ಕೊರೋನಾ ವೈರಸ್ ಲಾಕ್ ಡೌನ್ 5.0: ಪ್ರವಾಸೋದ್ಯಮ, ಹೊಟೆಲ್ ಗಳಿಗೆ ವಿನಾಯಿತಿ ಸಾಧ್ಯತೆ!

ಕೊರೋನಾ ವೈರಸ್ ಲಾಕ್ ಡೌನ್ 4.0 ಭಾನುವಾರಕ್ಕೆ ಅಂತ್ಯವಾಗಲಿದ್ದು, ಜೂನ್ 1 ರಿಂದ 5ನೇ ಹಂತದ ಲಾಕ್ ಡೌನ್ ಜಾರಿಯಾಗುವ ಸಾಧ್ಯತೆ ಇದೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತನ್ನ ಲಾಕ್ ಡೌನ್ ನಿಯಮಾವಳಿಗಳಿಂದ ಪ್ರವಾಸೋದ್ಯಮ ಮತ್ತು ಹೊಟೆಲ್  ಗಳಿಗೆ ವಿನಾಯಿತಿ ನೀಡುವ ಸಾಧ್ಯತೆ ಇದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೊರೋನಾ ವೈರಸ್ ಲಾಕ್ ಡೌನ್ 4.0 ಭಾನುವಾರಕ್ಕೆ ಅಂತ್ಯವಾಗಲಿದ್ದು, ಜೂನ್ 1 ರಿಂದ 5ನೇ ಹಂತದ ಲಾಕ್ ಡೌನ್ ಜಾರಿಯಾಗುವ ಸಾಧ್ಯತೆ ಇದೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತನ್ನ ಲಾಕ್ ಡೌನ್ ನಿಯಮಾವಳಿಗಳಿಂದ ಪ್ರವಾಸೋದ್ಯಮ ಮತ್ತು ಹೊಟೆಲ್  ಗಳಿಗೆ ವಿನಾಯಿತಿ ನೀಡುವ ಸಾಧ್ಯತೆ ಇದೆ.

ಜೂನ್ 1ರಿಂದ ಐದನೇ ಹಂತದ ಲಾಕ್‌ಡೌನ್ ಜಾರಿಗೆ ಬಂದಲ್ಲಿ ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರದ ಚಟುವಟಿಕೆಗಳಿಗೆ ವಿನಾಯಿತಿ ನೀಡುವ ಬಗ್ಗೆ ರಾಜ್ಯ ಸರ್ಕಾರಗಳು ನೀಡಿರುವ ಸಲಹೆಯನ್ನು ಕೇಂದ್ರ ಪರಿಗಣಿಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಪುದುಚೇರಿ, ಕೇರಳ,  ಗೋವಾ, ಮತ್ತು ಈಶಾನ್ಯ ರಾಜ್ಯಗಳ ಆರ್ಥಿಕತೆಯು ಬಹುತೇಕ ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರವನ್ನು ಅವಲಂಬಿಸಿದೆ. ಈ ಲಾಕ್‌ಡೌನ್‌ನಿಂದ ಕ್ಷೇತ್ರಗಳಿಗೆ ಇನ್ನೂ ವಿನಾಯಿತಿ ದೊರೆತಿಲ್ಲ. ಹೀಗಾಗಿ ಈ ರಾಜ್ಯಗಳು ಮೊದಲಿನಿಂದಲೂ ಪ್ರವಾಸೋಧ್ಯಮ ಕ್ಷೇತ್ರಕ್ಕೆ ವಿನಾಯಿತಿ  ನೀಡುವ ಕುರಿತು ಸರ್ಕಾರಕ್ಕೆ ಮನವಿ ಮಾಡಿದ್ದವು. ಹೀಗಾಗಿ ಕೇಂದ್ರ ಸರ್ಕಾರ ಪ್ರವಾಸೋಧ್ಯಮ ಮತ್ತು ಹೊಟೆಲ್ ಗಳಿಗೆ ವಿನಾಯಿತಿ ನೀಡುವ ಸಾಧ್ಯತೆ ಇದೆ. ಹೋಟೆಲ್, ರೆಸ್ಟೋರೆಂಟ್, ಬೀಚ್ ಇತ್ಯಾದಿಗಳಲ್ಲಿ ಚಟುವಟಿಕೆಗಳಿಗೆ ವಿನಾಯಿತಿ ನೀಡಬೇಕೆಂಬ ಬೇಡಿಕೆಯನ್ನು ಐದನೇ  ಹಂತದ ಲಾಕ್‌ಡೌನ್ ವೇಳೆ ಕೇಂದ್ರ ಸರ್ಕಾರ ಈಡೇರಿಸುವ ಸಾಧ್ಯತೆ ಇದೆ. ಇದರಿಂದ ಈ ರಾಜ್ಯಗಳಲ್ಲಿ ಆರ್ಥಿಕ ಚಟುವಟಿಕೆ ಪುನರಾರಂಭಗೊಳ್ಳಲಿದೆ. 

ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರವನ್ನೇ ಅವಲಂಬಿಸಿರುವ ರಾಜ್ಯಗಳು ಇನ್ನೂ ಸಂಕಷ್ಟ ಅನುಭವಿಸುತ್ತಿವೆ. ಹೀಗಾಗಿ ಮುಂದಿನ ಹಂತದಲ್ಲಿ ಇನ್ನಷ್ಟು ವಿನಾಯಿತಿ ನೀಡುವ ನಿರೀಕ್ಷೆ ಇದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ  ಮಾಡಿದೆ. ಅಂತರ ಕಾಯ್ದುಕೊಳ್ಳುವುದು, ಮಿತಿ ಹೇರುವ ಮೂಲಕ ಹೋಟೆಲ್, ರೆಸ್ಟೋರೆಂಟ್, ಪ್ರವಾಸೋದ್ಯಮ ಚಟುವಟಿಕೆಗಳನ್ನು ಆರಂಭಿಸುವ ಬಗ್ಗೆ ರಾಜ್ಯ ಸರ್ಕಾರಗಳು ಈಗಾಗಲೇ ಮನವಿ ಮಾಡಿವೆ. ಹೋಟೆಲ್, ಪ್ರವಾಸಿ ಕ್ಷೇತ್ರಗಳಲ್ಲಿ ಕನಿಷ್ಠ ಆಸನಗಳು, ಗ್ರಾಹಕರ ಆರೋಗ್ಯ  ತಪಾಸಣೆ, ಅರೋಗ್ಯ ಸೇತು ಆ್ಯಪ್ ಕಡ್ಡಾಯಗೊಳಿಸುವ ಮೂಲಕ ಚಟುವಟಿಕೆಗಳನ್ನು ಆರಂಭಿಸುವ ಬಗ್ಗೆ ರಾಜ್ಯ ಸರ್ಕಾರಗಳು ಸಲಹೆ ನೀಡಿವೆ. ಹೀಗೆ ಮಾಡುವ ಮೂಲಕ ಆದಾಯ ಸಂಗ್ರಹ ಆರಂಭಿಸಬಹುದು ಎಂದು ಅವು ಕೇಂದ್ರಕ್ಕೆ ತಿಳಿಸಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಅಂತೆಯೇ ಆರ್ಥಿಕ ಸಮಸ್ಯೆ ಹಿನ್ನೆಲೆಯಲ್ಲಿ ಇನ್ನಷ್ಟು ಚಟುವಟಿಕೆಗಳಿಗೆ ವಿನಾಯಿತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು, 5ನೇ ಹಂತದ ಲಾಕ್‌ಡೌನ್‌ನಲ್ಲಿ ಮತ್ತಷ್ಟು ಆರ್ಥಿಕ ಚಟುವಟಿಕೆಗಳಿಗೆ ವಿನಾಯಿತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಬಗ್ಗೆ ವಿಸ್ತೃತ ಚರ್ಚೆ ನಡೆಯುತ್ತಿದೆ.  ಕೇಂದ್ರ ಸರ್ಕಾರ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದೂ ಅವರು ತಿಳಿಸಿದ್ದಾರೆ.

ಗೃಹ ಸಚಿವ ಅಮಿತ್ ಶಾಗೆ ಕರೆ ಮಾಡಿದ್ದ ಗೋವಾ ಸಿಎಂ ಪ್ರಮೋದ್ ಸಾವಂತ್
ಇನ್ನು ಲಾಕ್ ಡೌನ್ 4.0 ಅಂತ್ಯವಾಗುತ್ತಿರುವ ಹಿನ್ನಲೆಯಲ್ಲಿ ಗೋವಾ ಸಿಎಂ ಪ್ರಮೋದ್ ಸಾವಂತ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕರೆ ಮಾಡಿದ್ದಾರೆ. ಈ ವೇಳೆ ಲಾಕ್ ಡೌನ್ 5.0 ಕುರಿತು ಉಭಯ ನಾಯಕರೂ ಚರ್ಚಿಸಿದ್ದು, ಈ ವೇಳೆ ಗೋವಾ ಸಿಎಂ ಪ್ರಮೋದ್ ಸಾವಂತ್  ಪ್ರವಾಸೋಧ್ಯಮ ಕ್ಷೇತ್ರವನ್ನೇ ನೆಚ್ಚಿಕೊಂಡಿರುವ ರಾಜ್ಯಗಳಿಗೆ ಲಾಕ್ ಡೌನ್ 5.0ದಿಂದ ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಪ್ರಮುಖವಾಗಿ ರೆಸ್ಟೋರೆಂಟ್ ಗಳು, ಬೀಚ್ ಗಳು ಮತ್ತು ಸ್ಟಾರ್ ಹೊಟೆಲ್ ಗಳಿಗೆ ಲಾಕ್ ಡೌನ್ ನಿಂದ ವಿನಾಯಿತಿ ನೀಡಬೇಕು  ಎಂದು ಕೇಳಿದ್ದಾರೆ ಎಂದು ತಿಳಿದುಬಂದಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನ ಹೊಟೆಲ್ ಗಳು ಕೂಡ ಓಪನ್!
ಇನ್ನು ಲಾಕ್ ಡೌನ್ 5.0ದಲ್ಲಿ ಬೆಂಗಳೂರಿನ ಹೊಟೆಲ್ ಗಳಿಗೆ ವಿನಾಯಿತಿ ದೊರೆಯುವ ಸಾಧ್ಯತೆ ಇದೆ. ಈ ಬಗ್ಗೆ ರಾಜ್ಯ ಸರ್ಕಾರ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com