ಇಂದು ದೇಶ ಕಂಡ ಅತ್ಯಂತ ಕರಾಳ ದಿನ: ಸಂಸತ್ ಮೇಲೆ ನಡೆದ ದಾಳಿಗೆ 19 ವರ್ಷ

ದೇಶದ ಶಕ್ತಿ ಕೇಂದ್ರ ಸಂಸತ್ ಭವನದ ಮೇಲೆ ಪಾಕಿಸ್ತಾನ ಬೆಂಬಲಿತ ಉಗ್ರರು ಭಯಾನಕ ದಾಳಿ ನಡೆಸಿದ ಇಂದಿಗೆ 19 ವರ್ಷಗಳು ಕಳೆದಿವೆ. ಡಿಸೆಂಬರ್ 13, 2001ರಂದು ರಾಜಧಾನಿ ದೆಹಲಿಯಲ್ಲಿ ಸಂಸತ್ ಮೇಲೆ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕರು ಭೀಕರ ದಾಳಿ ನಡೆಸಿದ್ದರು. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೇಶದ ಶಕ್ತಿ ಕೇಂದ್ರ ಸಂಸತ್ ಭವನದ ಮೇಲೆ ಪಾಕಿಸ್ತಾನ ಬೆಂಬಲಿತ ಉಗ್ರರು ಭಯಾನಕ ದಾಳಿ ನಡೆಸಿದ ಇಂದಿಗೆ 19 ವರ್ಷಗಳು ಕಳೆದಿವೆ. ಡಿಸೆಂಬರ್ 13, 2001ರಂದು ರಾಜಧಾನಿ ದೆಹಲಿಯಲ್ಲಿ ಸಂಸತ್ ಮೇಲೆ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕರು ಭೀಕರ ದಾಳಿ ನಡೆಸಿದ್ದರು. 

ದಾಳಿಯಲ್ಲಿ ಆರು ಪೊಲೀಸರು ಸೇರಿದಂತೆ ಒಟ್ಟು 79 ಮಂದಿ ಭಯೋತ್ಪಾಕರ ಕೌರ್ಯಕ್ಕೆ ಬಲಿಯಾಗಿ, 22 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಶಕ್ತಿ ಕೇಂದ್ರ ಮೇಲೆ ನಡೆದ ಈ ದಾಳಿಯಲ್ಲಿ ಐವರು ಉಗ್ರರನ್ನು ನಮ್ಮ ವೀರ ಯೋಧರು ಹೊಡೆದುರುಳಿಸುವಲ್ಲಿ ಸಫಲರಾಗಿದ್ದರು. 

ಸಂಸತ್ತಿನ ಕಾಂಪ್ಲೆಕ್ಸ್‌ಗೆ ಪ್ರವೇಶ ಪಡೆಯುವ ಸ್ಟಿಕ್ಕರ್‌(ಗೃಹ ಸಚಿವಾಲಯ ಹಾಗೂ ಸಂಸತ್ತಿನ ಲೇಬಲ್‌) ಅಂಟಿಸಿಕೊಂಡಿದ್ದ ಅಂಬಾಸಿಡರ್‌ ಕಾರಿನಲ್ಲಿ ಉಗ್ರರು ಭಾರಿ ಶಸ್ತ್ರಾಸ್ತ್ರಗಳೊಂದಿಗೆ ಆಗಮಿಸಿದ್ದರು. ಅಂದು ಸಂಸತ್ತಿನ ಎರಡೂ ಸದನಗಳು(ಲೋಕಸಭೆ-ರಾಜ್ಯಸಭೆ) 40 ನಿಮಿಷಗಳವರೆಗೆ ಕಲಾಪವನ್ನು ಮುಂದೂಡಿದ್ದವು. 

ಆ ಸಮಯದಲ್ಲೇ ಸಂಸತ್‌ನ ಕಾಂಪ್ಲೆಕ್ಸ್‌ ಈ ಉಗ್ರರು ಪ್ರವೇಶಿಸಿದ್ದರು. ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಪ್ರತಿಪಕ್ಷ ದ ನಾಯಕಿ ಸೋನಿಯಾ ಗಾಂಧಿ ಅವರು ಅದಾಗಲೇ ಸಂಸತ್‌ ಆವರಣವನ್ನು ತೊರೆದಾಗಿತ್ತು. ಅಂದಿನ ಗೃಹ ಸಚಿವ ಎಲ್‌.ಕೆ.ಆಡ್ವಾಣಿ ಸೇರಿದಂತೆ 100ಕ್ಕೂ ಹೆಚ್ಚು ಸಂಸದರು ಸಂಸತ್ತಿನೊಳಗೆ ಇದ್ದರು. ಈ ಹೊತ್ತಿನಲ್ಲೇ ಉಗ್ರರು ದಾಳಿ ಆರಂಭಿಸಿದ್ದರು.

