ಕೊರೋನಾ ವೈರಸ್ ವಿರುದ್ಧದ ನಿರ್ಣಾಯಕ ಹೋರಾಟಕ್ಕೆ ಭಾರತ ಹೇಗೆ ಸಿದ್ಧವಾಗುತ್ತಿದೆ ಗೊತ್ತಾ?

ವಿಶ್ವದ 190 ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ಭಾರತದಲ್ಲಿ ಈಗಾಗಲೇ ಸೋಂಕಿತರ ಸಂಖ್ಯೆ 900ರ ಗಡಿ ದಾಟಿದೆ. ಅಂತೆಯೇ 21 ಮಂದಿ ಬಲಿಯಾಗಿದ್ದು, ಸಾವು ಮತ್ತು ಸೋಂಕಿತರ ಸಂಖ್ಯೆ ತಡೆಯುವ ನಿಟ್ಟಿನಲ್ಲಿ ಭಾರತ  ಸಮರೋಪಾದಿಯಲ್ಲಿ ಸಿದ್ಧತೆ ನಡೆಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ವಿಶ್ವದ 190 ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ಭಾರತದಲ್ಲಿ ಈಗಾಗಲೇ ಸೋಂಕಿತರ ಸಂಖ್ಯೆ 900ರ ಗಡಿ ದಾಟಿದೆ. ಅಂತೆಯೇ 21 ಮಂದಿ ಬಲಿಯಾಗಿದ್ದು, ಸಾವು ಮತ್ತು ಸೋಂಕಿತರ ಸಂಖ್ಯೆ ತಡೆಯುವ ನಿಟ್ಟಿನಲ್ಲಿ ಭಾರತ  ಸಮರೋಪಾದಿಯಲ್ಲಿ ಸಿದ್ಧತೆ ನಡೆಸಿದೆ.

ದೇಣಿಗೆ ಸಂಗ್ರಹ
ವಿಶ್ವಾದ್ಯಂತ ಸುಮಾರು 25 ಸಾವಿರಕ್ಕೂ ಅಧಿಕ ಮಂದಿ ಈ ವೈರಸ್ ಗೆ ಬಲಿಯಾಗಿದ್ದು, ದಿನೇ ದಿನೇ ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಅಮೆರಿಕ, ಇಟಲಿ ಮತ್ತು ಫ್ರಾನ್ಸ್ ನಂತಹ ದಿಗ್ಗಜ ರಾಷ್ಟ್ರಗಳೇ ಈ ಕೊರೋನಾ  ವೈರಸ್ ಮುಂದೆ ಮಂಡಿಯೂರಿದ್ದು, ಈ ದೇಶಗಳಲ್ಲೇ ಸಾವಿನ ಸಂಖ್ಯೆ ಹೆಚ್ಚಿದೆ. ಇನ್ನು ಭಾರತದಲ್ಲಿ ಈ ಮಾರಕ ವೈರಸ್ 2ನೇ ಹಂತದಲ್ಲಿದ್ದು, ಮೂರನೇ ಹಂತಕ್ಕೇರದಂತೆ ಭಾರತ ಸರ್ಕಾರ ಹಸ ಸಾಹಸ ಪಡುತ್ತಿದೆ. ಇನ್ನು ಭಾರತ ಸರ್ಕಾರದ ಈ ಹೋರಾಟಕ್ಕೆ ಇಡೀ ದೇಶವೇ  ಒಗ್ಗೂಡಿದ್ದು, ವೈರಸ್ ವಿರುದ್ಧದ ಹೋರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಾಪಿಸಿರುವ ನಿಧಿಗೆ ದೇಶದ ಖ್ಯಾತನಾಮ ಕ್ರಿಕೆಟಿಗರು, ಉದ್ಯಮಿಗಳು, ಸಿನಿ ತಾರೆಯರು, ರಾಜಕಾರಣಿಗಳು, ಗಣ್ಯರು ಮತ್ತು ವಿವಿಧ ವಲಯಗಳ ಪ್ರಮುಖರು ನೂರಾರು ಕೋಟಿ ರೂಗಳ ದೇಣಿಗೆ  ನೀಡುತ್ತಿದ್ದಾರೆ. 

