

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿ ಹಾಗೂ ಮಹಾರಾಷ್ಟ್ರದಲ್ಲಿ ಕೊರೋನಾವೈರಸ್ ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ವಿಸ್ತರಣೆಯಾಗಲಿದೆ ಎಂಬಂತಹ ಮಾತುಗಳು ಕೇಳಿಬರುತಿತ್ತು. ಆದರೆ, ಲಾಕ್ ಡೌನ್ ವಿಸ್ತರಿಸದಿರಲು ಎರಡು ರಾಜ್ಯಗಳು ನಿರ್ಧರಿಸಿವೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್, ಲಾಕ್ ಡೌನ್ ವಿಸ್ತರಣೆಯಾಗಲ್ಲ ಎಂದು ಸ್ಪಷ್ಪಪಡಿಸಿದರು.
ದೆಹಲಿಯಲ್ಲಿ ಈವರೆಗೂ 1085 ಜನರು ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 34 ಸಾವಿರಕ್ಕೆ ಏರಿಕೆ ಆಗಿದೆ. ಸೊಂಕಿನಿಂದ ಮೃತಪಟ್ಟವರು ಹಾಗೂ ಪಾಸಿಟಿವ್ ಇರುವವರ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಕೋರಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಮತ್ತೊಂದೆಡೆ ಮಹಾರಾಷ್ಟ್ರದಲ್ಲಿಯೂ ಲಾಕ್ ಡೌನ್ ವಿಸ್ತರಣೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯ ಸ್ಪಷ್ಟಪಡಿಸಿದೆ. ಪ್ರಸ್ತುತ ಜೂನ್ 30ರವರೆಗೂ ಜಾರಿಯಲ್ಲಿರುವ ಲಾಕ್ ಡೌನ್ ನ್ನು ವಿಸ್ತರಿಸುವುದಿಲ್ಲ, ಕೊರೋನಾ ವೈರಸ್ ಹರಡದಂತೆ ಜನರು ಗುಂಪು ಸೇರದಂತೆ ಮನವಿ ಮಾಡಲಾಗಿದೆ.
ಲಾಕ್ ಡೌನ್ ನ್ನು ಮತ್ತೆ ಘೋಷಿಸಿಲ್ಲ, ಜನರು ಏಲ್ಲಿಯೂ ಒಂದೆಡೆ ಸೇರಬೇಡಿ, ಸರ್ಕಾರದ ಸಲಹೆ, ಸೂಚನೆಗಳನ್ನು ಪಾಲಿಸುವ ಸುರಕ್ಷಿತವಾಗಿ ಇರಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಕಾರ್ಯಾಲಯ ಟ್ವೀಟ್ ಮಾಡಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳಲ್ಲಿ 396 ಮಂದಿ ಸಾವಿನೊಂದಿಗೆ 10,956 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ.ಒಟ್ಟು ಸೋಂಕಿತರ ಸಂಖ್ಯೆ 97, 648ಕ್ಕೆ ಏರಿಕೆ ಆಗಿದೆ.