ಸುದೈವಷಾತ್‌ ಉಗ್ರರ ಯೋಜನೆ ಸಂಪೂರ್ಣವಾಗಿ ಜಾರಿಯಾಗಲಿಲ್ಲ. ಒಂದು ವೇಳೆ, ಅವರು ಅಂದುಕೊಂಡಂತೆ ಮಾಡಿದ್ದರೆ, ಭಾರೀ ಅನಾಹುತವಾಗುತ್ತಿತ್ತು. ಆದರೆ, ಸಂಸತ್ತಿನ ಭದ್ರತಾ ಸಿಬ್ಬಂದಿ ಅವರನ್ನು ಪತ್ತೆ ಹಚ್ಚಿದರು. ಇದರಿಂದ ತುಸು ವಿಚಲಿತರಾದಂತೆ ಕಂಡುಬಂದ ಅವರು, ತಕ್ಷ ಣವೇ ಅಲ್ಲಿಂದ ಹಿಂತೆಗೆಯುವ ಪ್ರಯತ್ನಕ್ಕೆ ಮುಂದಾದರು. ಆದರೆ ಆ ವೇಳೆ ಅವರ ಕಾರು ಭದ್ರತಾ ಸಿಬ್ಬಂದಿಯ ಕಾರಿಗೆ ಟಚ್‌ ಆಯಿತು. ಆಗ ಸಿಬ್ಬಂದಿ, ತಕ್ಷಣಕ್ಕೆ ಕಾರು ತಪಾಸಣೆಗೆ ಮುಂದಾದರು. ಆದರೆ, ಅಷ್ಟೊತ್ತಿಗೆ ಉಗ್ರರು ದಾಳಿಗೆ ಮುಂದಾದರು. ಅಲ್ಲಿಗೆ ಎಲ್ಲವೂ ಸ್ಪಷ್ಟವಾಗಿತ್ತು. 

ಉಗ್ರರು ಮತ್ತು ಭದ್ರತಾ ಸಿಬ್ಬಂದಿ ಮಧ್ಯೆ ಗುಂಡಿನ ಚಕಮಕಿ ಆರಂಭವಾಯಿತು. ಹೋರಾಟದಲ್ಲಿ ಐವರು ಪೊಲೀಸರು, ಸಂಸತ್ತಿನ ಸೆಕ್ಯುರಿಟಿ ಗಾರ್ಡ್‌, ಒಬ್ಬ ಮಾಲಿ ಹತರಾದರು. 22 ಜನರು ಗಾಯಗೊಂಡರು. ಆದರೆ, ಯಾವುದೇ ಸಚಿವರು ಅಥವಾ ಸಂಸದರಿಗೆ ತೊಂದರೆಯಾಗಲಿಲ್ಲ. ಒಂದು ಗಂಟೆ ಕಾಲ ನಡೆದ ಗುಂಡಿನ ಚಕಮಕಿಯನ್ನು ಬಹುತೇಕ ಎಲ್ಲ ನ್ಯೂಸ್‌ ಚಾನೆಲ್‌ಗಳು ನೇರ ಪ್ರಸಾರ ಮಾಡಿದವು. ದಾಳಿ ನಡೆಸಿದ್ದ ಐವರು ಉಗ್ರರನ್ನು ಸೇನಾಪಡೆಗಳು ಹತ್ಯೆ ಮಾಡಿತ್ತು. 

ದಾಳಿಯ ನಂತರ ಪೊಲೀಸರು ತನಿಖೆ ಕೈಗೊಂಡರು. ತನಿಖೆಯಲ್ಲಿ ದಾಳಿಯ ಹಿಂದೆ ಇದ್ದ ನಾಲ್ವರು ಆರೋಪಿಗಳನ್ನು ಗುರುತಿಸಲಾಯಿತು. ಅಫ್ಜಲ್‌ ಗುರು, ಶೌಕತ್‌ ಹುಸೇನ್‌, ಎಸ್‌ಎಆರ್‌ ಗೀಲಾನಿ ಮತ್ತು ನವಜೋತ್‌ ಸಂಧು ಅಲಿಯಾಸ್‌ ಅಫ್ಸಾನಾ(ಶೌಕತ್‌ ಹುಸೇನ್‌ನ ಹೆಂಡತಿ)ಆ ನಾಲ್ವರು ಆರೋಪಿಗಳು. ಅವರನ್ನು ಬಂಧಿಸಿ, ಸಂಸತ್ತಿನ ಮೇಲೆ ದಾಳಿ ನಡೆಸಿದ ಉಗ್ರರಿಗೆ ನೆರವು ನೀಡಿದ ಆರೋಪ ಹೊರಿಸಲಾಯಿತು. 