ಕೋರೊನಾ ಆಸ್ಪತ್ರೆಗಳ ನಿರ್ಮಾಣ
ಭಾರತದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಕೊರೋನಾ ವೈರಸ್ ಗಾಗಿಯೇ ಪ್ರತ್ಯೇಕ ಆಸ್ಪತ್ರೆಗಳ ನಿರ್ಮಾಣ ಸಮರೋಪಾದಿಯಲ್ಲಿ ನಡೆಯುತ್ತಿದೆ. ಅತ್ತ ಮುಂಬೈನಲ್ಲಿ ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ 200 ಬೆಡ್ ಗಳ ಆಸ್ಪತ್ರೆ ನಿರ್ಮಾಣ ಮಾಡಿದ್ದು,  ಇತ್ತ ಕರ್ನಾಟಕದಲ್ಲಿ ವಿಕ್ಟೋರಿಯಾದಂತಹ ದೊಡ್ಡ ಆಸ್ಪತ್ರೆಗಳನ್ನು ಕೊರೋನಾ ಚಿಕಿತ್ಸೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಅಲ್ಲದೆ ಇನ್ನೂ ಉದ್ಘಾಟನೆಯಾಗದ ಎಲ್ಲ ಆಸ್ಪತ್ರೆಗಳನ್ನೂ ಕೊರೋನಾ ಚಿಕಿತ್ಸೆಗಾಗಿ ಬಳಸಿಕೊಳ್ಳಲಾಗುತ್ತದೆ ಎಂದು ಕರ್ನಾಟಕ ಸರ್ಕಾರ ಹೇಳಿದೆ. ದೇಶದ ವಿವಿಧ  ಭಾಗಗಳಲ್ಲಿ ಇದೇ ಉಪಾಯವನ್ನು ಕೊರೋನಾ ವಿರುದ್ಧದ ಹೋರಾಟಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇದಲ್ಲದೆ ಸರ್ಕಾರದ ಹೋರಾಟಕ್ಕೆ ಸಾಥ್ ನೀಡಿರುವ ರೈಲ್ವೇ ಇಲಾಖೆ ತನ್ನ ರೈಲುಗಳನ್ನೇ ಕೊರೋನಾ ಆಶ್ಪತ್ರೆಗಳನ್ನಾಗಿ ಮಾಡಲು ಮುಂದಾಗಿದೆ. ಇದಕ್ಕಾಗಿ ರೈಲು ಬೋಗಿಗಳಲ್ಲೇ  ವಿಶೇಷ ವಾರ್ಡ್ ಗಳನ್ನಾಗಿ ಮಾರ್ಪಡಿಸುತ್ತಿದೆ. ಅಗತ್ಯ ಬಿದ್ದರೆ ಸರ್ಕಾರಿ ಬಸ್ ಗಳನ್ನೂ ಕೂಡ ಸಂಚಾರಿ ಆಸ್ಪತ್ರೆಯನ್ನಾಗಿ ಮಾರ್ಪಡಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಲಾಕ್ ಡೌನ್ ನಡುವೆಯೂ ಸಮರೋಪಾದಿಯಲ್ಲಿ ವೆಂಟಿಲೇಟರ್ ಗಳ ನಿರ್ಮಾಣ
ಇನ್ನು ಕೇಂದ್ರ ಸರ್ಕಾರ ಜೀವರಕ್ಷಕ ವೆಂಟಿಲೇಟರ್ ಗಳ ನಿರ್ಮಾಣಕ್ಕೆ ಕಾರ್ಯ ಪ್ರವೃತ್ತವಾಗಿದ್ದು, ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಲಕ್ಷಾಂತರ ವೆಂಟಿಲೇಟರ್ ಗಳ ನಿರ್ಮಾಣಕ್ಕೆ ಕೇಂದ್ರಸರ್ಕಾರ ಮತ್ತು ರಾಜ್ಯಸರ್ಕಾರಗಳು ಮುಂದಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರು  ವೆಂಟಿಲೇಟರ್ ಗಳ ರಫ್ತು ಮಾಡುವ ದೇಶಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಲಕ್ಷಾಂತರ ವೆಂಟಿಲೇಟರ್ ಗಳ ಖರೀದಿ ಕುರಿತು ಮಾತುಕತೆ ನಡೆಸುತ್ತಿದ್ದಾರೆ. ಇದಲ್ಲದೇ ದೇಶದ ಖ್ಯಾತನಾಮ ವೈದ್ಯಕೀಯ ಪರಿಕರಣ ಸರಬರಾಜು ಸಂಸ್ಥೆಗಳೂ ಕೂಡ ವೆಂಟಿಲೇಟರ್ ಗಳ ತಯಾರಿಕೆಯಲ್ಲಿ  ಮುಳುಗಿವೆ. ಇದಕ್ಕೆ ಸಾಥ್ ಎಂಬಂತೆ ದೇಶದ ಖ್ಯಾತನಾಮ ಉದ್ಯಮಿಗಳೂ ಕೂಡ ಇದೀಗ ವೆಂಟಿಲೇಟರ್ ಗಳ ನಿರ್ಮಾಣಕ್ಕೆ ಕೈ ಹಾಕಿದ್ದು, ಕಡಿಮೆ ಸಮಯದಲ್ಲಿ ಗರಿಷ್ಠ ವೆಂಟಿಲೇಟರ್ ಗಳ ನಿರ್ಮಾಣ ಮಾಡಲು ಹರಸಾಹಸ ಪಡಲಾಗುತ್ತಿದೆ. ಸರ್ಕಾರಿ ಸ್ವಾಮ್ಯದ ಭಾರತ್ ಹೆವಿ  ಎಲೆಕ್ಟ್ರಿಕಲ್ಸ್, ಭಾರತ್ ಎಲೆಕ್ಟ್ರಿಕಲ್ಸ್ ನತಂಹ ಸಂಸ್ಥೆಗಳೂ ಕೂಡ ವೆಂಟಿಲೇಟರ್ ಗಳ ನಿರ್ಮಾಣ ಕಾರ್ಯಕ್ಕೆ ಕೈ ಜೋಡಿಸಿವೆ. 

