ಚೀನಾ ಮೂಲದ ಖ್ಯಾತ 'ಟಿಕ್ ಟಾಕ್' ಆ್ಯಪ್ ಬ್ಯಾನ್: ಕೇಂದ್ರಕ್ಕೆ ಮದ್ರಾಸ್ ಹೈಕೋರ್ಟ್ ಹೇಳಿದ್ದೇನು?

ಚೀನಾ ಮೂಲದ ಖ್ಯಾತ ಡಬ್ ಸ್ಮಾಶ್ ಆ್ಯಪ್ ಟಿಕ್ ಟಾಕ್ ಅನ್ನು ನಿಷೇಧ ಮಾಡುವ ಕುರಿತು ಮದ್ರಾಸ್ ಹೈಕೋರ್ಟ್ ಕೇಂದ್ರ ಸರ್ಕಾರದ ಸ್ಪಷ್ಟನೆ ಕೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಚೆನ್ನೈ: ಚೀನಾ ಮೂಲದ ಖ್ಯಾತ ಡಬ್ ಸ್ಮಾಶ್ ಆ್ಯಪ್ ಟಿಕ್ ಟಾಕ್ ಅನ್ನು ನಿಷೇಧ ಮಾಡುವ ಕುರಿತು ಮದ್ರಾಸ್ ಹೈಕೋರ್ಟ್ ಕೇಂದ್ರ ಸರ್ಕಾರದ ಸ್ಪಷ್ಟನೆ ಕೇಳಿದೆ.
ಮಧುರೈ ಮೂಲದ ಹಿರಿಯ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಮುತ್ತು ಕುಮಾರ್ ಎಂಬುವವರು ಟಿಕ್ ಟಾಕ್ ಆ್ಯಪ್ ವಿರುದ್ಧ ದೂರು ನೀಡಿದ್ದು, ಆ್ಯಪ್ ಮೂಲಕ ಯುವಕರು ಮತ್ತು ಮಕ್ಕಳಲ್ಲಿ ಆಶ್ಲೀಲತೆಯನ್ನು ಪ್ರಚಾರ ಪಡಿಸಲಾಗುತ್ತಿದೆ. ಹೀಗಾಗಿ ಇದನ್ನು ನಿಷೇಧಿಸಬೇಕು ಎಂದು ದೂರು ಸಲ್ಲಿಕೆ ಮಾಡಿದ್ದರು. ದೂರಿನಲ್ಲಿ ಆ್ಯಪ್ ನ ಮೂಲಕ ಭಾರತೀಯ ಸಂಸ್ಕೃತಿಯ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಮಕ್ಕಳ ಮೇಲೆ ಶೋಷಣೆಯಾಗುತ್ತಿದೆ. ಅಂತೆಯೇ ಆ್ಯಪ್ ಯುವಕರು ಮತ್ತು ಮಕ್ಕಳಲ್ಲಿ ಆತ್ಮಹತ್ಯಾ ಭಾವನೆಯನ್ನು ಬೆಳೆಸುತ್ತಿದೆ. ಹೀಗಾಗಿ ಕೂಡಲೇ ಆ್ಯಪ್ ಅನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ದೂರಿನ ಅರ್ಜಿ ವಿಚಾರಣೆ ನಡೆಸಿದ ಜಸ್ಟಿಸ್ ಎನ್ ಕಿರುಬಕಾರನ್ ಮತ್ತು ಎಸ್ ಎಸ್ ಸುಂದರ್ ಅವರು ಈ ಸಂಬಂಧ ಕೇಂದ್ರ ಸರ್ಕಾರದ ಸ್ಪಷ್ಟನೆ ಕೇಳಿದ್ದು, ಏಪ್ರಿಲ್ 16ರೊಳಗೆ ಆ್ಯಪ್ ನ ನಿಷೇಧ ಕುರಿತು ಉತ್ತರ ನೀಡುವಂತೆ ಸೂಚನೆ ನೀಡಿದೆ.
ಈ ಹಿಂದೆ ಇದೇ ಆ್ಯಪ್ ಕುರಿತು ತಮಿಳುನಾಡು ಸರ್ಕಾರ ಕೂಡ ಆಕ್ಷೇಪ ಎತ್ತಿತ್ತು. ಟಿಕ್ ಟಾಕ್ ಬ್ಯಾನ್ ಮಾಡಲು ತಮಿಳುನಾಡು ಮಾಹಿತಿ ತಂತ್ರಜ್ಞಾನ ಸಚಿವ ಎಂ ಮನಿಕಂಡನ್  ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದರು. ಟಿಕ್ ಟಾಕ್ ಆ್ಯಪ್ ನಲ್ಲಿ ತಮಿಳು ಸಂಸ್ಕೃತಿಯನ್ನು ಅತ್ಯಂತ ಕೀಳು ಮಟ್ಟದಲ್ಲಿ ಬಿಂಬಿಸಲಾಗುತ್ತಿದೆ ಎಂದು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಬ್ಯಾನ್ ಮಾಡುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಟಿಕ್ ಟಾಕ್ ಆ್ಯಪ್ ನಲ್ಲಿ ತಮಿಳು ಸಂಸ್ಕೃತಿಯನ್ನು ಅತ್ಯಂತ ಕೀಳಾಗಿ ಕಾಣಲಾಗುತ್ತಿದೆ. ಇದರಲ್ಲಿ ಪೋರ್ನೊಗ್ರಫಿಯನ್ನು  ಉತ್ತೇಜಿಸಲಾಗುತ್ತಿದೆ. ಇದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವುದು ಹದಗೆಡಲಿದೆ. ಸಾಮಾಜಿಕ ಜವಾಬ್ದಾರಿಯಿಂದ ಸರ್ಕಾರ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಸಚಿವರು ಹೇಳಿದ್ದರು. ಅಂತೆಯೇ ಆ್ಯಪ್ ಬ್ಯಾನ್ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಸಲ್ಲಿಸುವುದಾಗಿ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com