ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೆಚ್ಚಿದ ಕೊರೋನಾ ಆರ್ಭಟ: ಪರಿಸ್ಥಿತಿ ನಿಯಂತ್ರಣಕ್ಕೆ ಸಭೆ ಕರೆದ ಗೃಹ ಸಚಿವ ಅಮಿತ್ ಶಾ

ದಿನ ಕಳೆಯುತ್ತಿದ್ದಂತೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮಹಾಮಾರಿ ಕೊರೋನಾ ಆರ್ಭಟ ಹೆಚ್ಚುತ್ತಲೇ ಇದ್ದು, ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಸಭೆ ಕರೆದಿದ್ದಾರೆ. 
ಅಮಿತ್ ಶಾ
ಅಮಿತ್ ಶಾ

ನವದೆಹಲಿ: ದಿನ ಕಳೆಯುತ್ತಿದ್ದಂತೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮಹಾಮಾರಿ ಕೊರೋನಾ ಆರ್ಭಟ ಹೆಚ್ಚುತ್ತಲೇ ಇದ್ದು, ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಸಭೆ ಕರೆದಿದ್ದಾರೆ. 

ಇಂದು ಸಂಜೆ ದೆಹಲಿಯ ಉತ್ತರ ಬ್ಲಾಕ್'ನಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್, ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ಇತರೆ ಉನ್ನತಾಧಿಕಾರಿಗಳು ಭಾಗಿಯಾಗಲಿದ್ದಾರೆಂದು ತಿಳಿದುಬಂದಿದೆ.

ಕೊರೋನಾ ಸೋಂಕು ಹೆಚ್ಚಳದ ಜೊತೆ ಜೊತೆಗೆ ದೀಪಾವಳಿ ಹಬ್ಬದ ನಡುವಲ್ಲೇ ದೆಹಲಿಯಲ್ಲಿ ವಾಯು ಗುಣಮಟ್ಟ ಕೂಡ ಅಪಾಯಕಾರಿ ಸ್ಥಿತಿಗೆ ತಲುಪಿದೆ. ಈಗಾಗಲೇ ದೆಹಲಿಯಲ್ಲಿ ಪಟಾಕಿಗಳ ಮೇಲೆ ನಿಷೇಧ ಹೇರಲಾಗಿದೆ. ಆದರೂ, ನಿಯಮ ಉಲ್ಲಂಘನೆ ಮಾಡುತ್ತಿರುವ ಜನರು ಪಟಾಕಿಗಳನ್ನು ಸಿಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ವಾಯುಮಾಲಿನ್ಯ ವಿಪರೀತವಾಗಿ ಹೋಗಿದೆ. 

ದೆಹಲಿ ಕೊರೋನಾ ನಿರ್ವಹಣೆ ವಿಚಾರದಲ್ಲಿ ಅಮಿತ್ ಶಾ ಅವರು ಎರಡನೇ ಬಾರಿ ಮಧ್ಯಪ್ರವೇಶ ಮಾಡುತ್ತಿದ್ದಾರೆ. ಜೂನ್ ಹಾಗೂ ಜುಲೈ ತಿಂಗಳಿನಲ್ಲಿಯೂ ಸರಣಿ ಸಬೆಗಳನ್ನು ನಡೆಸಿದ್ದರು. 

ಕೆಲ ವಾರಗಳ ಹಿಂದಷ್ಟೇ ಅಮಿತ್ ಶಾ ಅವರೂ ಕೂಡ ಕೊರೋನಾ ಸೋಂಕಿಗೊಳಗಾಗಿದ್ದರು. ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡ ಬಳಿಕ ಚೇತರಿಸಿಕೊಂಡಿದ್ದರು. 

ಪ್ರಸ್ತುತ ದೆಹಲಿಯಲ್ಲಿ ಪ್ರತಿನಿತ್ಯ 7,340 ಕೋವಿಡ್ ಕೇಸ್'ಗಳು ದಾಖಲಾಗುತ್ತಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಒಟ್ಟು ಸೋಂಕಿತರ ಸಂಖಅಯೆ 4.82 ಲಕ್ಷಕ್ಕೆ ಏರಿಕೆಯಾಗಿದೆ. ಅಲ್ಲದೆ, 7,519 ಮಂದಿ ಬಲಿಯಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com