ಶ್ರೀಲಂಕಾ ಉಗ್ರ ದಾಳಿ: ಕೊಯಮತ್ತೂರಿನಲ್ಲಿ ಎನ್ ಐಎ ತೀವ್ರ ತನಿಖೆ, ಶಂಕಿತರು ವಶಕ್ಕೆ!

ಶ್ರೀಲಂಕಾದಲ್ಲಿ ನಡೆದ ಭೀಕರ ಉಗ್ರ ದಾಳಿಗೆ ಸಂಬಂಧಿಸಿದಂತೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ತೀವ್ರ ತನಿಖೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಚೆನ್ನೈ: ಶ್ರೀಲಂಕಾದಲ್ಲಿ ನಡೆದ ಭೀಕರ ಉಗ್ರ ದಾಳಿಗೆ ಸಂಬಂಧಿಸಿದಂತೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ತೀವ್ರ ತನಿಖೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಎನ್ ಐಎ ಅಧಿಕಾರಿಗಳು ಈಗಾಗಲೇ ಕೊಯಮತ್ತೂರಿನಲ್ಲಿ 6 ಮಂದಿ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಬಂಧಿತ ಶಂಕಿತರನ್ನು ಚೆನ್ನೈ ನಿವಾಸಿಗಳಾದ ಇಸ್ಮಾಯಿಲ್, ಮೊಹಮ್ಮದ್ ಅಶಿಕ್, ಶಮ್ಸುದ್ದೀನ್, ಮೊಹಮ್ಮದ್ ಜಲಾಲುದ್ದೀನ್, ಜಾಫರ್ ಸಾದಿಕ್ ಅಲಿ, ಸಹಲ್ ಹಮೀದ್ ಎಂದು ಗುರುತಿಸಲಾಗಿದೆ. 
ಬಂಧಿತರು ಭಾರತದಲ್ಲಿ ಹಿಂದೂ ಪರ ಮುಖಂಡರನ್ನು ಕೊಂದು ಕೋಮುಗಲಭೆ ಸೃಷ್ಟಿಸಲು ದೊಡ್ಡ ಸಂಚು ರೂಪಿಸಿದ್ದರು ಎಂದು ಹೇಳಲಾಗಿದೆ. ಪ್ರಮುಖವಾಗಿ ತಮಿಳುನಾಡಿನ ಹಿಂದೂ ಮಕ್ಕಳ್ ಕಚ್ಚಿ ಸಂಘಟನೆಯ ಅಧ್ಯಕ್ಷ ಅರ್ಜುನ್ ಸಂಪತ್ ಮತ್ತು ಶಕ್ತಿ ಸೇನಾ ಸಂಘಟನೆಯ ಅಧ್ಯಕ್ಷ ಅನ್ಬುಮರಿ ಎಂಬುವವರನ್ನು ಕೊಲ್ಲಲು ಸಂಚು ರೂಪಿಸಿದ್ದರು. ಎನ್ ಐಎ ಅಧಿಕಾರಿಗಳು ಇವರನ್ನು ವಶಕ್ಕೆ ಪಡೆದ ಬಳಿಕವೇ ಇವರಿಗೆ ಅಂತಾರಾಷ್ಟ್ರೀಯ ಕುಖ್ಯಾತ ಉಗ್ರ ಸಂಘಟನೆ ಇಸಿಸ್ ನೊಂದಿಗೆ ನಂಟಿದೆ ಎಂದು ತಿಳಿದುಬಂದಿದೆ.
ಎನ್ ಐಎ ಅಧಿಕಾರಿಗಳು ಚೆನ್ನೈ. ದಿಂಡವಂ ಮತ್ತು ಕೊಯಮತ್ತೂರಿನಲ್ಲಿರುವ ಶಂಕಿತರ ನಿವಾಸಗಳ ಮೇಲೆ ದಾಳಿ ಮಾಡಿದ್ದು, ಈ ವೇಳೆ ಕೆಲ ಪೆನ್ ಡ್ರೈವ್ ಗಳು, ಸಿಡಿ, ಕರಪತ್ರಗಳು, ಕೆಲ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. 
ಕೊಯಮತ್ತೂರಿನಲ್ಲಿ ಲಂಕಾ ಸ್ಫೋಟದ ಸುಳಿವು!
ಇನ್ನು ಇದಕ್ಕೂ ಮೊದಲು ಅಂದರೆ 2018ರಲ್ಲಿ ಕೊಯಮತ್ತೂರಿನಲ್ಲಿ ಎನ್‌ ಐಎ ಅಧಿಕಾರಿಗಳು ನಡೆಸಿದ್ದ ಕಾರ್ಯಾಚರಣೆ ವೇಳೆ ಶಂಕಿತ ಉಗ್ರರಿದ್ದ ಸ್ಥಳದಲ್ಲಿ ಸಿಕ್ಕಿದ ಐಸಿಸ್‌ ಸಾಮಗ್ರಿಗಳು, ವಿಡಿಯೊಗಳು ಭಾರತ ಮತ್ತು ಲಂಕಾದಲ್ಲಿ ನಡೆಯಬಹುದಾದ ಕಾರ್ಯಾಚರಣೆಗಳ ಮುನ್ಸೂಚನೆ ನೀಡಿತ್ತು. ಆಗ ಅಧಿಕಾರಿಗಳು ಏಳು ಮಂದಿ ಶಂಕಿತರನ್ನು ಬಂಧಿಸಿದ್ದರು. ಇದನ್ನು ಆಧರಿಸಿ ಭಾರತ ಕಳೆದ ಡಿಸೆಂಬರ್‌ನಲ್ಲೇ ಶ್ರೀಲಂಕಾಕ್ಕೆ ಎಚ್ಚರಿಕೆ ನೀಡಿತ್ತು. ಅಲ್ಲದೆ ಏಪ್ರಿಲ್‌ ನಲ್ಲಿ ಎರಡು ಬಾರಿ ಮರು ನೆನಪಿಸಿತ್ತು. ಶ್ರೀಲಂಕಾದಲ್ಲಿ ಕಾರ್ಯಾಚರಿಸುತ್ತಿರುವ ನ್ಯಾಷನಲ್‌ ತೌಹೀದ್‌ ಜಮಾತ್‌ (ಎನ್‌ಟಿಜೆ) ಎಂಬ ಸಂಘಟನೆಯ ಮುಖ್ಯಸ್ಥ ಜಹ್ರಾನ್‌ ಹಾಶಿಂ ಎಂಬಾತನೇ ಸಂಚುಕೋರ ಎಂಬುದರ ವಿಡಿಯೊ ದಾಖಲೆ ನೀಡಿತ್ತು. ಆದರೆ ಭಾರತದ ಈ ಮುನ್ನೆಚ್ಚರಿಕೆಯನ್ನು ಶ್ರೀಲಂಕಾ ಸರ್ಕಾರ ನಿರ್ಲಕ್ಷಿಸಿತ್ತು. ಇದೇ ಕಾರಣಕ್ಕೆ ಸರಣಿ ಬಾಂಬ್ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com