ದುಬಾರಿ ಸಂಚಾರಿ ದಂಡಕ್ಕೆ 'ದೇಸೀ ಉಪಾಯ'; ಬೇಸ್ತು ಬಿದ್ದ ಟ್ರಾಫಿಕ್ ಪೊಲೀಸರು!
ಹೆಲ್ಮೆಟ್ ಇಲ್ಲದೆ ಗಾಡಿ ಓಡ್ಸೋದ್ ತಪ್ಪು, ಆದ್ರೆ.. ತಳ್ಕೊಂಡ್ ಹೋಗೋದ್ ತಪ್ಪಲ್ಲ ಅಲ್ವಾ..!
ನವದೆಹಲಿ: ದೇಶಾದ್ಯಂತ ಜಾರಿಯಾಗಿರುವ ನೂತನ ಸಂಚಾರಿ ನಿಯಮಗಳಿಂದಾಗಿ ದುಬಾರಿ ದಂಡಕ್ಕೆ ಜನ ಕಂಗಾಲಾಗಿದ್ದಾರೆಯಾದರೂ, ಅತ್ತ ದುಬಾರಿ ದಂಡ ತಪ್ಪಿಸಿಕೊಳ್ಳಲು ಅಲ್ಲಿನ ಬೈಕ್ ಸವಾರರು ಮಾಡಿರುವ ದೇಸೀ ಉಪಾಯಕ್ಕೆ ಟ್ರಾಫಿಕ್ ಪೊಲೀಸರೇ ಬೇಸ್ತು ಬಿದ್ದಿದ್ದಾರೆ.
ಹೌದು.. ನೂತನ ಸಂಚಾರಿ ನಿಯಮಗಳ ಅನ್ವಯ ಹೆಲ್ಮೆಟ್ ಇಲ್ಲದೆ ಗಾಡಿ ಚಲಾಯಿಸುವುದು, ಅಗತ್ಯ ದಾಖಲೆಗಳಲ್ಲಿದೇ ಇರುವುದು ಕೂಡ ಅಪರಾಧ. ಇಂತಹ ಪ್ರಕರಣಗಳಲ್ಲಿಗೆ ಟ್ರಾಫಿಕ್ ಪೊಲೀಸರು ದುಬಾರಿ ದಂಡ ವಿಧಿಸುತ್ತಿದ್ದಾರೆ. ಈ ಹಿಂದೆ 500 ರೂ ದಂಡ ವಿಧಿಸುತ್ತಿದ್ದ ಪ್ರಕರಣಗಳಿಗೆ ಇದೀಗ ಕನಿಷ್ಛ 2 ಸಾವಿರ ರೂ ದಂಡ ಹೇರಲಾಗುತ್ತಿದೆ. ನಿನ್ನೆ ದೇಶಾದ್ಯಂತ ಭಾರಿ ಮೊತ್ತದ ದಂಡ ವಸೂಲಾಗಿದೆ.
ಆದರೆ ಇಂತಹ ದುಬಾರಿ ದಂಡದ ಸುದ್ದಿಗಳ ನಡುವೆಯೇ ಬೈಕ್ ಸವಾರರು ಮಾಡಿರುವ ದೇಸೀ ಉಪಾಯಕ್ಕೆ ಪೊಲೀಸರೇ ಬೇಸ್ತು ಬಿದ್ದಿದ್ದಾರೆ. ಈ ಕುರಿತ ಹಾಸ್ಯಾತ್ಮಕ ವಿಡಿಯೋವೊಂದನ್ನು ಗುರುಗ್ರಾಮದ ಐಪಿಎಸ್ ಅಧಿಕಾರಿ ಪಂಕಜ್ ನೈನ್ ಅವರು ಶೇರ್ ಮಾಡಿಕೊಂಡಿದ್ದು, ವಿಡಿಯೋದಲ್ಲಿ ರಸ್ತೆಯಲ್ಲಿ ಸಂಚಾರಿ ಪೊಲೀಸರು ಬೈಕ್ ಗಳನ್ನು ನಿಲ್ಲಿಸಿ ಪರಿಶೀಲನೆ ನಡೆಸುತ್ತಿದ್ದರೆ, ಅತ್ತ ಹಿಂದೆ ಪೊಲೀಸರ ಇರುವಿಕೆ ಕಂಡ ಬೈಕ್ ಸವಾರರು ಬೈಕ್ ನಿಂದ ಇಳಿದು ಬೈಕ್ ಅನ್ನು ಪೊಲೀಸರ ಮುಂದೆಯೇ ತಳ್ಳಿ ಕೊಂಡು ಹೋಗುತ್ತಿದ್ದಾರೆ.
ಅರೆ ಒಬ್ಬರೋ ಇಬ್ಬರೋ ಬೈಕ್ ತಳ್ಳಿಕೊಂಡು ಹೋದರೆ ಪೆಟ್ರೋಲ್ ಖಾಲಿಯೋ ಅಥವಾ ಬೈಕ್ ನ ತಾಂತ್ರಿಕ ಸಮಸ್ಯೆಯೋ ಎಂದುಕೊಳ್ಳಬಹುದು. ಆದರೆ ಆ ರಸ್ತೆಯಲ್ಲಿ ಬರುತ್ತಿದ್ದ ಎಲ್ಲ ಬೈಕ್ ಸವಾರರೂ ಬೈಕ್ ಗಳನ್ನು ತಳ್ಳಿಕೊಂಡು ಬರುತ್ತಿದ್ದಾರೆ. ಸಂಚಾರಿ ನಿಯಮದ ಪ್ರಕಾರ ಹೆಲ್ಮೆಟ್ ಇಲ್ಲದೆ ಬೈಕ್ ಸವಾರಿ ಮಾಡುವುದು ಅಪರಾಧ. ಆದರೆ ಹೆಲ್ಮೆಟ್ ಇಲ್ಲದೇ ಬೈಕ್ ತಳ್ಳುವುದು ಅಪರಾಧವಲ್ಲ. ಇದೇ ಕಾರಣಕ್ಕೆ ಬೈಕ್ ಸವಾರರು ಸಾಮೂಹಿಕವಾಗಿ ಬೈಕ್ ಗಳನ್ನು ತಳ್ಳಿಕೊಂಡು ಬರುತ್ತಿದ್ದಾರೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಬೈಕ್ ಸವಾರರ ದೇಸೀ ಉಪಾಯಕ್ಕೆ ಟ್ವೀಟಿಗರು ಬಿದ್ದು ಬಿದ್ದು ನಗುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