ಭಾರತೀಯ ಸೇನೆ ಸಾಥ್
ಇನ್ನು ದೇಶಕ್ಕೆ ಯಾವುದೇ ಅಪಾಯ ಎದುರಾದರೂ ತಾನೇ ಮೊದಲು ನಿಲ್ಲುವ ಭಾರತೀಯ ಸೇನೆ ಕೊರೋನಾ ವಿರುದ್ಧದ ಹೋರಾಟದಲ್ಲೂ ತಾನೇ ಮುಂದೆ ನಿಂತಿದೆ. ಕೊರೋನಾ ವಿರುದ್ಧ ಭಾರತ ನಡೆಸುತ್ತಿರುವ ಹೋರಾಟಕ್ಕೆ ಕೈ ಜೋಡಿಸಿರುವ ಸೇನೆ ದೇಶದಲ್ಲಿರುವ ತನ್ನ 28 ಸೇನಾ  ಆಸ್ಪತ್ರೆಗಳನ್ನು ಕೊರೋನಾ ಚಿಕಿತ್ಸೆಗೆ ಬಳಸಿಕೊಳ್ಳುವಂತೆ ಹೇಳಿದೆ. ಅಲ್ಲದೆ ತನ್ನ ಎಲ್ಲಾ ಸೈನಿಕರಿಂದ ತಿಂಗಳ ವೇತನವನ್ನು ದೇಣಿಗೆಯಾಗಿ ಸಂಗ್ರಹಿಸಿ ಸರ್ಕಾರಕ್ಕೆ ನೀಡಿದೆ. ಸೇನಾ ಆಸ್ಪತ್ರೆಗಳು ಮಾತ್ರವಲ್ಲದೇ ತುರ್ತು ವೈದ್ಯಕೀಯ ಪರೀಕ್ಷೆಗೆ ಸೇನಾ ಲ್ಯಾಬೋರೇಟರಿಗಳ ಬಳಕೆಗೂ  ಅನುವು ಮಾಡಿಕೊಡಲಾಗಿದೆ.

