ಆತ್ಮ ಗೌರವಕ್ಕೆ ಧಕ್ಕೆಯಾದರೆ ಭಾರತ ಎಂದಿಗೂ ಸಹಿಸುವುದಿಲ್ಲ, ನಮ್ಮ ಭೂಮಿ ಬೇರೆಯವರ ಪಾಲಾಗಲು ಬಿಡುವುದಿಲ್ಲ: ರಾಜನಾಥ್ ಸಿಂಗ್

ಭಾರತ ಮತ್ತು ಚೀನಾ ಮಧ್ಯೆ ಮಾತುಕತೆ ಮುಂದುವರಿದಿದ್ದು ಯಶಸ್ಸು ಇದುವರೆಗೆ ಕಂಡಿಲ್ಲ. ಮುಂದಿನ ಹಂತದ ಮಿಲಿಟರಿ ಮಟ್ಟದ ಮಾತುಕತೆ ಯಾವ ಸಮಯದಲ್ಲಾದರೂ ನಡೆಯಬಹುದು. ಇದುವರೆಗೆ ಯಾವುದೇ ಮಾತುಕತೆ, ಸಂಧಾನ ಫಲಪ್ರದವಾಗಿಲ್ಲ.
ರಕ್ಷಣಾ ಸಚಿವ ರಾಜನಾಥ್ ಸಿಂಗ್
ರಕ್ಷಣಾ ಸಚಿವ ರಾಜನಾಥ್ ಸಿಂಗ್

ನವದೆಹಲಿ: ಭಾರತ ಮತ್ತು ಚೀನಾ ಮಧ್ಯೆ ಮಾತುಕತೆ ಮುಂದುವರಿದಿದ್ದು ಯಶಸ್ಸು ಇದುವರೆಗೆ ಕಂಡಿಲ್ಲ. ಮುಂದಿನ ಹಂತದ ಮಿಲಿಟರಿ ಮಟ್ಟದ ಮಾತುಕತೆ ಯಾವ ಸಮಯದಲ್ಲಾದರೂ ನಡೆಯಬಹುದು. ಇದುವರೆಗೆ ಯಾವುದೇ ಮಾತುಕತೆ, ಸಂಧಾನ ಫಲಪ್ರದವಾಗಿಲ್ಲ. ಚೀನಾ ಗಡಿಯಲ್ಲಿ ಯಥಾಸ್ಥಿತಿ ಮುಂದುವರಿದಿದೆ, ಸೇನೆ ನಿಯೋಜನೆ ಉತ್ತಮ ಬೆಳವಣಿಗೆ ಖಂಡಿತಾ ಅಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಎಎನ್ಐ ಸುದ್ದಿಸಂಸ್ಥೆಗೆ ನೀಡಿದ ವಿಶೇಶ ಸಂದರ್ಶನದಲ್ಲಿ ಮಾತನಾಡಿದ ಅವರು,ಪೂರ್ವ ಲಡಾಕ್ ಗಡಿಭಾಗದಲ್ಲಿ ಯಥಾಸ್ಥಿತಿ ಮುಂದುವರಿದಿದೆ ಎಂದಾಗ ಸೇನೆ ನಿಯೋಜನೆಯನ್ನು ಕಡಿಮೆ ಮಾಡುವುದು ಹೇಗೆ ಎಂಬ ಆಲೋಚನೆ, ಪ್ರಕ್ರಿಯೆ ಸಹಜವಾಗಿ ನಡೆಯುತ್ತದೆ. ಭಾರತದ ಕಡೆಯ ಸೇನೆ ನಿಯೋಜನೆಯಲ್ಲಿ ಯಾವುದೇ ಕಡಿತವಾಗಿಲ್ಲ ಅದೇ ರೀತಿ ಚೀನಾ ಕಡೆಯಿಂದಲೂ ಆಗಿಲ್ಲ ಎಂದು ನಾನು ಭಾವಿಸುತ್ತೇನೆ. ಮಾತುಕತೆ ಸಕಾರಾತ್ಮಕವಾಗಿ ಕೊನೆಯಾಗಬೇಕು, ಫಲಪ್ರದವಾಗಬೇಕು ಎಂಬುದು ನಮ್ಮ ನಿರೀಕ್ಷೆಯಾಗಿದೆ ಎಂದರು.

