ಅಮೆರಿಕಾ, ಫ್ರಾನ್ಸ್ ಜೊತೆ ಭಾರತ ಪ್ರತ್ಯೇಕ ವಿಮಾನಯಾನ ಕಾರಿಡಾರ್ ಸ್ಥಾಪನೆ!
ನವದೆಹಲಿ: ಅಂತಾರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆಗೆ ಅವಕಾಶ ಮಾಡಿಕೊಡಲು ಅಮೆರಿಕಾ, ಫ್ರಾನ್ಸ್ ಜೊತೆ ಭಾರತ ಪ್ರತ್ಯೇಕ ವಿಮಾನಯಾನ ಕಾರಿಡಾರ್ ಸ್ಥಾಪನೆ ಮಾಡಿರುವುದಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.ಶೀಘ್ರದಲ್ಲಿಯೇ ಜರ್ಮನಿ ಮತ್ತು ಇಂಗ್ಲೆಂಡ್ ವಿಮಾನಗಳಿಗೂ ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಕಾರಿಡಾರ್ ದ್ವಿಪಕ್ಷೀಯ ವ್ಯವಸ್ಥೆಯಾಗಿದ್ದು, ನಿಯಮಗಳು ಮತ್ತು ನಿರ್ಬಂಧಗಳನ್ನು ಹೊಂದಿದೆ. ಇದರ ಅಡಿಯಲ್ಲಿ ಎರಡು ರಾಷ್ಟ್ರಗಳ ಅಂತಾರಾಷ್ಟ್ರೀಯ ವಿಮಾನಗಳು ಕಾರ್ಯಾಚರಣೆ ನಡೆಸಬಹುದಾಗಿದೆ.
ಜುಲೈ 18ರಿಂದ ಆಗಸ್ಟ್ 1ರವರೆಗೂ ದೆಹಲಿ, ಮುಂಬೈ, ಬೆಂಗಳೂರು, ಫ್ಯಾರಿಸ್ ನಡುವೆ 28 ವಿಮಾನಗಳನ್ನು ಏರ್ ಫ್ರಾನ್ಸ್ ಕಾರ್ಯಾಚರಣೆ ನಡೆಸಲಿವೆ, ಜುಲೈ 17ರಿಂದ ಜುಲೈ 31ರವರೆಗೂ ಅಮೆರಿಕಾದ 18 ವಿಮಾನಗಳು ಭಾರತ ಮತ್ತುಅಮೆರಿಕ ನಡುವೆ ಕಾರ್ಯಾಚರಣೆ ನಡೆಸಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ಸಚಿವರು ತಿಳಿಸಿದರು.
ದೆಹಲಿ, ನ್ಯೂಯಾರ್ಕ್ ನಡುವೆ ಪ್ರತಿದಿನ ಹಾಗೂ ದೆಹಲಿ- ಸ್ಯಾನ್ ಫ್ರಾನ್ಸಿಸ್ಕೊ ನಡುವೆ ವಾರಕ್ಕೆ ಮೂರು ಬಾರಿ ಅಮೆರಿಕಾದ ವಿಮಾನಗಳು ಹಾರಾಟ ನಡೆಸಲಿವೆ. ದೆಹಲಿ ಮತ್ತು ಲಂಡನ್ ನಡುವೆ ಪ್ರತಿದಿನ ಎರಡು ವಿಮಾನಗಳ ಹಾರಾಟವನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ಹೇಳಿದರು.ಜರ್ಮನಿಯಿಂದಲೂ ಮನವಿ ಬಂದಿದ್ದು, ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ ಎಂದು ಸಚಿವರು ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