ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ಶಾಂತಿ ಕಾಪಾಡುವಂತೆ ರಾಜಕೀಯ ಗಣ್ಯರ ಮನವಿ

ಅಯೋಧ್ಯೆ ವಿವಾದ ಸಂಬಂಧ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ಶಾಂತಿ ಕಾಪಾಡುವಂತೆ ರಾಜಕೀಯ ಗಣ್ಯರು ದೇಶದ ಜನತೆ ಬಳಿ ಮನವಿ ಮಾಡಿಕೊಂಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಅಯೋಧ್ಯೆ ವಿವಾದ ಸಂಬಂಧ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ಶಾಂತಿ ಕಾಪಾಡುವಂತೆ ರಾಜಕೀಯ ಗಣ್ಯರು ದೇಶದ ಜನತೆ ಬಳಿ ಮನವಿ ಮಾಡಿಕೊಂಡಿದ್ದಾರೆ. 

ಅಯೋಧ್ಯೆ ತೀರ್ಪು ಸಂಬಂಧ ಪ್ರತಿಕ್ರಿಯೆ ನೀಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಇದೊಂದು ಐತಿಹಾಸಿಕ ತೀರ್ಪು, ಜನತೆ ಶಾಂತಿ ಹಾಗೂ ತಾಳ್ಮೆಯಿಂದ ಇರಬೇಕೆಂದು ಹೇಳಿದ್ದಾರೆ. 

ಸಾಂವಿಧಾನಿಕ ಪೀಠದ ತೀರ್ಪವನ್ನು ನಾವೆಲ್ಲರೂ ಸ್ವಾಗತಿಸೋಣ. ಶಾಂತಿ ಹಾಗೂ ಸುವ್ಯಸ್ಥೆ ಕಾಪಾಡುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಹೇಳಿದ್ದಾರೆ. 

ಸುಪ್ರೀಂಕೋರ್ಟ್ ತೀರ್ಪನ್ನು ಪ್ರತೀಯೊಬ್ಬರೂ ಸ್ವಾಗತಿಸಬೇಕು. ಸಾಮಾಜಿಕ ಸೌಹಾರ್ದತೆಗೆ ಇದು ಸಹಕಾರಿಯಾಗಿದೆ. ಈ ವಿಚಾರ ಸಂಬಂಧ ಮತ್ತೆ ವಿವಾದ ಹುಟ್ಟುವುದಿಲ್ಲ. ಜನತೆ ಬಳಿ ಇದು ನನ್ನ ಮನವಿಯಾಗಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹೇಳಿದ್ದಾರೆ. 

ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ವಕೀಲ ಮಾತನಾಡಿ,  ಸುಪ್ರೀಂ ಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಸಾಧ್ಯವಿರುವ ಕಾನೂನು ಪ್ರಕ್ರಿಯೆಗಳನ್ನು ಮುಂದಿನ ದಿನಗಳಲ್ಲಿ ನಾವು ಕೈಗೊಳ್ಳಲಿದ್ದೇವೆ. ಸಾಂವಿಧಾನಿಕ ಪೀಠದ ತೀರ್ಪು ನಮಗೆ ತೃಪ್ತಿ ತಂದಿಲ್ಲ. ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವುದು ನಮ್ಮ ಪ್ರಥಮ ಆದ್ಯತೆ ಎಂದು ಹೇಳಿದ್ದಾರೆ. 

ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಅಧ್ಯಕ್ಷರಾದ ಝುಫರ್ ಫಾರೂಖಿ ಅವರು ಸಾಂವಿಧಾನಿಕ ಪೀಠದ ಈ ತೀರ್ಪನ್ನು ಸ್ವಾಗತಿಸಿವುದಾಗಿ ಹೇಳಿದ್ದಾರೆ.

ಇದೊಂದು ಐತಿಹಾಸಿಕ ತೀರ್ಪು. ಈ ತೀರ್ಪಿನ ಮೂಲಕ ಸಾಂವಿಧಾನಿಕ ಪೀಠ ವೈವಿಧ್ಯತೆಯಲ್ಲಿ ಏಕತೆಯ ಸಂದೇಶವನ್ನು ದೇಶಕ್ಕೆ ನೀಡಿದೆ ಎಂದು ಹಿಂದೂ ಮಹಾಸಭಾದ ವಕೀಲರು.ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಎಲ್ಲಾ ಸಮುದಾಯದವರೊಂದಿಗೆ ವಾದ-ಪ್ರತಿವಾದ ಕೇಳಿದ ಬಳಿಕ ಸುಪ್ರೀಂಕೋರ್ಟ್'ನ 5 ನ್ಯಾಯಮೂರ್ತಿಗಳ ಪೀಠ ಐತಿಹಾಸಿಕ ತೀರ್ಪು ನೀಡಿದೆ. ನ್ಯಾಯಾಲಯದ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಹಲವು ವರ್ಷಗಳ ವಿವಾದಕ್ಕೆ ಸುಪ್ರೀಂಕೋರ್ಟ್ ತೆರೆ ಎಳೆದಿದೆ. ದೇಶದ ಜನತೆ ಶಾಂತಿ ಹಾಗೂ ಸೌಹಾರ್ದತೆ ಕಾಪಾಡುವಂತೆ ಮನವಿ ಮಾಡಿಕೊಳ್ಳುತ್ತೇನೆಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. 

ಬಿಜೆಪಿ ನಾಯಕಿ ಉಮಾ ಭಾರತಿ ಮಾತನಾಡಿ, ಗೌರವಾನ್ವಿತ ಸುಪ್ರೀಂಕೋರ್ಟ್'ನ ದೈವಿಕ ತೀರ್ಪನ್ನು ಸ್ವಾಗತಿಸುತ್ತೇವೆ. ಇಂತಹ ಉತ್ತಮ ಕಾರ್ಯಕ್ಕೆ ನಾಯಕತ್ವ ವಹಿಸಿದ್ದ ಅಡ್ವಾಣಿಯವರಿಗೆ ಶುಭಾಶಯ ಹಾಗೂ ನಮನಗಳನ್ನು ಸಲ್ಲಿಸುತ್ತೇನೆಂದು ಹೇಳಿದ್ದಾರೆ. 

ಸಮಾಜದಲ್ಲಿ ಪರಸ್ಪರ ಗೌರವ ಹಾಗೂ ಐಕ್ಯತೆಯಿಂದ ನೋಡುವುದು ಪ್ರತಿಯೊಬ್ಬರ ಕರ್ತವ್ಯವಾಗಿರುತ್ತದೆ. ಅಯೋಧ್ಯೆ ವಿವಾದ ಸಂಬಂಧ ಸುಪ್ರೀಂಕೋರ್ಟ್ ತೀರ್ಪನ್ನು ಕಾಂಗ್ರೆಸ್ ಗೌರವಿಸುತ್ತದೆ. ಸಂವಿಧಾನದಲ್ಲಿ ಪ್ರತಿಪಾದಿಸಿರುವಂತೆ ಜಾತ್ಯಾತೀತ ಮೌಲ್ಯಗಳು ಮತ್ತು ಭ್ರಾತೃತ್ವದ ಮನೋಭಾವವನ್ನು ಅನುಸರಿಸಲು ಮತ್ತು ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಸಂಬಂಧಪಟ್ಟ ಎಲ್ಲಾ ಪಕ್ಷಗಳು ಹಾಗೂ ಸಮುದಾಯಗಳು ತಲೆಬಾಗಬೇಕೆಂದು  ಕಾಂಗ್ರೆಸ್ ನಾಯಕ ಮನೋಜ್ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com