ನವದೆಹಲಿ: ಆಧಾರ್ ಗೆ ಸಾಂವಿಧಾನಿಕ ಮಾನ್ಯತೆ ನೀಡಿದ ಸುಪ್ರಿಂ ಕೋರ್ಟ್ ತೀರ್ಪು ಕಾಂಗ್ರೆಸ್ ನಿಲುವು ಬೆಂಬಲಿಸಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬುಧವಾರ ಹೇಳಿದ್ದಾರೆ.
ಆಧಾರ್ ಕುರಿತ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಹರ್ಷ ವ್ಯಕ್ತಪಡಿಸಿದ ರಾಹುಲ್ ಗಾಂಧಿ, ಆಧಾರ್ ಕಾರ್ಡನ್ನು ಸುಪ್ರೀಂ ಕೋರ್ಟ್ ಮಾನ್ಯಗೊಳಿಸಿದೆ. ಆದರೆ ಖಾಸಗಿತನಕ್ಕೆ ದಕ್ಕೆಯಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಕೇಂದ್ರ ಸರ್ಕಾರದ್ದು, ಇದಕ್ಕೆ ವಿಶೇಷ ಕಾನೂನು ರೂಪಿಸುವಂತೆ ಸೂಚನೆ ನೀಡಿದೆ ಎಂದರು.
ಕಾಂಗ್ರೆಸ್ ಸರ್ಕಾರಕ್ಕೆ ಆಧಾರ್ ಸಬಲೀಕರಣದ ಸಂಕೇತವಾಗಿತ್ತು. ಆದರೆ ಬಿಜೆಪಿ ಸರ್ಕಾರಕ್ಕೆ ಆಧಾರ್ ಒಂದು ದಬ್ಬಾಳಿಕೆಯ ಅಸ್ತ್ರವಾಗಿತ್ತು, ಎಲ್ಲರ ಖಾಸಗೀತನವನ್ನ ಓರೇ ಹಚ್ಚಲು ಬಿಜೆಪಿ ಆಧಾರನ್ನು ಬಳಸಿಕೊಳ್ಳುತ್ತಿತ್ತು. ಸದ್ಯ ಸುಪ್ರೀಂ ಕಾಂಗ್ರೆಸ್ನ ನಿಲುವನ್ನು ಎತ್ತಿ ಹಿಡಿದು ಬೆಂಬಲಿಸಿ ನೀಡಿರುವ ಮಹತ್ವದ ತೀರ್ಪಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.