

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಜನರ ವಿಶ್ವಾಸವನ್ನು ಗೆಲ್ಲುವಂತೆ ವಿರೋಧ ಪಕ್ಷಗಳಿಗೆ ಒತ್ತಾಯಿಸಿದ್ದಾರೆ ಮತ್ತು ಎಲ್ಲರೂ ಒಗ್ಗಟ್ಟಿನಿಂದ ಸದೃಢವಾಗಿರುವಂತೆ ಕರೆ ನೀಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶುಕ್ರವಾರ ಕರೆದಿದ್ದ ಪ್ರತಿಪಕ್ಷಗಳ ನಾಯಕರ ವರ್ಚುವಲ್ ಸಭೆಯಲ್ಲಿ ಮಹಾರಾಷ್ಟ್ರ ಸಿಎಂ ಈ ಮನವಿಯನ್ನು ಮಾಡಿದರು ಎಂದು ಶಿವಸೇನಾ ನಾಯಕ ಸಂಜಯ್ ರೌತ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
"ಪ್ರತಿಪಕ್ಷಗಳು ಜನರ ವಿಶ್ವಾಸವನ್ನು ಗೆಲ್ಲಬೇಕು ಎಂದು ಸಭೆಯಲ್ಲಿ ಠಾಕ್ರೆ ಒತ್ತಿ ಹೇಳಿದರು". "ಇಂದಿನವರೆಗೂ ವಿರೋಧ ಪಕ್ಷಗಳಲ್ಲಿ ಅಧಿಕಾರದ ಲಾಲಸೆ ಇಲ್ಲ, ಆದರೆ ಅಧಿಕಾರವನ್ನು ಗಮನದಲ್ಲಿಟ್ಟುಕೊಂಡು ಪ್ರಬಲವಾಗಿ ಮತ್ತು ಒಗ್ಗಟ್ಟಿನಿಂದ ಇರುತ್ತಾರೆ ಎಂಬ ನಂಬಿಕೆಯೊಂದಿಗೆ ಜನರು ವಿರೋಧ ಪಕ್ಷಗಳನ್ನು ನಂಬುವಂತಾಗಬೇಕು" ಎಂದು ಠಾಕ್ರೆ ಹೇಳಿರುವುದಾಗಿ ರೌತ್ ತಿಳಿಸಿದ್ದಾರೆ.
ಸೋನಿಯಾ ಗಾಂಧಿ ವೈಯಕ್ತಿಕವಾಗಿ ಎಲ್ಲ ಪಕ್ಷಗಳ ನಾಯಕರಿಗೂ ಸಭೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ ಎಂದು ರೌತ್ ಹೇಳಿದರು.
ಸಭೆಯಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ನಾಲ್ಕು ಕಾಂಗ್ರೆಸ್ಸೇತರ ಮುಖ್ಯಮಂತ್ರಿಗಳಾದ ಟಿಎಂಸಿಯ ಮಮತಾ ಬ್ಯಾನರ್ಜಿ (ಡಿಎಂಕೆ)ಎಂ ಕೆ ಸ್ಟಾಲಿನ್ (ತಮಿಳುನಾಡು) ಮತ್ತು ಜೆಎಂಎಂನ ಹೇಮಂತ್ ಸೊರೆನ್ (ಜಾರ್ಖಂಡ್) ಮತ್ತು ಉದ್ಧವ್ ಠಾಕ್ರೆ ಸೇರಿದಂತೆ 19 ವಿರೋಧ ಪಕ್ಷಗಳ ನಾಯಕರು ಭಾಗವಹಿಸಿದ್ದರು.