
ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಲಾಕ್'ಡೌನ್ ಮಾರ್ಗಸೂಚಿಗಳನ್ನು ದುರ್ಬಲಗೊಳಿಸದಿರಿ ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೋಮವಾರ ಸೂಚನೆ ನೀಡಿದೆ.
ದೇಶದಲ್ಲಿ ಸೋಂಕಿತರ ಸಂಖ್ಯೆ ಇದೀಗ 17,000 ಗಡಿ ದಾಟುತ್ತಿದ್ದು, ಈ ನಡುವೆ ವೈರಸ್ ವಿರುದ್ದದ ಹೋರಾಟವನ್ನು ತೀವ್ರಗೊಳಿಸಿರುವ ತೆಲಂಗಾಣ ಸರ್ಕಾರ ಲಾಕ್'ಡೌನ್'ನ್ನು ಮೇ.7 ರವರೆಗೂ ವಿಸ್ತರಣೆ ಮಾಡಿದ್ದು, ಫುಡ್ ಡೆಲಿವರಿ ಸೇವೆಗಳನ್ನು ಬಂದ್ ಮಾಡಿಸಿದೆ.
ಮತ್ತೊಂದೆಡೆ ಕೇರಳ ಸರ್ಕಾರ ಲಾಕ್'ಡೌನ್'ನ್ನು ಸಡಿಲಗೊಳಿಸಿದ್ದು, ಸ್ಥಳೀಯ ನೌಕರರು, ಕ್ಷೌರಿಕರು, ರೆಸ್ಟೋರೆಂಟ್ ಗಳು, ಬುಕ್ ಸ್ಟೋರ್'ಗಳು ಕಾರ್ಯನಿರ್ವಹಿಸಲು ಅನುಮತಿ ನೀಡಿದೆ. ಅಲ್ಲದೆ, ಆರೆಜ್ ಹಾಗೂ ಗ್ರೀನ್ ಝೋನ್ ಗಳಲ್ಲಿ ಬಸ್ ಸಂಚಾರಗಳನ್ನು ಆರಂಭಿಸಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿರುವ ಕೇಂದ್ರ ಸರ್ಕಾರ, ದೇಶದಲ್ಲಿ ವೈರಸ್ ಪ್ರಭಾವ ಹೆಚ್ಚುತ್ತಲೇ ಇದ್ದು, ಈ ಹಿನ್ನೆಲೆಯಲ್ಲಿ ಲಾಕ್'ಡೌನ್ ಮಾರ್ಗಸೂಚಿಗಳು ದುರ್ಬಲಗೊಳ್ಳದಂತೆ ನೋಡಿಕೊಳ್ಳಿ ಎಂದು ತಿಳಿಸಿದೆ.
ಕೇರಳ ಸರ್ಕಾರ ಕೆಲ ಉದ್ಯಮಗಳಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಿದ್ದು, ಇಂತಹ ಆದೇಶಗಳು ಏಪ್ರಿಲ್ 15 ರಂದು ಕೇಂದ್ರ ಗೃಹ ಸಚಿವಾಲ ನೀಡಿದ್ದ ಆದೇಶಗಳಿಗೆ ವಿರುದ್ಧವಾಗಿದೆ. ಇಂತಹ ಆದೇಶಗಳು ಕೇಂದ್ರ ನೀಡಿದ್ದ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಹೇಳಿದ್ದಾರೆ.
ಇಂದೋರ್, ಮುಂಬೈ, ಪುಣೆ, ಜೈಪುರ, ಕೋಲ್ಕತಾ ಹಾಗೂ ಪಶ್ಚಿಮ ಬಂಗಾಳ ವಿವಿಧ ಪ್ರದೇಶಗಳಲ್ಲಿ ಕೊರೋನಾ ಗಂಭೀರವಾಗಿುದೆ. ಅಲ್ಲದೆ, ಆರೋಗ್ಯ ಸಿಬ್ಬಂದಿಗಳ ವಿರುದ್ಧ ಹಲ್ಲೆಗಳು ನಡೆಯುತ್ತಿವೆ. ಸಾಮಾಜಿಕ ಅಂತರಗಳ ನಿಯಮಗಳ ಉಲ್ಲಂಘನೆಗಳು ಮುಂದುವರೆದಿವೆ. ನಗರ ಪ್ರದೇಶಗಳ ವಾಹನಗಳ ಸಂಚಾರ ಮುಂದುವರೆದಿವೆ ಎಂದು ಕೇಂದ್ರ ಗೃಹ ಸಚಿವಾಲಯ ಬೇಸರ ವ್ಯಕ್ತಪಡಿಸಿದೆ.
ಈಗಾಗಲೇ ಸರ್ಕಾರ 6 ಅಂತರ್ ಸಚಿವಾಲಯದ ಕೇಂದ್ರದ ತಂಡವನ್ನು ರಚನೆ ಮಾಡಿದ್ದು, ಈ ತಂಡ ಆಯಾ ರಾಜ್ಯಗಳ ಹಾಟ್ ಸ್ಪಾಟ್ ಗಳಲ್ಲಿರುವ ಪರಿಸ್ಥಿತಿಗಳ ಬಗ್ಗೆ ಪರಿಶೀಲನೆ ನಡೆಸಲಿದೆ. ಈ ತಂಡವೇ ಲಾಕ್'ಡೌನ್ ಮುಂದುವರೆಸುವ ಕುರಿತು, ಅಗತ್ಯ ಸೇವೆಗಳ ಕುರಿತು, ಆರೋಗ್ಯ ಸಿಬ್ಬಂದಿಗಳ ಸುರಕ್ಷತೆಗಳ ಕುರಿತು ಸಲಹೆಗಳನ್ನು ನೀಡಲಿದೆ ಎಂದು ತಿಳಿಸಿದೆ.
Advertisement