ಕೊರೋನಾ ಬಿಕ್ಕಟ್ಟಿನ ಹೊರತಾಗಿಯೂ ಕೃಷಿ ಉತ್ಪನ್ನಗಳ ರಫ್ತು ಹೆಚ್ಚಳ: ಕೇಂದ್ರ ಸರ್ಕಾರ

ಕೋವಿಡ್‌ 19 ಬಿಕ್ಕಟ್ಟಿನ ಹೊರತಾಗಿಯೂ ದೇಶದಲ್ಲಿ ಕೃಷಿ ಉತ್ಪನ್ನಗಳ ರಫ್ತು ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೋವಿಡ್‌ 19 ಬಿಕ್ಕಟ್ಟಿನ ಹೊರತಾಗಿಯೂ ದೇಶದಲ್ಲಿ ಕೃಷಿ ಉತ್ಪನ್ನಗಳ ರಫ್ತು ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ಕುರಿತಂತೆ ಕೇಂದ್ರ ಕೃಷಿ ಸಚಿವಾಲಯ ಮಾಹಿತಿ ನೀಡಿದ್ದು, 'ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌-ಸೆಪ್ಟೆಂಬರ್‌ ಅವಧಿಯಲ್ಲಿ ಕೃಷಿ ಉತ್ಪನ್ನಗಳ ರಫ್ತು ಪ್ರಮಾಣ ಶೇ.43.4ರಷ್ಟು ಹೆಚ್ಚಾಗಿದೆ ಎಂದು ಹೇಳಿದೆ. ದೇಶಾದ್ಯಂತ ಏಪ್ರಿಲ್‌-ಸೆಪ್ಟೆಂಬರ್‌ ಅವಧಿಯಲ್ಲಿ ಕೃಷಿ ಉತ್ಪನ್ನಗಳ ರಫ್ತು ಪ್ರಮಾಣ 53,626 ಕೋಟಿ  ರೂಗಳಷ್ಟಾಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಈ ಪ್ರಮಾಣ 37,397 ಕೋಟಿ ರೂ ಇತ್ತು ಎಂದು ಸಚಿವಾಲಯ ಹೇಳಿಕೊಂಡಿದೆ.

ಸೆಪ್ಟೆಂಬರ್‌ನಲ್ಲಿ ರಫ್ತು ವಹಿವಾಟು ಶೇ 81.7ರಷ್ಟು ಹೆಚ್ಚಾಗಿದ್ದು, ಮೌಲ್ಯದ ಲೆಕ್ಕದಲ್ಲಿ 5,114 ಕೋಟಿ ರೂ.ಗಳಿಂದ 9,296 ಕೋಟಿ ರೂ,ಗಳಿಗೆ ಏರಿಕೆಯಾಗಿದೆ. ಪ್ರಮುಖವಾಗಿ ಶೇಂಗಾ, ಗೋಧಿ, ಸಕ್ಕರೆ, ಬಾಸುಮತಿ ಅಕ್ಕಿ ರಫ್ತು ಪ್ರಮಾಣ ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಏಪ್ರಿಲ್ ನಲ್ಲಿ  ನೆಲಗಡಲೆ ಅಥವಾ ಶೇಂಗಾ(ಶೇ.35 ರಷ್ಟು), ಸಂಸ್ಕರಿಸಿದ ಸಕ್ಕರೆ (ಶೇ.104), ಗೋಧಿ (ಶೇ.206 ), ಬಾಸ್ಮತಿ ಅಕ್ಕಿ (ಶೇ.13) ಮತ್ತು ಬಾಸ್ಮತಿ ಅಲ್ಲದ ಅಕ್ಕಿ (ಶೇ.105 ) ರಫ್ತುಗಳಲ್ಲಿ ಸಕಾರಾತ್ಮಕ ಬೆಳವಣಿಗೆ ದಾಖಲಾಗಿದೆ. 

ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿರುವ ಸುಧಾರಣಾ ಕ್ರಮಗಳಿಂದಾಗಿ ಕೃಷಿ ಉತ್ಪನ್ನಗಳ ರಫ್ತು ಹೆಚ್ಚಾಗುತ್ತಿದೆ. ಕೋವಿಡ್-19 ಬಿಕ್ಕಟ್ಟಿನ ನಡುವೆಯೂ ಕೇಂದ್ರ ಸರ್ಕಾರ ಕೃಷಿ ಉದ್ಯಮ ಉತ್ತೇಜನಕ್ಕಾಗಿ 1 ಲಕ್ಷ ಕೋಟಿ ರೂ ನಿಧಿ ಮೀಸಲಿರಿಸಿತ್ತು. ಇದಲ್ಲದೆ ಕೃಷಿ ಉದ್ಯಮದ ಮತ್ತಷ್ಟು ಚೇತರಿಕೆಗೆ ಕೃಷಿ ಇಲಾಖೆ ಮತ್ತು  ಕೇಂದ್ರ ಸರ್ಕಾರ ಮತ್ತಷ್ಟು ಯೋಜನೆಗಳನ್ನು ಕೈಗೆತ್ತಿಕೊಂಡಿದೆ ಎಂದು ಸಚಿವಾಲಯ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com