ಚಳಿಗೆ ದೆಹಲಿ ಗಢಗಢ: 17 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಕನಿಷ್ಠ ತಾಪಮಾನ

ತೀವ್ರ ಚಳಿಗೆ ರಾಷ್ಟ್ರ ರಾಜಧಾನಿ ದೆಹಲಿ ಜನತೆ ತತ್ತರಿಸಿ ಹೋಗಿದ್ದು, ಇಂದು ದೆಹಲಿಯಲ್ಲಿ ಕಳೆದ 17 ವರ್ಷಗಳಲ್ಲಿಯೇ ಕನಿಷ್ಠ ತಾಪಮಾನ ದಾಖಲಾಗಿದೆ.
ದೆಹಲಿ ತಾಪಮಾನ ಕುಸಿತ (ಚಿತ್ರಕೃಪೆ: ಪ್ರಸಾರ ಭಾರತಿ)
ದೆಹಲಿ ತಾಪಮಾನ ಕುಸಿತ (ಚಿತ್ರಕೃಪೆ: ಪ್ರಸಾರ ಭಾರತಿ)
Updated on: 

ನವದೆಹಲಿ: ತೀವ್ರ ಚಳಿಗೆ ರಾಷ್ಟ್ರ ರಾಜಧಾನಿ ದೆಹಲಿ ಜನತೆ ತತ್ತರಿಸಿ ಹೋಗಿದ್ದು, ಇಂದು ದೆಹಲಿಯಲ್ಲಿ ಕಳೆದ 17 ವರ್ಷಗಳಲ್ಲಿಯೇ ಕನಿಷ್ಠ ತಾಪಮಾನ ದಾಖಲಾಗಿದೆ.

ಹೌದು.. ಈ ಬಗ್ಗೆ ಕೇಂದ್ರ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ದೆಹಲಿಯಲ್ಲಿ ಭಾನುವಾರ ಮುಂಜಾನೆ ಕನಿಷ್ಠ ತಾಪಮಾನ 6.9 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದು, ಇದು 2003ರ ಬಳಿಕ ನವೆಂಬರ್‌ ತಿಂಗಳಲ್ಲಿ ದಾಖಲಾದ ಅತಿ ಕನಿಷ್ಠ ತಾಪಮಾನವಾಗಿದೆ ಎಂದು ಹೇಳಿದೆ.

ದೆಹಲಿಯಲ್ಲಿ ಕಳೆದ ಶುಕ್ರವಾರ 7.5 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿತ್ತು. ಅದು 14 ವರ್ಷಗಳಲ್ಲಿ ನವೆಂಬರ್‌ ತಿಂಗಳಲ್ಲಿ ದಾಖಲಾದ ಅತಿ ಕನಿಷ್ಠ ಉಷ್ಣಾಂಶ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿತ್ತು. ಆದರೆ ಇಂದು ಅದಕ್ಕಿಂತಲೂ ಕನಿಷ್ಛ  ತಾಪಮಾನ ದಾಖಲಾಗಿದೆ.

ಇನ್ನು ಸಫ್ದರ್ಜಂಗ್ ವೀಕ್ಷಣಾಲಯದ ಪ್ರಕಾರ ದೆಹಲಿಯಲ್ಲಿ ಭಾನುವಾರ ಕನಿಷ್ಠ ಉಷ್ಣಾಂಶ 6.9 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. 2003ರ ನವೆಂಬರ್‌ನಲ್ಲಿ 6.1 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿತ್ತು ಎಂದು ಐಎಂಡಿಯ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಕುಲದೀಪ್  ಶ್ರೀವಾಸ್ತವ ಮಾಹಿತಿ ನೀಡಿದ್ದಾರೆ.

ಸಾಮಾನ್ಯವಾಗಿ ಸತತ ಎರಡು ದಿನ ತಾಪಮಾನ 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇದ್ದಾಗ ಶೀತ ಅಲೆಯನ್ನು ಘೋಷಿಸಲಾಗುತ್ತದೆ. ದೆಹಲಿಯಲ್ಲಿ ಕಳೆದ ವರ್ಷ ಕನಿಷ್ಠ ತಾಪಮಾನ 11.5 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. 2018 ರಲ್ಲಿ 10.5 ಮತ್ತು 2017ರಲ್ಲಿ 7.6 ಡಿಗ್ರಿ  ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿತ್ತು. 1938ರ ನವೆಂಬರ್‌ 28ರಂದು ದೆಹಲಿಯಲ್ಲಿ ಅತಿ ಕನಿಷ್ಠ ತಾಪಮಾನ 3.9 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com