ಲಾಕ್'ಡೌನ್ ಕುರಿತು ರಾಜ್ಯ ಸರ್ಕಾರಗಳ ಸಲಹೆಗಳನ್ನು ಪ್ರಧಾನಿ ಒಪ್ಪಲಿಲ್ಲ: ಕೇಂದ್ರದ ವಿರುದ್ಧ ರಾಜಸ್ತಾನ ಸಿಎಂ ಬೇಸರ

ಕೊರೋನಾ ವಿರುದ್ಧದ ಹೋರಾಟ ಹಾಗೂ ಲಾಕ್'ಡೌನ್ ಕುರಿತಂತೆ ರಾಜ್ಯ ಸರ್ಕಾರಗಳು ನೀಡಿದ್ದ ಸಲಹೆಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಒಪ್ಪಲಿಲ್ಲ ಎಂದು ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕೇಂದ್ರ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಅಶೋಕ್ ಗೆಹ್ಲೋಟ್
ಅಶೋಕ್ ಗೆಹ್ಲೋಟ್

ಕೊರೋನಾ ವಿರುದ್ಧದ ಹೋರಾಟ ಹಾಗೂ ಲಾಕ್'ಡೌನ್ ಕುರಿತಂತೆ ರಾಜ್ಯ ಸರ್ಕಾರಗಳು ನೀಡಿದ್ದ ಸಲಹೆಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಒಪ್ಪಲಿಲ್ಲ ಎಂದು ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕೇಂದ್ರ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ ಜೊತೆಗೆ ಮಾತನಾಡಿರುವ ಅವರು, ಕೊರೋನಾ ಲಾಕ್'ಡೌನ್ ಕುರಿತು ಪ್ರಧಾನಮಂತ್ರಿಗಳು ವಿಡಿಯೋ ಕಾನ್ಪರೆನ್ಸ್ ಮೂಲಕ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದು, ಈ ವೇಳೆ ರಾಜ್ಯಗಳು ನೀಡಿದ್ದ ಸಲಹೆಗಳನ್ನು ಅವರು ಒಪ್ಪಿರಲಿಲ್ಲ ಎಂದು ಹೇಳಿದ್ದಾರೆ. 

ಸಂವಾದದ ವೇಳೆ ಪ್ರಧಾನಮಂತ್ರಿಗಳು ಮುಖ್ಯಮಂತ್ರಿಗಳ ಸಲಹೆಗಳನ್ನು ಕೇಳಿದ್ದರೇ? 
ಮಾತುಕತೆ ವೇಳೆ ನಾನೂ ಕೂಡ ಪ್ರಧಾನಮಂತ್ರಿಗಳಿಗೆ ಕೆಲ ಸರಳ ಸಲಹೆಗಳನ್ನು ನೀಡಿದ್ದೆ. ಆದರೆ, ಅವರು ಅದನ್ನು ಒಪ್ಪಿರಲಿಲ್ಲ. ಕೊರೋನಾ ವಿರುದ್ಧ ರಾಜ್ಯ ಸರ್ಕಾರಗಳು ಹೋರಾಡುತ್ತಿದ್ದು, ಕೇಂದ್ರ ಕೇವಲ ಮಾರ್ಗದರ್ಶನ ನೀಡುತ್ತಿದೆ. 
ರಾಜ್ಯ ಸರ್ಕಾರದ ಆದಾಯ ಶೇ.30ಕ್ಕೆ ಇಳಿಕೆ ಕಂಡಿರುವ ಹಿನ್ನೆಲೆಯಲ್ಲಿ ರಾಜ್ಯಗಳಿಗೆ ತನ್ನ ರಾಜ್ಯದಿಂದಲೇ ಆರ್ಥಿಕ ಬಲ ದೊರೆಯುವವರೆಗೂ ಕೇಂದ್ರ ನೀಡಿರುವ ರೂ.20 ಸಾವಿರ ಕೋಟಿ ಪ್ಯಾಕೇಜ್'ನಿಂದ ಉಪಯೋಗವಾಗುವುದಿಲ್ಲ. ಕೊರೋನಾ ವಿರುದ್ಧ ಹೋರಾಟಡಲು ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಿಗೆ ರೂ.1 ಲಕ್ಷ ಕೋಟಿ ನೀಡಬೇಕು. ಹಾಗೂ ಸಾಂಕ್ರಾಮಿಕ ರೋಗವನ್ನು ಮಟ್ಟಹಾಕಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡೂ ಕೈಜೋಡಿಸಿ ಕೆಲಸ ಮಾಡಬೇಕು. 

