ಭಾರತದ ಎಸ್ಯಾಟ್ ಕ್ಷಿಪಣಿ ಪರೀಕ್ಷೆಯಿಂದ ಅಪಾಯವಿದೆ ಎಂಬ ನಾಸಾ ಆರೋಪ ಸುಳ್ಳು: ವಿಜ್ಞಾನಿಗಳು ಮತ್ತು ತಜ್ಞರ ಅಭಿಮತ

ಕಳೆದ ವಾರ ಭಾರತದ ಉಪಗ್ರಹ ನಿಗ್ರಹ ಕ್ಷಿಪಣಿ ಪರೀಕ್ಷೆಯಿಂದ ಅಂತರಿಕ್ಷದಲ್ಲಿ ಅವಶೇಷ ಸೃಷ್ಟಿಯಾಗಿ...
ಮಿಷನ್ ಶಕ್ತಿ ಉಪಗ್ರಹ ನಿಗ್ರಹ ಪರೀಕ್ಷೆಯಲ್ಲಿ ಬಳಸಲಾದ ಕ್ಷಿಪಣಿ
ಮಿಷನ್ ಶಕ್ತಿ ಉಪಗ್ರಹ ನಿಗ್ರಹ ಪರೀಕ್ಷೆಯಲ್ಲಿ ಬಳಸಲಾದ ಕ್ಷಿಪಣಿ
ಚೆನ್ನೈ: ಕಳೆದ ವಾರ ಭಾರತದ ಉಪಗ್ರಹ ನಿಗ್ರಹ ಕ್ಷಿಪಣಿ ಪರೀಕ್ಷೆಯಿಂದ ಅಂತರಿಕ್ಷದಲ್ಲಿ ಅವಶೇಷ ಸೃಷ್ಟಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ(ಐಎಸ್ಎಸ್) ಅಪಾಯವುಂಟಾಗಿದೆ ಎಂದು ನಾಸಾ ಆರೋಪವನ್ನು ಭಾರತದ ರಕ್ಷಣೆ ಮತ್ತು ಅಂತರಿಕ್ಷ ಕೇಂದ್ರದ ವಿಜ್ಞಾನಿಗಳು ತಳ್ಳಿ ಹಾಕಿದ್ದಾರೆ.
ಭಾರತದ ಎ-ಸ್ಯಾಟ್ ಪರೀಕ್ಷೆ ಭಯಾನಕ ಮತ್ತು ಅತ್ಯಂತ ಅಪಾಯಕಾರಿ, ಅಂತರಿಕ್ಷ ಕಕ್ಷೆಯಲ್ಲಿ ಸುಮಾರು 400 ಚೂರುಗಳು ಅವಶೇಷಗಳು ಸೃಷ್ಟಿಯಾಗಿದ್ದು ಅವುಗಳಲ್ಲಿ 24 ಚೂರುಗಳು ಅಂತಾರಾಷ್ಟ್ರೀಯ ಅಂತರಿಕ್ಷ ಕೇಂದ್ರದ ಪರಿಧಿಯ ಮೇಲೆ ಇದೆ. 10 ದಿನಗಳ ಅವಧಿಯಲ್ಲಿ ಖಗೋಳವಿಜ್ಞಾನಿಗಳ ಅಪಾಯದ ಮಟ್ಟ ಶೇಕಡಾ 44ರಷ್ಟು ಏರಿಕೆಯಾಗಿದೆ, ಜೀವಸಂಕುಲಕ್ಕೆ ತೊಂದರೆಯಿದೆ ಎಂದು ನಾಸಾ ಆಡಳಿತ ವಿಭಾಗದ ಮುಖ್ಯಸ್ಥ ಜಿಮ್ ಬ್ರಿಡೆನ್ಸ್ಟೈನ್ ಹೇಳಿದ್ದರು.
ಉತ್ತರ ಅಮೆರಿಕಾದ ಅಂತರಿಕ್ಷಯಾನ ರಕ್ಷಣಾ ಕಮಾಂಡ್ ಇತ್ತೀಚೆಗೆ ಅವಶೇಷಗಳನ್ನು 45 ದಿನಗಳಲ್ಲಿ ವಿಭಜನೆ ಮಾಡಲಾಗುವುದು ಎಂದು ಹೇಳಿರುವಾಗ ಈ ಟೀಕೆಗಳು ಅಚ್ಚರಿಯ ಹೇಳಿಕೆಯಾಗಿದೆ.
ಅಮೆರಿಕಾ ವಾಯುಪಡೆ ಅಂತರಿಕ್ಷ ಕಮಾಂಡ್ ನ ಉಪ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಡೇವಿಡ್ ಥಾಮ್ಸನ್, ಅಮೆರಿಕಾ ಸೆನೆಟ್ ಸೇನಾ ಸೇವಾ ಸಮಿತಿಯ ಉಪ ಸಮಿತಿ ಮುಂದೆ ಹೇಳಿಕೆ ನೀಡಿ, ಭಾರತ ಪರೀಕ್ಷೆ ನಡೆಸಿದ ತಕ್ಷಣ ಅಮೆರಿಕಾ ಖಗೋಳ ಸಂಸ್ಥೆಗಳು ಉಡ್ಡಯನ ವಾಹಕ ಮುರಿದು ಹೋದ ಬಗ್ಗೆ ಮಾಹಿತಿಗಳನ್ನು ಕಲೆಹಾಕಿದ್ದು ಅವಶೇಷಗಳು ಕಂಡುಬಂದ ಸ್ಥಳದಲ್ಲಿ ಸುಮಾರು 270 ವಿವಿಧ ವಸ್ತುಗಳನ್ನು ಪತ್ತೆಹಚ್ಚಲಾಗಿದೆ ಎಂದಿದ್ದಾರೆ.
