ತಮಿಳುನಾಡಿಗೆ 9.19 ಟಿಎಂಸಿ ನೀರು ಬಿಡಿ: ರಾಜ್ಯಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ

ತಮಿಳುನಾಡಿಗೆ 9.19 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಸಿ) ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ತಮಿಳುನಾಡಿಗೆ 9.19 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಸಿ) ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿದೆ.

ದೆಹಲಿಯ ಸೇವಾ ಭವನದಲ್ಲಿರುವ ಜಲ ಆಯೋಗದ ಕಚೇರಿಯಲ್ಲಿ ಇಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಿತು. ಕಾವೇರಿ ಕೊಳ್ಳದ ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಸಭೆಯ ಬಳಿಕ ಜೂನ್ ತಿಂಗಳಲ್ಲಿ ಬಿಡಬೇಕಾಗಿರುವ 9.19 ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ಸಿಡಬ್ಲ್ಯೂಸಿ ಕರ್ನಾಟಕ ಸರ್ಕಾರಕ್ಕೆ ಸೂಚಿಸಿದೆ.

ಕಾವೇರಿ ನದಿ ನೀರು ಪ್ರಾಧಿಕಾರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷ ಮಸೂದ್ ಹುಸೇನ್, ತಮಿಳುನಾಡಿಗೆ ಜೂನ್ ತಿಂಗಳಲ್ಲಿ ಬಿಡಬೇಕಾದ ನೀರನ್ನು ಹರಿಸಲು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಜೂನ್ ತಿಂಗಳ ಅಂತ್ಯದ ಒಳಗೆ 10 ದಿನಕ್ಕೊಮ್ಮೆ 3 ಟಿಎಂಸಿ ಯಂತೆ ನೀರು ಹರಿಸಬೇಕು. ಮುಂಗಾರು ಮಳೆ ತಡವಾದರೆ ಮುಂದೆ ಬಿಡಬೇಕಾದ ನೀರಿನ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.

ಕರ್ನಾಟಕ 9.19 ಟಿಎಂಸಿ ನೀರನ್ನು ಜೂನ್ ಅಂತ್ಯದೊಳಗೆ ತಮಿಳುನಾಡಿಗೆ ಹರಿಸಬೇಕಿದೆ. ಪುದುಚೇರಿ ಹಾಗು ತಮಿಳುನಾಡಿನ ಕೋಟಾ ಮೊದಲಿನಂತೆ ಉಳಿಯಲಿದೆ. ಈ ಭಾರಿ ಕರ್ನಾಟಕದಲ್ಲಿ ಮುಂಗಾರು ಎಂದಿನಂತೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಕರ್ನಾಟಕ ಕೂಡ ತಕರಾರಿಲ್ಲದೆ ನೀರು ಬಿಡುಗಡೆಗೆ ಸಮ್ಮತಿಸಿದೆ ಎಂದು ಮಸೂದ್ ಹುಸೇನ್ ತಿಳಿಸಿದರು .

ಕಾವೇರಿ ನದಿಯಲ್ಲಿ ಒಳ ಹರಿವು ಸಾಮಾನ್ಯವಾಗಿರುತ್ತದೆ ಎಂದು ಭಾವಿಸಿಕೊಂಡು ನೀರು ಹರಿಸಲು ಪ್ರಾಧಿಕಾರ ಆದೇಶ ಮಾಡಿದೆ ಎನ್ನಲಾಗಿದೆ. ಇಂದಿನ ಆದೇಶವನ್ನು ಒಳ ಹರಿವಿನ‌ ಆಧಾರದಲ್ಲಿ ಮುಂದಿನ‌ ಸಭೆಯಲ್ಲಿ ಚರ್ಚಿಸಿ ಪರಿಶೀಲಿಸಲಾಗುತ್ತದೆ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಕಾವೇರಿ ಕೊಳ್ಳದ ಜಲಾಶಯಗಳಲ್ಲಿ 14. 5 ಟಿಎಂಸಿ ನೀರು ಮಾತ್ರ ಬಳಕೆಗೆ ಲಭ್ಯವಿದೆ. ಕೆಆರ್ ಎಸ್ ಜಲಾಶಯದಿಂದ 6.9 ಟಿಎಂಸಿ, ಕಬಿನಿಯಿಂದ  2.93 ಟಿಎಂಸಿ, ಹಾರಂಗಿಯಿಂದ  1.35 ಟಿಎಂಸಿ  ನೀರು ಮಾತ್ರ ಬಳಕೆಗೆ ಲಭ್ಯವಿದೆ.

