

ನವದೆಹಲಿ: ದೆಹಲಿಯಲ್ಲಿ ಪರಿಣಾಮಕಾರಿಯಾಗಿ ಕೋವಿಡ್-19 ವಿರುದ್ಧ ಹೋರಾಡಲು ಕೇಂದ್ರ ಗೃಹ ಸಚಿವಾಲಯದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ದೆಹಲಿಯ ಮುಖ್ಯಕಾರ್ಯದರ್ಶಿ ವಿಜಯ್ ದೇವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಂಟೈನ್ಮೆಂಟ್ ಜೋನ್ ಗಳ ಮರು ವಿಂಗಡನೆ, ಪರಿಣಾಮಕಾರಿಯಾದ ಸಂಪರ್ಕ ಮೂಲವನ್ನು ಕಂಡುಹಿಡಿಯುವುದು ಸೇರಿದಂತೆ ಗೃಹ ಸಚಿವಾಲಯ ನೀಡಿರುವ ನಿರ್ದೆಶಗಳನ್ನು ಪಾಲಿಸಲು ದೆಹಲಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೋವಿಡ್-19 ಪರೀಕ್ಷೆಗಳನ್ನು ಹೆಚ್ಚುಗೊಳಿಸುವುದು ಹಾಗೂ ರೋಗಿಗಳಿಗೆ ಉತ್ತಮವಾದ ವೈದ್ಯಕೀಯ ಸೇವೆಗಳನ್ನು ಒದಗಿಸುವುದಕ್ಕೆ ದೆಹಲಿಯ ಮುಖ್ಯಕಾರ್ಯದರ್ಶಿ, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ್ ದೇವ್ ದತ್ ಹಾಗೂ ವಿಭಾಗೀಯ ಆಯುಕ್ತ ಸಂಜೀವ್ ಖಿರ್ವಾರ್ ಗೆ ನಿರ್ದೇಶನ ನೀಡಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರು ರಚಿಸಿದ್ದ ಉನ್ನತ ಸಮಿತಿ ದೆಹಲಿಯಲ್ಲಿ ಕೋವಿಡ್-೧೯ ಪ್ರಸರಣ ತಡೆಗಟ್ಟಲು ಎಲ್ಲಾ ಕೋವಿಡ್-೧೯ ಪ್ರಕರಣಗಳೊಂದಿಗೆ ಸಂಪರ್ಕಕ್ಕೆ ಬಂದಿದ್ದವರನ್ನು ಕ್ವಾರಂಟೈನ್ ನಲ್ಲಿಡುವುದಕ್ಕೆ ಹಾಗೂ ಕಂಟೈನ್ಮೆಂಟ್ ಜೋನ್ ಗಳ ಮರುವಿಂಗಡನೆಗೆ ಸೂಚನೆ ನೀಡಿದ್ದ ಬೆನ್ನಲ್ಲೇ ದೆಹಲಿಯಲ್ಲಿ ಈ ಬದಲಾವಣೆಗೆ ನಿರ್ಧರಿಸಲಾಗಿದೆ.
ದೆಹಲಿಯಲ್ಲಿ ಕೊರೋನಾ ತಡೆಗೆ ಆರೋಗ್ಯ ಸೇತು ಹಾಗೂ ಇತಿಹಾಸ್ ಆಪ್ ಗಳ ಬಳಕೆ ಮಾಡುವಂತೆಯೂ ಕೇಂದ್ರ ಗೃಹ ಸಚಿವಾಲಯ ಸಲಹೆ ನೀಡಿದೆ.