ಅವಶೇಷಗಳಿಂದ ಅಂತಾರಾಷ್ಟ್ರೀಯ ಅಂತರಿಕ್ಷ ಕೇಂದ್ರಕ್ಕೆ ಯಾವುದೇ ತಕ್ಷಣದ ಅಪಾಯವಿಲ್ಲ ಮತ್ತು ಇತರ ಬಹುತೇಕ ಉಪಗ್ರಹಗಳು ಕೆಳ ಭೂಸ್ಥಿರ ಕಕ್ಷೆಯಲ್ಲಿದೆ ಎಂದು ಲೆಫ್ಟಿನೆಂಟ್ ಜನರಲ್ ಡೇವಿಡ್ ಥಾಮ್ಸನ್ ಸಮಿತಿ ಮುಂದೆ ಹೇಳಿಕೆ ನೀಡಿದ್ದಾರೆ.
ಭಾರತದ ಡಿಆರ್ ಡಿಒ ಮಾಜಿ ಮುಖ್ಯ ಕಂಟ್ರೋಲರ್ ಡಬ್ಲ್ಯು ಸೆಲ್ವಮೂರ್ತಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಪ್ರತಿಕ್ರಿಯೆ ನೀಡಿ ನಾಸಾ ಮುಖ್ಯಸ್ಥರ ಹೇಳಿಕೆ ತಾರತಮ್ಯತೆಯಿಂದ ಕೂಡಿದೆ ಎಂದಿದ್ದಾರೆ.
ಇದೇ ರೀತಿಯ ಪರೀಕ್ಷೆಗಳನ್ನು ಅಮೆರಿಕಾ, ರಷ್ಯಾ ಮತ್ತು ಚೀನಾ ದೇಶಗಳು ಹಿಂದೆ ನಡೆಸಿದ್ದಾಗ ಉಂಟಾಗಿದ್ದ ಚೂರುಗಳ ಅವಶೇಷಗಳಿಗೆ ಹೋಲಿಸಿದರೆ ಭಾರತದ ಪರೀಕ್ಷೆಯಿಂದ ಉಂಟಾದ ಅವಶೇಷಗಳು ತುಂಬಾ ಕಡಿಮೆ. ಅಲ್ಲದೆ ನಮ್ಮ ಪರೀಕ್ಷೆಯನ್ನು 300 ಕಿಲೋ ಮೀಟರ್ ಎತ್ತರದಲ್ಲಿ ನಡೆಸಲಾಗಿದ್ದು ಅದು ಅಂತಾರಾಷ್ಟ್ರೀಯ ಅಂತರಿಕ್ಷ ಕೇಂದ್ರದಿಂದ ಮತ್ತು ಭಾರತ ಮತ್ತು ಬೇರೆ ದೇಶಗಳ ಕಾರ್ಯಾತ್ಮಕ ಅಂತರಿಕ್ಷ ವಸ್ತುಗಳಿಂದ ಬಹಳ ಕೆಳಗೆ ಇದೆ. ಅವಶೇಷಗಳು ಭೂಮಿಯ ವಾತಾವರಣದೊಳಗೆ ಪ್ರವೇಶಿಸಿ ಸುಟ್ಟು ಹೋಗುತ್ತದೆ ಎಂದು ಸೆಲ್ವಮೂರ್ತಿ ಹೇಳಿದ್ದಾರೆ. ಇದರ ಹಿಂದೆ ಅಮೆರಿಕಾದ ಕುತಂತ್ರವಿದೆ ಎಂದು ಅವರು ಆರೋಪಿಸಿದರು.
ಇಂತಹ ಹೇಳಿಕೆಗಳಿಗೆ ಭಾರತ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಇಂತಹ ಲಜ್ಜೆಗೆಟ್ಟ ಹೇಳಿಕೆಗಳಿಂದ ಅಮೆರಿಕಾ-ಭಾರತದ ದ್ವಿಪಕ್ಷೀಯ ಸಂಬಂಧಗಳಿಗೆ ಧಕ್ಕೆಯುಂಟಾಗಲಿದೆ ಎಂದಿದ್ದಾರೆ.
ಈ ಮಧ್ಯೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಮೇಲೆ 24 ಚೂರುಗಳು ಪತ್ತೆಯಾಗಿದೆ ಎಂಬ ಹೇಳಿಕೆಯ ಸತ್ಯಾಸತ್ಯತೆ ಬಗ್ಗೆ ಇಸ್ರೊ ಅಧಿಕಾರಿಯೊಬ್ಬರು ಪ್ರಶ್ನೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com