ಕೋವಿಡ್-19: ಎವೈ 4.2 ರೂಪಾಂತರಿ ಡೆಲ್ಟಾ ತಳಿಗಿಂತ ಅಪಾಯಕಾರಿಯೇ? ನೀವು ತಿಳಿಯಲೇಬೇಕಾದ ಅಂಶಗಳು!

ಈ ಹಿಂದೆ ಬ್ರಿಟನ್ ನಲ್ಲಿ ಪತ್ತೆಯಾಗಿದ್ದ ಡೆಲ್ಟಾ ರೂಪಾಂತರಿಯ ಹೊಸ ತಳಿ AY 4.2 ಇದೀಗ ಕರ್ನಾಟಕದಲ್ಲೂ ಪತ್ತೆಯಾಗಿದ್ದು, ಆ ಮೂಲಕ ಕರ್ನಾಟಕಕ್ಕೂ ಈ ಎವೈ 4.2 ರೂಪಾಂತರಿ ಭೀತಿ ಆರಭಂವಾಗಿದೆ. 
ಹೊಸ ರೂಪಾಂತರಿ ವೈರಸ್
ಹೊಸ ರೂಪಾಂತರಿ ವೈರಸ್
Updated on

ನವದೆಹಲಿ: ಈ ಹಿಂದೆ ಬ್ರಿಟನ್ ನಲ್ಲಿ ಪತ್ತೆಯಾಗಿದ್ದ ಡೆಲ್ಟಾ ರೂಪಾಂತರಿಯ ಹೊಸ ತಳಿ AY 4.2 ಇದೀಗ ಕರ್ನಾಟಕದಲ್ಲೂ ಪತ್ತೆಯಾಗಿದ್ದು, ಆ ಮೂಲಕ ಕರ್ನಾಟಕಕ್ಕೂ ಈ ಎವೈ 4.2 ರೂಪಾಂತರಿ ಭೀತಿ ಆರಭಂವಾಗಿದೆ. 

ಆರೋಗ್ಯ ಇಲಾಖೆ ಮೂಲಗಳು ನೀಡಿರುವ ಮಾಹಿತಿಯನ್ವಯ ಕರ್ನಾಟಕದಲ್ಲಿ ಎರಡು AY 4.2 ತಳಿ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಇದೇ ವಿಚಾರವಾಗಿ 'ಗ್ಲೋಬಲ್‌ ಇನಿಷಿಯೇಟಿವ್‌ ಆನ್‌ ಅಲ್‌ ಇನ್‌ಫ್ಲುಯೆಂಜಾ ಡಾಟಾ' ವರದಿ ಪ್ರಕಾರ ಈ AY 4.2 ತಳಿ ಸೋಂಕು ಪ್ರಕರಣಗಳು ಆಂಧ್ರಪ್ರದೇಶದಲ್ಲಿ 7, ಕೇರಳದಲ್ಲಿ 4, ಕರ್ನಾಟಕ ಮತ್ತು ತೆಲಂಗಾಣದಲ್ಲಿ ತಲಾ 2, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರದಲ್ಲಿ ತಲಾ 1 ಪತ್ತೆಯಾಗಿವೆ ಎಂದು ಹೇಳಲಾಗಿದೆ. ಇದಕ್ಕೂ ಮುನ್ನ ಈ ರೂಪಾಂತರಿ ಮಧ್ಯಪ್ರದೇಶದಲ್ಲಿ ಪತ್ತೆಯಾಗಿತ್ತು, ಆ ಮೂಲಕ ದೇಶದಲ್ಲಿ ಈ AY 4.2 ತಳಿ ಸೋಂಕು ಪ್ರಕರಣಗಳ ಸಂಖ್ಯೆ ಒಟ್ಟು 17ಕ್ಕೆ ಏರಿಕೆಯಾಗಿದೆ. ಇದಕ್ಕೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಇತ್ತೀಚೆಗೆ ಪತ್ತೆಯಾದ 7 ಪ್ರಕರಣಗಳನ್ನೂ ಸೇರಿಸಿದರೆ ಭಾರತದ 7 ರಾಜ್ಯಗಳಲ್ಲಿ ಒಟ್ಟು 24 ಕೇಸುಗಳು ಪತ್ತೆಯಾದಂತೆ ಆಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 

ಡೆಲ್ಟಾಗಿಂತ ಹೆಚ್ಚಿನ ವೇಗದಲ್ಲಿ ಪ್ರಸರಣ
ಇನ್ನು ಪ್ರಸ್ತುತ ಪತ್ತೆಯಾಗಿರುವ ನೂತನ ಕೋವಿಡ್ ವೈರಸ್ ರೂಪಾಂತರಿ ಎವೈ4.2 ಇದು ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚಿನ ವೇಗದಲ್ಲಿ ಪ್ರಸರಣವಾಗುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗಿದೆ. ಇದು ಸಂಭಾವ್ಯವಾಗಿ ಸ್ವಲ್ಪ ಹೆಚ್ಚು ಸಾಂಕ್ರಾಮಿಕವಾಗಿರುವ ತಳಿಯಾಗಿದ್ದು, ಇದು ಡೆಲ್ಟಾ ರೂಪಾಂತರಕ್ಕಿಂತ ಗಣನೀಯವಾಗಿ ಹೆಚ್ಚು ವೇಗವಾಗಿ ಹರಡುತ್ತದೆ ಎಂಬುದಕ್ಕೆ ಸ್ಪಷ್ಟ ಸೂಚನೆ ಇಲ್ಲ. ಈ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ ಎನ್ನಲಾಗಿದೆ.

