

ನವದೆಹಲಿ: ಎಲೆಕ್ಟೊರಲ್ ಬಾಂಡ್ ಕುರಿತು ಕೇಂದ್ರ ಸರ್ಕಾರ ವಿರುದ್ಧ ಬೀದಿಗಳಿದು ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್, ಸರ್ಕಾರ ಸುಳ್ಳಿನ ಫ್ಯಾಕ್ಟರಿಯಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮೌನ ಮುರಿಯಬೇಕು ಎಂದು ಒತ್ತಾಯಿಸಿದೆ.
ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕ ಗುಲಾಂ ನಬಿ ಆಜಾದ್, ಲೋಕಸಭೆಯ ಕಾಂಗ್ರೆಸ್ ನಾಯಕ ಅಧಿರ್ ರಂಜನ ಚೌಧರಿ, ಆನಂದ್ ಶರ್ಮಾ, ಶಶಿ ತರೂರ್, ಮನೀಶ್ ತಿವಾರಿ ಮೊದಲಾದವರು ಇಂದು ಬೆಳಗ್ಗೆ ಸಂಸತ್ತು ಭವನದ ಆವರಣದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಅಕ್ರಮವಾಗಿ ಮಾರಾಟ ಮಾಡಿದ ಕಾಲಾವಧಿ ಮುಗಿದಿದ್ದ ಎಲೆಕ್ಟೊರಲ್ ಬಾಂಡ್ ಗಳನ್ನು ಎಸ್ ಬಿಐ ಸ್ವೀಕರಿಸುವಂತೆ ಸರ್ಕಾರ ಮಾಡಿದ್ದು ಇದಕ್ಕೆ ಪೂರಕವಾಗಿ ಮಾಧ್ಯಮ ವರದಿಯನ್ನು ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸುರ್ಜೆವಾಲ ಟ್ವೀಟ್ ಮಾಡಿ ಸರ್ಕಾರ ಸುಳ್ಳಿನ ಫ್ಯಾಕ್ಟರಿಯಾಗಿದೆ ಎಂದು ಆರೋಪಿಸಿದ್ದಾರೆ.
ಸರ್ಕಾರ ಸಮಿತಿಯನ್ನು ರಚಿಸಿ ಎಲೆಕ್ಟೊರಲ್ ಬಾಂಡ್ ಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡಬೇಕು. ಚುನಾವಣೆಗೆ ಹಣ ಸಂಗ್ರಹಿಸಲು ಬಿಜೆಪಿಯ ತಿಜೋರಿ ತುಂಬಿಸಲು ನಡೆಸುತ್ತಿರುವ ಕುತಂತ್ರವಿದು ಎಂದು ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಆರೋಪಿಸಿದ್ದಾರೆ.
ಏನಿದು ಎಲೆಕ್ಟೊರಲ್ ಬಾಂಡ್: ಈ ಯೋಜನೆಯಡಿ ಹಣ ನೀಡುವ ದಾನಿ ಅನಾಮಧೇಯನಾಗಿ ಬಾಂಡ್ ಗಳನ್ನು ಖರೀದಿಸಿ ತಮ್ಮ ಇಚ್ಛೆಯ ಪಕ್ಷದ ಖಾತೆಯಲ್ಲಿ ಹೂಡಿಕೆ ಮಾಡಬಹುದು. ಈ ಬಾಂಡ್ ನಡಿ ದೇಣಿಗೆ ನೀಡುವವರ ಹೆಸರುಗಳನ್ನು ಸರ್ಕಾರ ಸಂಪೂರ್ಣವಾಗಿ ಅನಾಮಧೇಯವಾಗಿಡುತ್ತದೆ.
ಎಲೆಕ್ಟೊರಲ್ ಬಾಂಡ್ ಕಪ್ಪು ಹಣವನ್ನು ಸಕ್ರಮ ಮಾಡುವ ಒಂದು ಸಾಧನ, ಎಲೆಕ್ಟೊರಲ್ ಬಾಂಡ್ ತನಿಖೆಗೆ ಸರ್ಕಾರ ತನಿಖಾ ಸಮಿತಿಯನ್ನು ರಚಿಸಬೇಕು. ಎಲೆಕ್ಟೊರಲ್ ಬಾಂಡ್ ಪರಿಕಲ್ಪನೆಯನ್ನು ರಿಸರ್ವ್ ಬ್ಯಾಂಕ್ ಮತ್ತು ಭಾರತೀಯ ಚುನಾವಣಾ ಆಯೋಗ ವಿರೋಧಿಸಿತ್ತು ಎಂದು ಚೌಧರಿ ಹೇಳಿದರು.