ಸೆಕ್ಷನ್‌ 123 ಐಪಿಸಿ ಅಡಿಯಲ್ಲಿ ದಾಖಲಾದ ಆರೋಪವೊಂದನ್ನು ಹೊರತುಪಡಿಸಿ, ಉಳಿದ ಆರೋಪಗಳಿಂದ ನವಜೋತ್‌ ಸಂಧು ಅಲಿಯಾಸ್‌ ಅಫ್ಸಾನಾ ಮುಕ್ತಳಾದಳು. ಇದೇ ವೇಳೆ, ಆಕೆಗೆ ಐದು ವರ್ಷಗಳ ಕಠಿಣ ಶಿಕ್ಷೆ ಹಾಗೂ ದಂಡವನ್ನು ವಿಧಿಸಲಾಯಿತು.

ಸಂಸತ್ತಿನ ದಾಳಿಗೆ ಸಂಬಂಧಿಸಿದಂತೆ ಪೂರ್ಣ ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯವು, ಪ್ರಮುಖ ಆರೋಪಿಗಳಾದ ಅಫ್ಜಲ್‌ ಗುರು, ಎಸ್‌ಎಆರ್‌ ಗೀಲಾನಿ ಹಾಗೂ ಶೌಕತ್‌ ಹುಸೇನ್‌ಗೆ ಮರಣ ದಂಡನೆ ಶಿಕ್ಷೆ ಘೋಷಿಸಿತು. ಆದರೆ, ನಂತರದಲ್ಲಿ ಎಸ್‌ಎಆರ್‌ ಗೀಲಾನಿ ಎಲ್ಲ ಆರೋಪಗಳಿಂದ ಮುಕ್ತನಾದ. 

ಶೌಕತ್‌ ಹುಸೇನ್‌ಗೆ ನೀಡಿದ್ದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ದೆಹಲಿ ಹೈಕೋರ್ಟ್‌ ಪರಿವರ್ತಿಸಿತು. ಶೌಕತ್‌ ಹುಸೇನ್‌ ತನ್ನ ಶಿಕ್ಷೆಯ ಅವಧಿಯನ್ನು ಪೂರ್ಣಗೊಳಿಸುವ 9 ತಿಂಗಳ ಮುಂಚೆಯೇ ಜೈಲಿನಿಂದ ಬಿಡುಗಡೆಯಾದ. ಸನ್ನಡತೆಯಾಧಾರದ ಮೇಲೆ ಆತನನ್ನು ಬಿಡುಗಡೆ ಮಾಡಲಾಗಿತ್ತು.

2012ರ ಡಿಸೆಂಬರ್‌ 10ರಂದು ಅಂದಿನ ಗೃಹ ಸಚಿವ ಸುಶೀಲ್‌ಕುಮಾರ್‌ ಶಿಂಧೆ ಅವರು, ''ಚಳಿಗಾಲದ ಅಧಿವೇಶನ ಮುಕ್ತಾಯವಾದ ಬಳಿಕ ಅಫ್ಜಲ್‌ ಗುರು ಶಿಕ್ಷೆಗೆ ಸಂಬಂಧಿಸಿದ ಕಡತದತ್ತ ಗಮನ ಹರಿಸುವುದಾಗಿ,'' ಪ್ರಕಟಿಸಿದರು. 2013ರ ಫೆಬ್ರವರಿ 3ರಂದು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು ಅಫ್ಜಲ್‌ ಗುರುವಿನ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದರು. 

ಮಾರನೇ ದಿನವೇ ಅಫ್ಜಲ್‌ನನ್ನು ನೇಣುಗಂಬಕ್ಕೇರಿಸುವ ಕಡತವನ್ನು ಅಂದಿನ ಗೃಹ ಸಚಿವ ಶಿಂಧೆ ಅವರು ಕ್ಲಿಯರ್‌ ಮಾಡಿದರು. ಇದಾದ 10 ದಿನಗಳ ಬಳಿಕ ಅಫ್ಜಲ್‌ ಗುರುವನ್ನು ತಿಹಾರ್‌ ಜೈಲಿನಲ್ಲಿ ನೇಣಿಗೇರಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com