ಕೊರೋನಾ ಹೆಡೆಮುರಿ ಕಟ್ಟಲು ಕೇಂದ್ರದಿಂದ ಕಠಿಣ ಕ್ರಮ, ತಿಂಗಳ ಕಾಲ ಬಫರ್ ಜೋನ್, ಸುತ್ತಮುತ್ತಲ ಪ್ರದೇಶಗಳು ಸಂಪೂರ್ಣ ಬಂದ್!

ನವದೆಹಲಿ: ದೇಶಾದ್ಯಂತ ಸಾವಿನ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಹೆಡೆಮುರಿ ಕಟ್ಟಲು ಪಣತೊಟ್ಟಿ ನಿಂತಿರುವ ಕೇಂದ್ರ ಸರ್ಕಾರ ಈ ಸಂಬಂಧ ನೂತನ ಕಠಿಣ ನಿಯಂತ್ರಕ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದೆ.
ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳು ಆರೋಗ್ಯ ವಲಯದ ತಜ್ಞರೊಂದಿಗೆ ಚರ್ಚಿಸಿ ತಯಾರಿಸಲಾದ ಸುಮಾರು 20 ಪುಟಗಳ ಈ ನಿಯಂತ್ರಕ ಯೋಜನೆಯಯಲ್ಲಿ ಹಲವು ಕಠಿಣ ನಿಯಮಗಳನ್ನು ಪ್ರಸ್ತಾಪಿಸಲಾಗಿದೆ. ಪ್ರಮುಖವಾಗಿ ಲಾಕ್ ಡೌನ್ ನ 2ನೇ ಹಂತದ ಕುರಿತು ಇಲ್ಲಿ ಪ್ರಸ್ತಾಪಿಸಲಾಗಿದ್ದು. ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಕಠಿಣ ನಿಯಮಗಳನ್ನು ಜಾರಿಗೆ ತರಲು ಸೂಚಿಸಲಾಗಿದೆ. ಈ ಬಗ್ಗೆ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದ್ದು, ವರದಿಯಲ್ಲಿರುವ ಪ್ರಮುಖಾಂಶಗಳು ಇಲ್ಲಿವೆ.

ತಿಂಗಳ ಕಾಲ ಬಫರ್ ಜೋನ್, ಸುತ್ತಮುತ್ತಲ ಪ್ರದೇಶಗಳು ಸಂಪೂರ್ಣ ಬಂದ್!
ವೈರಸ್ ನಿಯಂತ್ರಣಕ್ಕಾಗಿ ಸರ್ಕಾರ ಗುರುತು ಮಾಡಿರುವ ಅಂದರೆ ಹೆಚ್ಚು ಸೋಂಕು ಪತ್ತೆಯಾಗಿರುವ ಬಫರ್ ಜೋನ್ ಗಳು ಮತ್ತು ಅತರ ಸುತ್ತಮುತ್ತಲ ಪ್ರದೇಶಗಳನ್ನು ಒಂದು ತಿಂಗಳ ಕಾಲ ಸಂಪೂರ್ಣ ಬಂದ್ ಮಾಡಲು ಸಲಹೆ ನೀಡಲಾಗಿದೆ. ಇದೀ ರೀತಿಯ ನಿಯಮವನ್ನು ಚೀನಾದಲ್ಲಿ ಮೊದಲು ಪ್ರಯೋಗಿಸಲಾಗಿತ್ತು. ಅಲ್ಲಿ ಈ ಯೋಜನೆ ಪರಿಣಾಮಕಾರಿ ಫಲಿತಾಂಶ ನೀಡಿತ್ತು. ಇದೀಗ ಇದೇ ರೀತಿಯ ಯೋಜನೆಯನ್ನು ಭಾರತದಲ್ಲಿ ತರಲು ನಿರ್ಧರಿಸಲಾಗಿದೆ. ದೇಶದ 274 ಜಿಲ್ಲೆಗಳಲ್ಲಿ ಕೊರೋನಾ ವೈರಸ್ ಹಬ್ಬಿದ್ದು, ಇಲ್ಲಿ ಅಧಿಕಾರಿಗಳು ಗುರುತಿಸಿರುವ ಬಫರ್ ಜೋನ್ ಗಳು ಮತ್ತು ಅದರ ಸುತ್ತಮುತ್ತಲ ಪ್ರದೇಶಗಳನ್ನು ಬಂದ್ ಮಾಡಿ ವೈರಸ್ ಸೋಂಕು ಪ್ರಸರಣ ತಪ್ಪಿಸಲು ಸಲಹೆ ನೀಡಲಾಗಿದೆ.