ಡಿಆರ್ ಡಿಒ ಸಂಶೋಧನೆ
ಇನ್ನು ಅತ್ಯಾಧುನಿಕ ಸೇನಾ ಪರಿಕರಗಳ ಸಂಶೋಧನೆಯಲ್ಲಿ ನಿರತರಾಗಿರುವ ಡಿಆರ್ ಡಿಒ ಕೂಡ ಅತ್ಯಂತ ವೇಗವಾಗಿ ಕೊರೋನಾ ವೈರಸ್ ಪರೀಕ್ಷೆ ನಡೆಸಬಲ್ಲ ಪರಿಕರದ ಸಂಶೋಧನೆಯಲ್ಲಿ ತೊಡಗಿದೆ, ಅಷ್ಟು ಮಾತ್ರವಲ್ಲದೇ ವೈದ್ಯಕೀಯ ಸಿಬ್ಬಂದಿಗಳ ಪರಿಕರಗಳ  ಸಂಶೋಧನೆಯಲ್ಲೂ ಡಿಆರ್ ಡಿಒ ವಿಜ್ಞಾನಿಗಳು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದಕ್ಕೆ ಇಂಬು ಎನ್ನುವಂತೆ ಸರ್ಜಿಕಲ್ ಮೆಡಿಕಲ್ ಡಿವೈಸಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ವೈದ್ಯಕೀಯ ಸಿಬ್ಬಂದಿಗಳಿಗಾಗಿ ಪಿಪಿಕೆ ಕಿಟ್ (Personal Protection Kits)ಗಳನ್ನು ತಯಾರು  ಮಾಡಿದೆ. ಈ ಪಿಪಿಕೆ ಕಿಟ್ ವೈದ್ಯಕೀಯ ಸಿಬ್ಬಂದಿಯ ಅಡಿಯಿಂದ ಮುಡಿಯವರೆಗಿನ ಎಲ್ಲವನ್ನು ಮುಚ್ಚಿ ಆತನಿಗೆ ವೈರಸ್ ತಾಗದಂತೆ ಮುಂಜಾಗ್ರತೆ ವಹಿಸುತ್ತದೆ. ಈ ಕಿಟ್ ನಲ್ಲಿ ಮಾಸ್ಕ್, ಹ್ಯಾಂಡ್ ಗ್ಲೌಸ್, ಗಾಗಲ್ ಗಳು ಮತ್ತು ಶೂ ಕೂಡ ಇದೆ.

ಸ್ಯಾನಿಟೈಸರ್ಸ್ ಮತ್ತು ಮಾಸ್ಕ್ ಗಳ ನಿರ್ಮಾಣಕ್ಕೆ ಖೈದಿಗಳ ಬಳಕೆ
ಇನ್ನು ವೈರಸ್ ನಿಯಂತ್ರಣದಲ್ಲಿ ಸ್ಯಾನಿಟೈಸರ್ಸ್ ಮತ್ತು ಮಾಸ್ಕ್ ಗಳ ಪಾತ್ರ ಗಣನೀಯವಾಗಿದ್ದು, ಇದೇ ಕಾರಣಕ್ಕೆ ಸ್ಯಾನಿಟೈಸರ್ಸ್ ಮತ್ತು ಮಾಸ್ಕ್ ಗಳ ತಯಾರಿಕಾ ಸಂಸ್ಥೆಗಳು ಇವುಗಳ ತಯಾರಿಕೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಮಾಡಿವೆ. ಇದಾಗ್ಯೂ ದೇಶದಲ್ಲಿ  ಸ್ಯಾನಿಟೈಸರ್ಸ್ ಮತ್ತು ಮಾಸ್ಕ್ ಗಳ ಗಣನೀಯ ಕೊರತೆ ಕಾಣುತ್ತಿದೆ. ಇದೇ ಕಾರಣಕ್ಕೆ ದೇಶದ ಜೈಲುಗಳಲ್ಲಿರುವ ಲಕ್ಷಾಂತರ ಖೈದಿಗಳು ಇದೀಗ ಸ್ಯಾನಿಟೈಸರ್ಸ್ ಮತ್ತು ಮಾಸ್ಕ್ ಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಖೈದಿಗಳಿಂದ  ಪ್ರತಿನಿತ್ಯ 15 ಸಾವಿರ ಮಾಸ್ಕ್ ಗಳ ತಯಾರಿಸಲಾಗುತ್ತಿದೆ. ಹೋಮ್ ಮೇಡ್ ಸ್ಯಾನಿಟೈಸರ್ಸ್ ಗಳ ತಯಾರಿಕೆ ಕೂಡ ಗಣನೀಯವಾಗಿ ಹೆಚ್ಚಳವಾಗಿದೆ.

ಲಾಕ್ ಡೌನ್ ಕಠಿಣ ನಿಯಮಗಳ ಜಾರಿ
ಕೊರೋನಾ ವೈರಸ್ ಹರಡದಂತೆ ಪ್ರಧಾನಿ ಮೋದಿ ದೇಶಾದ್ಯಂತ ಲಾಕ್ ಡೌನ್ ಘೋಷಣೆ ಮಾಡಿದ್ದು, ಇದಾಗ್ಯೂ ನಿತ್ಯ ಬಳಕೆ ವಸ್ತುಗಳಿಗಾಗಿ ಜನರು ಯಾವುದೇ ರೀತಿಯ ಪ್ರಾಣಾಪಾಯ ಲೆಕ್ಕಿಸದೇ ಬೀದಿಗೆ ಬರುತ್ತಿದ್ದಾರೆ ಮಾರುಕಟ್ಟೆಯಂತಹ ಪ್ರದೇಶಗಳಲ್ಲಿ ಯಾವುದೇ ರೀತಿಯ  ಮುಂಜಾಗ್ರತೆ ವಹಿಸದೆ ಖರೀದಿಯಲ್ಲಿ ತೊಡಗಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಲಾಕ್ ಡೌನ್ ನಿಯಮ ಮತ್ತಷ್ಟು ಕಠಿಣವಾದರೂ ಅಚ್ಚರಿಯೇನಿಲ್ಲ. ಈ ಕುರಿತಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳೊಂದಿಗೆ ನಿರಂತರವಾಗಿ ಚರ್ಚೆ ನಡೆಸುತ್ತಿದೆ. 

