ಬೆಂಗಳೂರು: ನಗರ ಆಸ್ಪತ್ರೆಯಿಂದ ಪರಾರಿಯಾಗಿ ತೀವ್ರ ಆತಂಕ ಸೃಷ್ಟಿಸಿದ್ದ ವ್ಯಕ್ತಿಯೊಬ್ಬರು ಇದೀಗ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಪತ್ತೆಯಾಗಿದ್ದಾರೆ.
ಅಮೆರಿಕಾದಿಂದ ಬೆಂಗಳೂರಿಗೆ ಬಂದಿದ್ದ 58 ವರ್ಷದ ವ್ಯಕ್ತಿ ಇಂದಿರಾನಗರದ ಸಿವಿ ರಾಮನ್ ಆಸ್ಪತ್ರೆಯಿಂದ ಮಂಗಳವಾರ ಮಧ್ಯಾಹ್ನ ಪರಾರಿಯಾಗಿದ್ದರು.
ಪರಾರಿಯಾದ ಐದು ತಾಸುಗಳ ಬಳಿಕ ಅನಂತಪುರದಲ್ಲಿರುವ ತಮ್ಮ ಮನೆಯಲ್ಲಿ ಪತ್ತೆಯಾಗಿದ್ದು, ವೈದ್ಯಾಧಿಕಾರಿಗಳು, ಪೊಲೀಸರು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ. ಪ್ರಸ್ತುತ ಪತ್ತೆಯಾಗಿರುವ ವ್ಯಕ್ತಿಗೆ ಮನೆ ಹಿಂದ ಹೊರಗೆ ಬರದಂತೆ ಸೂಚಿಸಲಾಗಿದೆ.
ಕೊರೋನಾ ಭೀತಿ ಹಿನ್ನೆಲೆಯಲ್ಲಿ ವಿದೇಶಗಳಿಂದ ಬರುತ್ತಿರುವವರನ್ನು ನಗರ ವಿವಿಧೆ ಆಸ್ಪತ್ರೆಗಳಲ್ಲಿ ಇರಿಸಲಾಗುತ್ತಿದೆ. ಅಮೆರಿಕಾದಲ್ಲಿ ಒಂದು ತಿಂಗಳು ಉಳಿದುಕೊಂಡಿದ್ದ ವ್ಯಕ್ತಿ, ಸೋಮವಾರ ರಾತ್ರಿ 2 ಗಂಟೆ ಸುಮಾರಿಗೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಪರೀಕ್ಷೆ ಒಳಪಡಿಸಿದ ವೈದ್ಯಾಧಿಕಾರಿಗಳ ತಂಡ ಅವರನ್ನು ಇಂದಿರಾನಗರದ ಸಿವಿ ರಾಮನ್ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ವಾರ್ಡ್ ನಲ್ಲಿ ನಿಗಾ ಇರಿಸಿದ್ದರು.
ಒಟ್ಟು 7 ಮಂದಿ ಆಸ್ಪತ್ರೆಯಲ್ಲಿ ಇದ್ದರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಮೂತ್ರ ವಿಸರ್ಜನೆಗೆಂದು ತೆರಳಿದ್ದ ವ್ಯಕ್ತಿ ಬಳಿಕ, ಪರಾರಿಯಾಗಿದ್ದ. ಹುಡುಕಾಟ ನಡೆಸಿದ್ದ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಇದರಂತೆ ವ್ಯಕ್ತಿಯ ಹೆಸರು, ವಿಳಾಸ ಹಾಗೂ ಇನ್ನಿತರೆ ಮಾಹಿತಿಗಳನ್ನು ಪಡೆದ ಅಧಿಕಾರಿಗಳು ಅನಂತಪುರಕ್ಕ ತೆರಳಿದ್ದು, ವ್ಯಕ್ತಿ ಪತ್ತೆಯಾಗಿದ್ದಾನೆಂದು ವರದಿಗಳು ತಿಳಿಸಿವೆ.
Advertisement