ಬಫರ್ ಝೋನ್ ನಲ್ಲಿರುವ ಶಾಲಾಕಾಲೇಜು, ಕಚೇರಿಗಳು ಸಂಪೂರ್ಣ ಬಂದ್
ಇನ್ನು ಬಫರ್ ಝೋನ್ ನಲ್ಲಿರುವ ಶಾಲಾ-ಕಾಲೇಜುಗಳನ್ನು, ಕಚೇರಿಗಳನ್ನು ಸಂಪೂರ್ಣ ಬಂದ್ ಮಾಡಲಾಗುತ್ತದೆ. ಈ ಪ್ರದೇಶಗಳಲ್ಲಿ ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ಸರ್ಕಾರಿ ಮತ್ತು ಖಾಸಗಿ ಸಾರಿಗೆ ಸವಲತ್ತು ಇರುವುದಿಲ್ಲ. ಕೇವಲ ಅಗತ್ಯ ವಸ್ತುಗಳ ವಾಹನಗಳನ್ನು ಮಾತ್ರ ಅನುಮತಿಸಲು ಸೂಚಿಸಲಾಗಿದೆ.
ಕ್ವಾರಂಟೈನ್ ಝೋನ್ ಗೆ ನಾಲ್ಕು ವಾರಗಳ ಸಮಯ
ಕ್ವಾರಂಟೈನ್ ಜೋನ್ ನಲ್ಲಿ ಸೋಂಕು ಪ್ರಕರಣ ಪತ್ತೆಯಾದರೆ ಆ ಪ್ರದೇಶವನ್ನೂ ಕೂಡ ಸಂಪೂರ್ಣ ಬಂದ್ ಮಾಡಲು ನಿರ್ಧರಿಸಲಾಗಿದೆ. ಒಂದು ವೇಳೆ ಕ್ವಾರಂಟೈನ್ ಪ್ರದೇಶದಲ್ಲಿ ನಾಲ್ಕು ವಾರಗಳ ಕಾಲ ಸೋಂಕು ಪ್ರಕರಣ ಪತ್ತೆಯಾಗದಿದ್ದಲ್ಲಿ ಆಗ ವೈಧ್ಯಾಧಿಕಾರಿಗಳು ಕ್ವಾರಂಟೈನ್ ಅದವರನ್ನು ಮತ್ತೊಮ್ಮೆ ವೈದ್ಯಕೀಯ ತಪಾಸಣೆಗೊಳಪಡಿಸಿ ನೆಗೆಟಿವ್ ಬಂದರೆ ಆಗ ಅದನ್ನು ಸಾಮಾನ್ಯ ಪ್ರದೇಶಗಳ ಪಟ್ಟಿಗೆ ಸೇರಿಸಲಾಗುತ್ತದೆ. ಈ ನಿಯಮ ಪ್ರದೇಶದಿಂದ ಪ್ರದೇಶಕ್ಕೆ, ಸೋಂಕಿತರ ಅಥವಾ ಕ್ವಾರಂಟೈನ್ ಗೆ ಒಳಪಟ್ಟವರ ಸಂಖ್ಯೆಗಳ ಆಧಾರದ ಮೇಲೆ ಭಿನ್ನವಾಗಿರುತ್ತದೆ.

