ಮೆಟ್ರೋಗಾಗಿ 2,500 ಮರಗಳ ಮಾರಣ ಹೋಮ: ಅರೆ ಕಾಲೋನಿಯಲ್ಲಿ ತೀವ್ರಗೊಂಡ ಪ್ರತಿಭಟನೆ, ಸೆಕ್ಷನ್ 144 ಜಾರಿ

ವಾಣಿಜ್ಯ ನಗರಿ ಮುಂಬೈನ ಅರೆ ಪ್ರದೇಶದಲ್ಲಿ ಮೆಟ್ರೋ ಕಾಮಗಾರಿಗಾಗಿ ಸುಮಾರು 2,500ಕ್ಕೂ ಹೆಚ್ಚು ಮರಗಳನ್ನು ಕಡಿಯಲು ಹೈಕೋರ್ಟ್ ಅನುಮತಿ ನೀಡಿದ ಹಿನ್ನಲೆಯಲ್ಲಿ ರಾತ್ರೋರಾತ್ರಿ ಮರಗಳನ್ನು ಕಡಿಯಲು ಮುಂದಾದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಭಾರೀ ಪ್ರತಿಭಟನೆ ನಡೆಸುತ್ತಿದ್ದು...
ಮೆಟ್ರೋಗಾಗಿ 2,500 ಮರಗಳ ಮಾರಣ ಹೋಮ
ಮೆಟ್ರೋಗಾಗಿ 2,500 ಮರಗಳ ಮಾರಣ ಹೋಮ

ಮುಂಬೈ: ವಾಣಿಜ್ಯ ನಗರಿ ಮುಂಬೈನ ಅರೆ ಪ್ರದೇಶದಲ್ಲಿ ಮೆಟ್ರೋ ಕಾಮಗಾರಿಗಾಗಿ ಸುಮಾರು 2,500ಕ್ಕೂ ಹೆಚ್ಚು ಮರಗಳನ್ನು ಕಡಿಯಲು ಹೈಕೋರ್ಟ್ ಅನುಮತಿ ನೀಡಿದ ಹಿನ್ನಲೆಯಲ್ಲಿ ರಾತ್ರೋರಾತ್ರಿ ಮರಗಳನ್ನು ಕಡಿಯಲು ಮುಂದಾದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಭಾರೀ ಪ್ರತಿಭಟನೆ ನಡೆಸುತ್ತಿದ್ದು, ಈ ಹಿನ್ನಲೆಯಲ್ಲಿ ಸ್ಥಳದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ ಎಂದು ಶನಿವಾರ ತಿಳಿದುಬಂದಿದೆ. 

ಮುಂಬೈ ಮೆಟ್ರೋ ಡಿಪೋ ನಗರದಲ್ಲಿರುವ 2,500ಕ್ಕೂ ಹೆಚ್ಚು ಮರಗಳನ್ನು ಕಡಿಯಲು ಉದ್ದೇಶಿಸಲಾಗಿತ್ತು. ಆದರೆ, ಇದನ್ನು ವಿರೋಧಿಸಿ ಪರಿಸರವಾದಿಗಳು ಹಾಗೂ ಸ್ಥಳೀಯ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮುಂಬೈ ಹೈಕೋರ್ಟ್ ವಜಾಗೊಳಿಸಿತ್ತು. 

ಹೀಗಾಗಿ ಅಧಿಕಾರಿಗಳು ರಾತ್ರೋರಾತ್ರಿ ಮರ ಕಡಿಯುವ ಕಾರ್ಯಕ್ಕೆ ಮುಂದಾಗಿದ್ದರು. ಈ ವೇಳೆ ಇದನ್ನು ವಿರೋಧಿಸಿ ಸ್ಥಳೀಯರು ಬೀದಿಗಿಳಿದು ಪ್ರತಿಭಟನೆ ನಡೆಸಲು ಆರಂಭಿಸಿದ್ದರು. ಪರಿಣಾಮ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ ಎಂದು ವರದಿಗಳು ತಿಳಿಸಿವೆ. 

ಅರೆ ಕಾಲೋನಿ ಹಾಗೂ ಗೊರೆಗಾಂವ್ ಚೆಕ್ ಪೋಸ್ಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದ್ದು, ಮರಗಳನ್ನು ಕಡಿಯುವ ವೇಳೆ ಪ್ರತಿಭಟನೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ 60 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮುಂಬೈ ಪೊಲೀಸ್ ವಕ್ತಾರರು ಹೇಳಿದ್ದಾರೆ. 

ಇದರಲ್ಲಿ 38 ಪ್ರತಿಭಟನಾಕಾರರ ಮೇಲೆ ಸೆಕ್ಷನ್ 353, 332, 143 ಮತ್ತು 149 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. 

ಸ್ಥಳದಲ್ಲಿ ಸಾಕಷ್ಟು ಜನರು ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾಕಾರರನ್ನು ಚದುರಿಸುವ ಕಾರ್ಯ ನಡೆಯುತ್ತಿದೆ. ಸ್ಥಳದ ಸುತ್ತಲೂ ಪೊಲೀಸರು ಸರ್ಪಗಾವಲು ಹಾಕಲಾಗಿದ್ದು, ಸ್ಥಳಕ್ಕೆ ತೆರಳಲು ಜನರಿಗೆ ಅವಕಾಶ ನೀಡಲಾಗುತ್ತಿಲ್ಲ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com