ಎಂ.ಬಿ.ಪಾಟೀಲ್ ಪ್ರತಿಕ್ರಿಯೆ:
ಕಾವೇರಿ ನದಿ ನೀರು ಪ್ರಾಧಿಕಾರ ಆದೇಶದ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಎಂ.ಬಿ.ಪಾಟೀಲ್, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ನೀರು ಹರಿಸಬೇಕಾಗುತ್ತದೆ. ಆದೇಶದ ಬಗ್ಗೆ ಆತಂಕ ಪಡುವ ವಿಚಾರ ತೀರ್ಪಿನಲ್ಲಿಲ್ಲ. ಮಳೆ ಹಾಗೂ ನೀರಿನ ಒಳಹರಿವು ಆಧಾರಿಸಿ ನೀರು ಬಿಡುಗಡೆ ಮಾಡಲು ಸೂಚಿಸಿದ್ದಾರೆ. ಸ್ವಾಭಾವಿಕ ವರ್ಷದಲ್ಲಿ ನೀರನ್ನು ಬಿಡುಗಡೆ ಮಾಡುತ್ತೇವೆ. ಬರಗಾಲದಂತಹ ತುರ್ತು ಸಮಯದಲ್ಲಿ ಸಂಕಷ್ಟ ನಿರ್ವಹಣಾ ಸೂತ್ರದಂತೆ ನಡೆದುಕೊಳ್ಳುತ್ತೇವೆ. ದೇವರಲ್ಲಿ ಉತ್ತಮ ಮಳೆಯಾಗುವಂತೆ ಪ್ರಾರ್ಥನೆ ಮಾಡೋಣ, ಪ್ರಾಧಿಕಾರದ ತೀರ್ಪಿನ ಕುರಿತಾಗಿ ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.

ಸ್ವಾಭಾವಿಕ ಜಲ ವರ್ಷದಲ್ಲಿ ನೀರು ನೀಡುವುದಿಲ್ಲ ಎಂದರೆ ತಪ್ಪಾಗುತ್ತೆ , ನದಿಗೆ ಹೆಚ್ಚಿನ ಒಳಹರಿವು ಬಂದರೆ ನೀರು ಕೊಡುತ್ತೇವೆ. ಮಂಡ್ಯದ ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

ಯಡಿಯೂರಪ್ಪ ಪ್ರತಿಕ್ರಿಯೆ:
ಕಾವೇರಿ ನದಿ ಪ್ರಾಧಿಕಾರದ ಅದೇಶದ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಜಲಾಶಯದಲ್ಲಿ ಒಳಹರಿವು ಹೆಚ್ಚು ಇದ್ದಾಗ ಮಾತ್ರ ನೀರು ಬಿಡಲು ಪ್ರಾಧಿಕಾರ ಹೇಳಿದೆ. ಹೀಗಾಗಿ ರೈತರು, ಜನರು ಯಾವುದೇ ಆತಂಕ ಪಡುವ ಅಗತ್ಯ ಇಲ್ಲ. ಮಳೆ ಬಂದು ಒಳಹರಿವು ಹೆಚ್ಚಾದಾಗ ನೀರು ಬಿಡಲು ಯಾವುದೆ ಅಭ್ಯಂತರ ಇಲ್ಲ. ಹೀಗಾಗಿ ಸದ್ಯ ಯಾವುದೇ ಆತಂಕ ಪಡುವ ಅಗತ್ಯ ಇಲ್ಲ ಎಂದು ಸಮಾಧಾನ ಮಾಡಿದ್ದಾರೆ.

