ಭಾರತದ ಆರ್ಥಿಕ ಬೆಳವಣಿಗೆ ಶೇ 6ಕ್ಕೆ ಕುಸಿಯಲಿದೆ: ವಿಶ್ವಬ್ಯಾಂಕ್
ವಾಷಿಂಗ್ಟನ್: ಭಾರತದ ಆರ್ಥಿಕ ಬೆಳವಣಿಗೆ ಪ್ರಮಾಣ ಶೇ 6ಕ್ಕೆ ಕುಸಿಯಲಿದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ.
ದಕ್ಷಿಣ ಏಷ್ಯಾ ರಾಷ್ಟ್ರಗಳ ಆರ್ಥಿಕತೆಯನ್ನು ಕೇಂದ್ರೀಕರಿಸಿ ವಿಶ್ವಬ್ಯಾಂಕ್ ದ್ವೈವಾರ್ಷಿಕ ವರದಿ ಸಿದ್ಧಪಡಿಸಲಾಗುತ್ತಿದ್ದು, 2018–19ನೇ ವಿತ್ತೀಯ ವರ್ಷದಲ್ಲಿ ದೇಶದ ಆರ್ಥಿಕ ವೃದ್ಧಿ ದರವು ಶೇ 6.9ರಷ್ಟು ದಾಖಲಾಗಿದೆ ಎನ್ನಲಾಗಿದೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಜತೆಗಿನ ಸಭೆಯ ಹಿನ್ನೆಲೆಯಲ್ಲಿ ವಿಶ್ವಬ್ಯಾಂಕ್ ಈ ವರದಿ ಬಿಡುಗಡೆ ಮಾಡಿದೆ. 2017-18ನೇ ವತ್ತೀಯ ವರ್ಷದಲ್ಲಿ ಶೇ 7.2ರಷ್ಟಿದ್ದ ಆರ್ಥಿಕ ವೃದ್ಧಿ ದರವು 2018–19ರಲ್ಲಿ ಶೇ 6.8 ದಾಖಲಾಗಿದೆ. ಉತ್ಪಾದನೆ ಮತ್ತು ನಿರ್ಮಾಣ ಚಟುವಟಿಕೆಗಳು ಚೇತರಿಸಿಕೊಂಡಿರುವುದರಿಂದ ಕೈಗಾರಿಕಾ ಉತ್ಪಾದನೆ ವೃದ್ಧಿ ದರ ಶೇ 6.9ಕ್ಕೆ ಏರಿಕೆ ಕಂಡಿದೆ. ಕೃಷಿ ಮತ್ತು ಸೇವಾ ವಲಯಗಳಲ್ಲಿನ ವೃದ್ಧಿ ದರವು ಕ್ರಮವಾಗಿ ಶೇ 2.9 ಮತ್ತು ಶೇ 7.5ರಷ್ಟು ಎಂದಿದೆ. 2019–20ರ ಮೊದಲ ತ್ರೈಮಾಸಿಕದಲ್ಲಿ ಬೇಡಿಕೆ ಕುಸಿತದಿಂದಾಗಿ ಕೈಗಾರಿಕೆ ಮತ್ತು ಸೇವಾ ವಲಯದ ಪೂರೈಕೆ ವಲಯ ಕುಂಠಿತ ಕಂಡಿರುವುದಾಗಿ ವಿಶ್ವಬ್ಯಾಂಕ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ 2018ರ ಮಾರ್ಚ್‌ನಿಂದ ಅಕ್ಟೋಬರ್ ವರೆಗೂ ಶೇ 12.1ರಷ್ಟು ಕುಸಿದಿತ್ತು. ಆದರೆ ಬಳಿಕ ಅಂದರೆ 2019ರ ಮಾರ್ಚ್ ವರೆಗೂ ಶೇ 7ರಷ್ಟು ಏರಿಕೆ ಕಂಡಿತ್ತು ಎಂದು ವರದಿಯಲ್ಲಿ ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