ಯಾವುದೇ ದೇಶ ತನ್ನ ಭೂಪ್ರದೇಶವನ್ನು ವಿಸ್ತರಿಸಲು ನೋಡಿ ನಮ್ಮ ದೇಶದ ಜಾಗವನ್ನು ಅತಿಕ್ರಮಿಸಲು ನೋಡಿದರೆ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲು ಭಾರತ ಶಕ್ತವಾಗಿದೆ, ಬಲಿಷ್ಠವಾಗಿದೆ ಮತ್ತು ಸಾಮರ್ಥ್ಯವನ್ನು ಹೊಂದಿದೆ. ನಮ್ಮ ಭೂಮಿ ಬೇರೆಯವರ ಕೈಗೆ ಹೋಗಲು ಖಂಡಿತಾ ಬಿಡುವುದಿಲ್ಲ ಎಂದು ಪರೋಕ್ಷವಾಗಿ ಚೀನಾಗೆ ರಾಜನಾಥ್ ಸಿಂಗ್ ತಿರುಗೇಟು ನೀಡಿದ್ದಾರೆ.

ಭಾರತದ ಗಮನ ಸೂಕ್ಷ್ಮವಾಗಿ ಸರಿಯಾಗಿ ಕೇಂದ್ರೀಕೃತವಾಗಿದೆ. ಎಲ್ಲಾ ರಾಷ್ಟ್ರಗಳೊಂದಿಗೆ ಶಾಂತಿಯುತ ಸಂಬಂಧ ಹೊಂದಿರುವುದು ನಮ್ಮ ಬಯಕೆಯಾಗಿದೆ. ಬೇರೆ ದೇಶಗಳು ನಮ್ಮ ದೇಶ ಮೇಲೆ ಆಕ್ರಮಣ ಮಾಡಲು ಬಂದರೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕಾದುದು ನಮ್ಮ ಕರ್ತವ್ಯವಾಗಿದೆ ಎಂದರು.

ಹಿಂದಿನ ಸರ್ಕಾರ ಏನು ಮಾಡಿದೆ ಎಂದು ನಾನು ಪ್ರಶ್ನಿಸಲು ಹೋಗುವುದಿಲ್ಲ, ಆದರೆ ಇಂದಿನ ಮೋದಿ ನೇತೃತ್ವದ ಸರ್ಕಾರ ರಾಷ್ಟ್ರದ ಭದ್ರತೆಗೆ ಮೊದಲ ಆದ್ಯತೆ ನೀಡುತ್ತಿದ್ದು ನಮ್ಮ ರಕ್ಷಣಾ ಪಡೆಗಳಿಗೆ ಸಾಧ್ಯವಾದಷ್ಟು ಗರಿಷ್ಠ ಸೌಲಭ್ಯ ನೀಡುತ್ತೇವೆ ಎಂದರು.

ಚೀನಾ ಗಡಿಭಾಗದಲ್ಲಿ ಸಾಕಷ್ಟು ಮೂಲಭೂತ ಸೌಕರ್ಯ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ. ಭಾರತ ಕೂಡ ತನ್ನ ಸೈನಿಕರಿಗೆ ಮೂಲಭೂತ ಸೌಕರ್ಯ ಒದಗಿಸಿಕೊಡಲು ಶೀಘ್ರವಾಗಿ ಅತ್ಯಾಧುನಿಕ ರೀತಿಯಲ್ಲಿ ಮಾಡಿಕೊಡುತ್ತಿದೆ. ಆದರೆ ನಾವು ನಮ್ಮ ಸೈನಿಕರಿಗೆ ಮತ್ತು ಗಡಿಭಾಗದಲ್ಲಿ ಮೂಲಭೂತ ಸೌಕರ್ಯಗಳನ್ನು ನೀಡುತ್ತಿರುವುದು ನಮ್ಮ ದೇಶದ ಜನರಿಗಾಗಿ ಹೊರತು ಬೇರೆ ದೇಶದ ಮೇಲೆ ದಾಳಿ ಮಾಡಲು ಅಲ್ಲ, ಅದುವೇ ನಮಗೂ ಚೀನಾಗೂ ಇರುವ ವ್ಯತ್ಯಾಸ ಎಂದರು.

ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಬಗ್ಗೆ ಕೂಡ ಪ್ರಸ್ತಾಪ ಬಂತು. ಪಾಕಿಸ್ತಾನ ಹಿಂದಿನಿಂದಲೂ ನಮ್ಮ ದೇಶದ ಗಡಿ.ಲ್ಲಿ ಕುಕೃತ್ಯ ನಡೆಸುತ್ತಲೇ ಬಂದಿದೆ. ಆಗ ತಕ್ಕ ಪ್ರತ್ಯುತ್ತರ ನೀಡುವುದು ಮಾತ್ರವಲ್ಲದೆ ಆ ದೇಶದಲ್ಲಿನ ಭಯೋತ್ಪಾದನೆಯನ್ನು ಮಟ್ಟ ಹಾಕುವ ಸಾಮರ್ಥ್ಯ ಕೂಡ ನಮ್ಮ ಸೈನಿಕರಿಗಿದೆ ಎಂಬುದನ್ನು ನಮ್ಮ ಸೈನಿಕರು ತೋರಿಸಿಕೊಟ್ಟಿದ್ದಾರೆ. ಅಗತ್ಯಬಿದ್ದರೆ ಭಯೋತ್ಪಾದಕ ಅಡಗುತಾಣಗಳ ಮೇಲೆ ದಾಳಿ ಮಾಡುತ್ತೇವೆ, ಭಾರತಕ್ಕೆ ಆ ಸಾಮರ್ಥ್ಯವಿದೆ ಎಂದು ಹೇಳಿದರು.

ತನ್ನ ಆತ್ಮಗೌರವಕ್ಕೆ ಧಕ್ಕೆಯುಂಟಾದಾಗ ಅದನ್ನು ಭಾರತ ಸಹಿಸುವುದಿಲ್ಲ, ನಾವು ಮೃದು ಧೋರಣೆ ಹೊಂದಿದ್ದೇವೆ ಎಂದರೆ ಅದರ ಅರ್ಥ ಯಾರು ಬೇಕಾದರೂ ನಮ್ಮ ಗೌರವ, ದೇಶದ ಹೆಮ್ಮೆಯ ಮೇಲೆ ದಾಳಿ ನಡೆಸಬಹುದು ಎಂದಲ್ಲ, ಅದನ್ನು ನೋಡಿ ನಾವು ಮೌನವಾಗಿರಲು ಸಾಧ್ಯವಿಲ್ಲ, ದೇಶದ ಗೌರವ, ಹೆಮ್ಮೆಯ ವಿಚಾರದಲ್ಲಿ ಭಾರತ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಚೀನಾ ಮತ್ತು ಪಾಕಿಸ್ತಾನಕ್ಕೆ ರಾಜನಾಥ್ ಸಿಂಗ್ ಸಂದೇಶ ರವಾನಿಸಿದರು.

ಭಾರತದ ಆಂತರಿಕ ವಿಚಾರದಲ್ಲಿ ಬೇರಾವ ದೇಶಗಳ ಪ್ರಧಾನ ಮಂತ್ರಿಗಳು ಹೇಳಿಕೆ ನೀಡಬಾರದು. ಬೇರೆಯವರ ಮಧ್ಯಸ್ಥಿಕೆಯ ಅಗತ್ಯ ಭಾರತಕ್ಕಿಲ್ಲ. ನಮ್ಮ ಆಂತರಿಕ ವಿಚಾರವನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದರು.

ಜಮ್ಮು-ಕಾಶ್ಮೀರದ ಸ್ಥಳೀಯ ಚುನಾವಣೆಯಲ್ಲಿ ಭಯೋತ್ಪಾದನೆ ವಿರುದ್ಧ ಪ್ರಜಾಪ್ರಭುತ್ವ ಗೆದ್ದಿದೆ
ಜಮ್ಮು ಮತ್ತು ಕಾಶ್ಮೀರದ ಸ್ಥಲೀಯ ಚುನಾವಣೆಯಲ್ಲಿ ಭಯೋತ್ಪಾದನೆ ಸೋಲು ಕಂಡಿದ್ದು, ಪ್ರಜಾಪ್ರಭುತ್ವ ಗೆಲವು ಸಾಧಿಸಿದೆ. 

ಚುನಾವಣೆಯಲ್ಲಿ ಸ್ಪರ್ಧಿಯಲು ಪ್ರತೀಯೊಬ್ಬರಿಗೂ ಸ್ವಾತಂತ್ರ್ಯವಿದೆ. ಯಾರನ್ನು ಇಲ್ಲಿ ತಡೆಹಿಡಿಯಲಾಗಿಲ್ಲ. ಏನೇ ಆದರೂ ಚುನಾವಣೆ ಫಲಿತಾಂಶ ಭಯೋತ್ಪಾದನೆ, ಪ್ರತ್ಯೇಕತವಾದಿಗಳು ಸೋಲು ಕಾಣುವಂತೆ ಮಾಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಗೆಲುವು ಸಾಧಿಸಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com