ಡಿಕೆ ಸುರೇಶ್ ಪ್ರತಿಕ್ರಿಯೆ:
ಸದಾಶಿವ ನಗರದ ಸಚಿವ ಡಿ ಕೆ ಶಿವಕುಮಾರ್ ನಿವಾಸದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಡಿ ಕೆ ಸುರೇಶ್, ರಾಜ್ಯದಲ್ಲಿ ತೀವ್ರತರನಾದ ಬರಗಾಲವಿದೆ, ಮುಂಗಾರು ಮಾರುತಗಳು ರಾಜ್ಯಕ್ಕೆ ಇನ್ನೂ ಆಗಮಿಸಿಲ್ಲ. ನದಿ ಒಳಹರಿವು ಆಧಾರವಾಗಿಟ್ಟುಕೊಂಡು ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಬೇಕಾಗಿದೆ. ಕಾವೇರಿ ನದಿ ಪ್ರಾಧಿಕಾರ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುದನ್ನು ಮೊದಲು ನಿಲ್ಲಿಸಬೇಕು. ಬೆಳೆಗಿಂತ ಪ್ರಥಮ ಆದ್ಯತೆ ಕುಡಿಯುವ ನೀರು, ಜಾನುವಾರುಗಳಿಗೂ ನೀರಿಲ್ಲ ಪ್ರಾಧಿಕಾರ ಮತ್ತೊಮ್ಮೆ ತೀರ್ಪನ್ನು ಪುನರ್ ಪರಿಶೀಲನೆ ಮಾಡಬೇಕಿದೆ ಎಂದು ಅವರು ತಿಳಿಸಿದರು.

ನದೀ ನೀರು ಹಂಚಿಕೆ ಸಂಬಂಧ ಬೀಗ ಬೀಗದ ಕೈ ಎರಡೂ ಕಾವೇರಿ ನದಿ ನೀರು ಪ್ರಾಧಿಕಾರದ ಬಳಿಯೇ ಇದೆ. ಮೊದಲು ಕುಡಿಯುವ ನೀರಿಗೆ ಆದ್ಯತೆ ಎಂದು ಸುಪ್ರಿಂ ಕೋರ್ಟ್ ಹೇಳಿದೆ. ಈ ಬಗ್ಗೆ ಸುಪ್ರೀಂ ಕೋರ್ಟನಲ್ಲಿ ಪುನರ್ ಪರಿಶೀಲನೆ ಅರ್ಜಿ ಸಲ್ಲಿಸಬೇಕಿದೆ. ಸದ್ಯಕ್ಕೆ ಕಾಂಗ್ರೆಸ್ ಜೆಡಿಎಸ್ ಒಬ್ಬೊಬ್ಬರೇ ಸಂಸದರಿದ್ದೇವೆ. ಸಂಸತ್ ಅಧಿವೇಶನ ಪ್ರಾರಂಭ ಆದ ತಕ್ಷಣ ರಾಜ್ಯದ ಹಿತ ಕಾಪಾಡಲು ಎಲ್ಲರೊಂದಿಗೆ ಮಾತುಕತೆ ನಡೆಸುತ್ತೇವೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ನಮಗೆ ಯಾವ ಸ್ಥಾನ ತೋರಿಸಬೇಕೋ ಆ ಸ್ಥಾನ ಜನರು ತೋರಿಸಿಬಿಟ್ಟಿದ್ದಾರೆ. ಬಿಜೆಪಿಯಿಂದ 25 ಸಂಸದರು ಆಯ್ಕೆಯಾಗಿದ್ದಾರೆ, ನಾವು ಒಬ್ಬರಿದ್ದೇವೆ ಎಂದು ನುಣುಚಿಕೊಳ್ಳಲು ಸಾಧ್ಯವಿಲ್ಲ, ಆದರೂ ರಾಜ್ಯದ ಜಲ ಭಾಷೆ ವಿಚಾರದಲ್ಲಿ ನಾವು ಹಿಂದೆಯೂ ‌ಒಂದಾಗಿ ಕೆಲಸ ಮಾಡಿದ್ದೇವೆ ,ಈಗಲೂ ಒಂದಾಗಿ ಕೆಲಸ ಮಾಡ್ತೇವೆ ಎಂದು ಡಿ.ಕೆ.ಸುರೇಶ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com