾಗದಂತೆ ನೋಡಿಕೊಳ್ಳುವಂತೆ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಶಬರಿಮಲೆಯಲ್ಲಿ ಅಗತ್ಯವಿರುವಷ್ಟು ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಬೆಹೆರಾ ತಿಳಿಸಿದ್ದಾರೆ. ಈ ನಡುವೆ ಡಿಜಿಟಲ್ ದರ್ಶನವನ್ನು ರದ್ದುಗೊಳಿಸಿರುವುದಾಗಿ ಮೂಲಗಳು ತಿಳಿಸಿವೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com