20 ಪುಟಗಳ ದಾಖಲೆಯಲ್ಲಿ 2ನೇ ಹಂತದ ಲಾಕ್ ಡೌನ್ ಪ್ರಸ್ತಾಪ
ಸೋಂಕು ಪ್ರಕರಣ ಪತ್ತೆಯಾದ ಪ್ರದೇಶವನ್ನು ಸಂಪೂರ್ಣ ನಿರ್ಬಂಧಿಸಲಾಗುತ್ತದೆ. ಒಂದು ವೇಳೆ ಕೊನೆಯ ಪಾಸಿಟಿವ್ ಪ್ರಕರಣ ಪತ್ತೆಯಾಗಿ ನಾಲ್ಕು ವಾರಗಳ ಬಳಿಕವೂ ಯಾವುದೇ ರೀತಿಯ ಪಾಸಿಟಿವ್ ಪ್ರಕರಣ ಪತ್ತೆಯಾಗದೇ ಹೊದರೆ ಆಗ ಈ ಪ್ರದೇಶಗಳಲ್ಲಿ ಹಂತ ಹಂತವಾಗಿ ಸಾರ್ವಜನಿಕ ಸಂಚಾರಕ್ಕೆ ಮುಕ್ತ ಮಾಡಲಾಗುತ್ತದೆ. ಇದೇ ರೀತಿಯ ಕ್ರಮವನ್ನು ಈ ಹಿಂದೆ ಹಂದಿ ಜ್ವರ ಹಬ್ಬಿದಾಗ ಕೈಗೊಳ್ಳಲಾಗಿತ್ತು.
ಶಂಕಿತರು, ಸೋಂಕಿತರಿಗೆ ಕಡ್ಡಾಯವಾಗಿ ಆಸ್ಪತ್ರೆಯಲ್ಲೇ ಪ್ರತ್ಯೇಕಿತ ವಾರ್ಡ್ ಗಳಲ್ಲಿ ಚಿಕಿತ್ಸೆ
ಪ್ರಸ್ತುತ ಸೋಂಕಿತರು ಮತ್ತು ಶಂಕಿತರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ವರದಿಯಲ್ಲಿ ಈ ಬಗ್ಗೆಯೂ ಪ್ರಸ್ತಾಪ ಮಾಡಲಾಗಿದ್ದು, ಸೋಂಕಿತರು ಮತ್ತು ಶಂಕಿತರು ಇಬ್ಬರನ್ನೂ ಕಡ್ಡಾಯವಾಗಿ ಆಸ್ಪತ್ರೆಗೆ ಸೇರಿಸಿ ಅಲ್ಲಿಯೇ ಚಿಕಿತ್ಸೆ ನೀಡಲು ಸಲಹೆ ನೀಡಲಾಗಿದೆ. ಅತ್ಯಲ್ಪ ಲಕ್ಷಣಗಳಿದ್ದರೂ ಅವರನ್ನೂ ಕೂಡ ಕಡ್ಡಾಯವಾಗಿ ಕ್ವಾರಂಟೈನ್ ಮಾಡಲು ಸೂಚಿಸಲಾಗಿದೆ. ಗಂಭೀರ ಲಕ್ಷಣಗಳಿರುವ ರೋಗಿಗಳನ್ನು ಉನ್ನತ ಮಟ್ಟದ ಆಸ್ಪತ್ರೆಗಳಿಗೆ ರವಾನಿಸಲಾಗುತ್ತದೆ.
ವೈದ್ಯರಿಗೆ, ಸಿಬ್ಬಂದಿಗಳಿಗೆ ಎನ್ 95 ಮಾಸ್ಕ್, ಪಿಪಿಇ ಕಿಟ್ ಕಡ್ಡಾಯ
ಇನ್ನು ಕೊರೋನಾ ರೋಗಿಗಳನ್ನು ಚಿಕಿತ್ಸೆಗೆ ಒಳಪಡಿಸುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೂ ಸೋಂಕು ಕಾಣಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಈ ಬಗ್ಗೆಯೂ ತನ್ನ ಕಾರ್ಯಸೂಚಿಯಲ್ಲಿ ಕೆಲ ಕ್ರಮಗಳನ್ನು ಕೈಗೊಂಡಿದೆ. ಆದರಂತೆ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಎನ್ 95 ಮಾಸ್ಕ್, ಗ್ಲೌಸ್ ಮತ್ತು ಪಿಪಿಇ ಕಿಟ್ ಗಳನ್ನು ಧರಿಸಲೇಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