ಅಭಿವೃದ್ಧಿ ಮೇಲೆ ಕೋವಿಡ್-19 ಯಾವ ರೀತಿ ಪರಿಣಾಮ ಬೀರುತ್ತಿದೆ? 
ಏಪ್ರಿಲ್ ಒಂದೇ ತಿಂಗಳಿನಲ್ಲಿ ರಾಜಸ್ತಾನಕ್ಕೆ ರೂ.11,000 ಕೋಟಿ ನಷ್ಟವಾಗಿದೆ. ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುವುದಕ್ಕೂ ಮುನ್ನವೇ ರಾಜ್ಯದ ಆದಾಯದ ಮೇಲೆ ಕೊರೋನಾ ಗಂಭೀರ ಪರಿಣಾಮ ಬೀರಿತ್ತು. 
ಬಜೆಟ್ ಗುರಿಯನ್ನು ಹೇಗೆ ತಲುಪುವುದು ಎಂಬುದೇ ಇದೀಗ ನಮ್ಮ ಚಿಂತೆಯಾಗಿದೆ. ಆರ್'ಬಿಐ ಹಾಗೂ ನೋಟುಗಲ ಮುದ್ರಣಗಳು ಕೇಂದ್ರದ ನಿಯಂತ್ರಣದಲ್ಲಿರುವುದರಿಂದ ಕೇಂದ್ರ ಸರ್ಕಾರ ನಮಗೆ ಸಹಾಯ ಮಾಡಬೇಕು. ಈಗಷ್ಟೇ ಕೈಗಾರಿಕೋದ್ಯಮಗಳು ತನ್ನ ಕಾರ್ಯಗಳನ್ನು ಪುನರಾರಂಭಿಸಿದ್ದು, ಆದಾಯ ಮೊದಲಿನ ಹಾದಿ ಹಿಡಿಯಲು ಇನ್ನೂ 6 ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಸಂಕಷ್ಟದಲ್ಲಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸಹಾಯ ಮಾಡಬೇಕಿದೆ. 

ಎಂಎಸ್‌ಎಂಇ ವಲಯವನ್ನು ಪುನರುಜ್ಜೀವನಗೊಳಿಸಲು ಪ್ರಧಾನಿ ಏನು ಮಾಡಬೇಕಿತ್ತು? 
ಪ್ರಧಾನಮಂತ್ರಿ ರೈತರ ಸಾಲವನ್ನು ಮನ್ನಾ ಮಾಡಬೇಕಾಗಿತ್ತು. ಎಂಎಸ್‌ಎಂಇಗಳ ಮೇಲಿನ ಬಾಕಿ ಇರುವ ಸಾಲಗಳ ಮೇಲಿನ ಬಡ್ಡಿಯನ್ನೂ ಸಹ ಮನ್ನಾ ಮಾಡಬೇಕಾಗಿತ್ತು. ಅಲ್ಲದೆ, ಹೊಸ ಸಾಲಗಳ ಮೇಲಿನ ಬಡ್ಡಿಯನ್ನು ಕಡಿಮೆ ಮಾಡಬೇಕಾಗಿತ್ತು.


ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಕೆಲವು ಕ್ರಮಗಳನ್ನು ಸೂಚಿಸಿ ಪ್ರಧಾನಿಗೆ ಪತ್ರ ಬರೆದಿದ್ದಾರೆ?
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರ ವಿರೋಧ ಪಕ್ಷಗಳು ನೀಡಿದ ಸಲಹೆಗಳಿಗೆ ಪ್ರಧಾನಿ ಸ್ಪಂದಿಸಬೇಕು.

