ಚೆನ್ನೈ: ಮತ್ತೊಮ್ಮೆ ಜೈಲಿಗೆ ಹೋಗುವ ಆಸೆಯಿಂದ ಬೈಕ್ ಕದ್ದ ಭೂಪ!

ಜೈಲಿನಲ್ಲಿ ಸಿಕ್ಕಿದ ಆರಾಮ ಜೀವನ ಮತ್ತೊಮ್ಮೆ ಸಿಗಬೇಕೆಂದು ಬಯಸಿ ಹತಾಶೆಯಿಂದ ಅಪರಾಧ ಮಾಡಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಚೆನ್ನೈ: ಜೈಲಿನಲ್ಲಿ ಸಿಕ್ಕಿದ ಆರಾಮ ಜೀವನ ಮತ್ತೊಮ್ಮೆ ಸಿಗಬೇಕೆಂದು ಬಯಸಿ ಹತಾಶೆಯಿಂದ ಅಪರಾಧ ಮಾಡಿ ಮತ್ತೆ ಜೈಲು ಸೇರಿದ ಭೂಪನ ಸುದ್ದಿಯಿದು.
ಟೈಮ್ಸ್ ಆಫ್ ಇಂಡಿಯಾದಲ್ಲಿ ಬಂದ ವರದಿ ಪ್ರಕಾರ 52 ವರ್ಷದ ಜ್ಞಾನ ಪ್ರಕಾಶ್ ಎಂಬಾತ ತಪ್ಪು ಮಾಡಿ ಸಿಕ್ಕಿಬಿದ್ದು ಜೈಲು ಸೇರಿದ್ದ. ನಂತರ ಜಾಮೀನಿನ ಮೇಲೆ ಹೊರಬಂದಿದ್ದ. ಮತ್ತೊಮ್ಮೆ ಜೈಲು ಜೀವನ ನಡೆಸಬೇಕೆಂಬ ಆಸೆಯಿಂದ ಕೈಲಾಸಪುರಂನಲ್ಲಿ ರಸ್ತೆಯಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ತನ್ನ ಮುಖ ಸರಿಯಾಗಿ ಕಾಣಿಸುವಂತೆ ಬೈಕ್ ಕದ್ದಿದ್ದ. 
ಜೈಲಿನಲ್ಲಿ ಹೊತ್ತು ಹೊತ್ತಿಗೆ ಸರಿಯಾಗಿ ಊಟ-ತಿಂಡಿ ದೊರೆಯುತ್ತದೆ, ಸ್ನೇಹಿತರು ಸಿಗುತ್ತಾರೆ, ಅವರೊಂದಿಗೆ ಮಜವಾಗಿ ಇರಬಹುದು. ಜೈಲಿನಿಂದ ಹೊರಬಂದ ನಂತರ ಅಲ್ಲಿನ ಆಹಾರ, ಸ್ನೇಹಿತರು ನೆನಪಾಗುತ್ತಿದ್ದರು. ಹೀಗಾಗಿ ಬೈಕ್ ಕಳವು ಮಾಡಿದೆ ಎಂದು ಜ್ಞಾನಪ್ರಕಾಶಮ್ ಹೇಳಿದ್ದಾನೆ ಎಂದು ತಂಬರಂನ ಎಸಿಪಿ ಪಿ ಅಶೋಕನ್ ಹೇಳಿದರು.
ಪೆರುಂಗಲತ್ತೂರು ನಿವಾಸಿಯಾಗಿರುವ ಜ್ಞಾನಪ್ರಕಾಶಮ್ ಕಳೆದ ಮಾರ್ಚ್ ತಿಂಗಳಲ್ಲಿ ಕಳವು ಪ್ರಕರಣದಲ್ಲಿ ಜೈಲು ಸೇರಿ 3 ತಿಂಗಳು ವಿಚಾರಣಾಧೀನ ಕೈದಿಯಾಗಿ ಪುಝಲ್ ಜೈಲಿನಲ್ಲಿ ಕಳೆದಿದ್ದನು. ಜೂನ್ 29ರಂದು ಬಿಡುಗಡೆಯಾದ ನಂತರ ಮನೆಗೆ ಬಂದ ಮೇಲೆ ಆತನ ಪತ್ನಿ ಮತ್ತು ಮಕ್ಕಳು ಯಾವಾಗಲೂ ಜೈಲಿಗೆ ಹೋಗಿ ಬಂದವನು ಎಂದು ನಿಂದಿಸುತ್ತಿದ್ದರಂತೆ.
ಮನೆಯಲ್ಲಿ ಜೀವನ ಮಾಡಲು ಕಷ್ಟವಾಗುತ್ತಿತ್ತು. ಹೀಗಾಗಿ ಮತ್ತೊಮ್ಮೆ ಜೈಲಿಗೆ ಹೋಗುವ ಆಸೆಯಿಂದ ಬೈಕ್ ಕದ್ದು ನಗರದಲ್ಲೆಲ್ಲಾ ಸುತ್ತಾಡುತ್ತಾ ತಂಬರಂನಲ್ಲಿ ಮತ್ತೊಂದು ಬೈಕ್ ನಿಂದ ಪೆಟ್ರೋಲ್ ಕದಿಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ನಂತರ ದಾರಿಹೋಕರು ಆತನನ್ನು ಪೊಲೀಸರಿಗೆ ಒಪ್ಪಿಸಿದಾಗ ಬೈಕ್ ಕೂಡ ಕದ್ದು ತಂದಿದ್ದು ಎಂದು ನಿಜ ಸಂಗತಿಯನ್ನು ಹೇಳಿದ್ದಾನೆ. 
ತಮ್ಮ ಬೈಕ್ ಕಳವಾಗಿದೆ ಎಂದು ಕೆಲ ದಿನಗಳ ಹಿಂದೆ ಬೈಕ್ ಮಾಲೀಕ ದೂರು ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com