ಕ್ವಾರಂಟೈನ್ ಗೆ ಕಠಿಣ ನಿಯಮ
ಇನ್ನು ವೈರಸ್ ಮೂಲ ಕ್ವಾರಂಟೈನ್ ಆದ ವ್ಯಕ್ತಿಗಳನ್ನು ಕಡ್ಡಾಯವಾಗಿ ದಿಗ್ಭಂಧನದಲ್ಲಿರಿಸಬೇಕು ಎಂಬ ನಿಯಮವಿದೆ. ಇದಾಗ್ಯೂ ಕ್ವಾರಂಟೈನ್ ನಲ್ಲಿರುವ ವ್ಯಕ್ತಿಗಳು ಯಾವುದೇ ಭೀತಿ ಇಲ್ಲದೇ ಬೀದಿಗಳಲ್ಲಿ ಸುತ್ತುತ್ತಿದ್ದಾರೆ. ಆ ಮೂಲಕ ತಾವು ಮಾತ್ರವಲ್ಲ ಇಡೀ ದೇಶದ ನಾಗಕರಿಕರಿಗೂ  ವೈರಸ್ ಸೋಂಕು ತಗುಲಲು ನೇರ ಕಾರಣರಾಗುತ್ತಿದ್ದಾರೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಕ್ವಾರಂಟೈನ್ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ನಿಯಮ ಜಾರಿಗೆ ಮುಂದಾಗಿದೆ. ಪಾಸ್ ಪೋರ್ಟ್ ಜಪ್ತಿ, ವೀಸಾ ನಿರ್ಬಂಧ ಮಾತ್ರವಲ್ಲದೇ 2ವರ್ಷ ಜಾಮೀನು ರಹಿತ ಜೈಲು ಶಿಕ್ಷೆ  ವಿಧಿಸುವ ಕಾನೂನು ಜಾರಿ ಕುರಿತು ಗಂಭೀರ ಚಿಂತನೆಯಲ್ಲಿ ತೊಡಗಿದೆ.

ಜನರು ಕೈ ಜೋಡಿಸದ ಹೊರತು ವೈರಸ್ ನಿಯಂತ್ರಣ ಅಸಾಧ್ಯ
ಇನ್ನು ಸರ್ಕಾರ ಏನೇ ಕ್ರಮ ಕೈಗೊಂಡರು ಸಾರ್ವಜನಿಕರ ಸಹಕಾರ ವಿಲ್ಲದೇ ವೈರಸ್ ನಿಯಂತ್ರಣ ಅಸಾಧ್ಯ. ಹೀಗಾಗಿ ಈ ಹಿಂದೆ ಪ್ರಧಾನಿ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಸಿಕ್ಕ ಅಭೂತ ಬೆಂಬಲವೇ 21 ದಿನಗಳ ಲಾಕ್ ಡೌನ್ ಗೂ ಸಿಗಬೇಕಿದೆ. ಅಲ್ಲದೆ ಜನರು ಮುಂಜಾಗ್ರತೆ  ವಹಿಸಿ ಮನೆಯಲ್ಲೇ ಇದ್ದು, ವೈರಸ್ ಪ್ರಸರಿಸದಂತೆ ನೋಡಿಕೊಳ್ಳಬೇಕು. ಮನೆಯಲ್ಲೇ ಇದ್ದರೂ ಆಗಾಗ ಎರಡೂ ಕೈಗಳನ್ನು ತೊಳೆದುಕೊಳ್ಳುತ್ತಿರಬೇಕು. ಮನೆಯನ್ನು ಸ್ವಚ್ಛಗೊಳಿಸಿ ಸಾಧ್ಯವಾದಷ್ಟೂ ವೈರಸ್ ನಿಂದ ದೂರ ಇರಬೇಕು. ಆಗ ಮಾತ್ರ ಈ ಕೊರೋನಾ ವೈರಸ್ ನಮ್ಮ  ದೇಶದಿಂದ ತೊಲಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com