ಕೇಂದ್ರ ಸರ್ಕಾರ ವಿರೋಧ ಪಕ್ಷಗಳ ಸಲಹೆಗಳನ್ನು ತಾಳ್ಮೆಯಿಂದ ಆಲಿಸಬೇಕು. ಶ್ರಮಿಕ್ ರೈಲುಗಳು ಹಾಗೂ ಬಸ್ ಗಳಲ್ಲಿ ವಲಸೆ ಕಾರ್ಮಿಕರ ಸಂಚಾರ ಕುರಿತು ನಡೆಯುತ್ತಿರುವ ರಾಜಕೀಯವನ್ನು ನಿಯಂತ್ರಿಸಬೇಕು. 

COVID-19 ಮತ್ತು ಲಾಕ್‌ಡೌನ್ ನಿಂದಾಗಿ ಎದುರಾಗಿರುವ ಬಿಕ್ಕಟ್ಟನ್ನು ನಿಭಾಯಿಸಲು ಸರ್ಕಾರದ ಭವಿಷ್ಯದ ಕಾರ್ಯತಂತ್ರವನ್ನು ಪ್ರಧಾನಮಂತ್ರಿಗಳು ಹಂಚಿಕೊಳ್ಳಬೇಕು. ಭವಿಷ್ಯದಲ್ಲಿ ಕೇಂದ್ರ ಸರ್ಕಾರ ಏನು ಮಾಡುತ್ತದೆ ಎಂಬುದನ್ನು ನಾವೂ ತಿಳಿದುಕೊಳ್ಳಬೇಕು. ಹೀಗಾಗಿ ಮುಂದೆ ಬಂದು ಪ್ರಧಾನಮಂತ್ರಿಗಳು ಅವರ ಕಾರ್ಯತಂತ್ರಗಳನ್ನು ಹಂಚಿಕೊಳ್ಳಬೇಕು. 

ವಲಸೆ ಕಾರ್ಮಿಕರ ಸಂಕಷ್ಟ ಕುರಿತು ರಾಜಕೀಯವಾಗುತ್ತಿದೆ? 
ವಲಸೆ ಕಾರ್ಮಿಕರ ಸಂಚಾರಕ್ಕಾಗಿ ನಮ್ಮ ಸರ್ಕಾರ ರೂ.25.25 ಕೋಟಿ ಖರ್ಚು ಮಾಡಿದೆ. ಈಗಾಗಲೇ 13 ಲಕ್ಷ ಕಾರ್ಮಿಕರು ಅವರವರ ರಾಜ್ಯಕ್ಕೆ ತೆರಳಿದ್ದಾರೆ. ಇನ್ನೂ ರಾಜ್ಯದಲ್ಲಿ 6.15 ಲಕ್ಷ ಕಾರ್ಮಿಕರಿದ್ದಾರೆ. 

ಬಲಿಷ್ಠ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆಯೇ? 
ಗಾಂಧಿ ಪರಿವಾರದೊಂದಿಗೆ ಪಕ್ಷ ಒಗ್ಗಟ್ಟಿನಿಂದಲೇ ಇದೆ. ವಿರೋಧ ಪಕ್ಷವಾಗಿ ನಾವು ಯಾವುದೆಲ್ಲಾ ಕಾರ್ಯವನ್ನು ಮಾಡಬೇಕೋ ಅದನ್ನು ಮಾಡುತ್ತಿದೆ. ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಪಕ್ಷದ ಭವಿಷ್ಯ ಉಜ್ವಲಗೊಳ್ಳಲಿದೆ. ಈಗಾಗಲೇ ಪಕ್ಷದ ಪ್ರತಿಯೊಬ್ಬರ ನಡುವೆ ಉತ್ತಮ ಬಾಂಧವ್ಯವಿದೆ ಮತ್ತು ಎಲ್ಲರೂ ತಮ್ಮ ಕರ್ತವ್ಯಗಳನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ ಎಂದು ನಾನು ನಂಬುತ್ತೇನೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com