ಆಲ್ಫಾ ಮತ್ತು ಡೆಲ್ಟಾ ರೂಪಾಂತರಗಳಷ್ಟು ಅಪಾಯಕಾರಿಯಲ್ಲ
ಈ ಹಿಂದೆ ಪತ್ತೆಯಾಗಿದ್ದ ಆಲ್ಫಾ ಮತ್ತು ಡೆಲ್ಟಾ ರೂಪಾಂತರಗಳು ಭಾರತವೂ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ತಮ್ಮ ಆರ್ಭಟ ತೋರಿದ್ದವು. ಡೆಲ್ಟಾ ರೂಪಾಂತರ ಭಾರತದಲ್ಲಿ 2ನೇ ಅಲೆಗೆ ಕಾರಣವಾಗಿತ್ತು. ಇದೇ ಭೀತಿ ಇದೀಗ ಭಾರತಕ್ಕೆ ಎದುರಾಗಿದ್ದು, ಹೊಸ ರೂಪಾಂತರಿ ಮೂರನೇ ಅಲೆಗೆ ಕಾರಣವಾಗುತ್ತದೆಯೇ ಎಂದು ಹೇಳಲಾಗಿದೆ. ಇದಕ್ಕೆ ಉತ್ತರಿಸಿರುವ ತಜ್ಞರು ಈ ಹಿಂದೆ ಪತ್ತೆಯಾಗಿದ್ದ ಆಲ್ಫಾ ಮತ್ತು ಡೆಲ್ಟಾ ರೂಪಾಂತರಗಳಷ್ಟು ಈ ಎವೈ 4.2 ಅಪಾಯಕಾರಿಯಲ್ಲ ಎಂದು ಹೇಳಿದ್ದಾರೆ. AY.4.2 ಡೆಲ್ಟಾ ಉಪ ಪರಂಪರೆಯು ಹೆಚ್ಚುತ್ತಿರುವ ಪಥದಲ್ಲಿ ಉತ್ಪತ್ತಿಯಾಗುವ ಎಲ್ಲಾ ಅನುಕ್ರಮಗಳಲ್ಲಿ ಸರಿಸುಮಾರು ಶೇ 6 ರಷ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.

ಬ್ರಿಟನ್ ನಲ್ಲಿ ಈ ಹಿಂದೆ ಡೆಲ್ಟಾ ರೂಪಾಂತರಿ ವ್ಯಾಪಕವಾಗಿ ಹಬ್ಬಿತ್ತು. ಇದಾದ ಬಳಿಕ ಇದೀಗ AY.4.2 ಪತ್ತೆಯಾಗಿದ್ದು, ಈ ತಳಿಯ ಸೋಂಕಿತರ ಸಂಖ್ಯೆ ಇಂಗ್ಲೆಂಡಿನಲ್ಲಿ ವಿಸ್ತರಿಸುತ್ತಿರುವುದನ್ನು ಗುರುತಿಸಲಾಗಿದೆ. ಇದು ಈಗ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನದ ಹಂತದಲ್ಲಿದ್ದು ಈ ಬಗ್ಗೆ ಹೆಚ್ಚೆಚ್ಚು ಅಧ್ಯಯನಗಳು ನಡೆಯುತ್ತಿವೆ ಎಂದು ವರದಿ ಹೇಳಿದೆ. ಬ್ರಿಟನ್ ಸರ್ಕಾರವು COVID-19 ಸೋಂಕಿನ ಹೆಚ್ಚುತ್ತಿರುವ ಪ್ರಕರಣಗಳ ಮೇಲೆ "ಸೂಕ್ಷ್ಮವಾಗಿ ಗಮನಿಸುತ್ತಿದೆ" ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಅವರ ವಕ್ತಾರರು ಹೇಳಿದ್ದಾರೆ.

ಏತನ್ಮಧ್ಯೆ, ಬಿಬಿಸಿ ವರದಿಯ ಪ್ರಕಾರ, ಈ ಹೊಸ ರೂಪಾಂತರವು ಎಷ್ಟು ಅಪಾಯಕಾರಿಯಾಗಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ, ಆದರೂ, ಇದು ಆಲ್ಫಾ ಮತ್ತು ಡೆಲ್ಟಾ ರೂಪಾಂತರಗಳಂತಹ ದೊಡ್ಡ ರೀತಿಯಲ್ಲಿ ಹೊರಹೊಮ್ಮುವ ಸಾಧ್ಯತೆಯಿಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಡಬಲ್ ಡೋಸ್ ಲಸಿಕೆ ಪಡೆದವರಿಗೂ ಸೋಂಕು!
ಇನ್ನು ಈ ಎವೈ 4.2 ರೂಪಾಂತರಿ ಸೋಂಕು ಡಬಲ್ ಡೋಸ್ ಕೋವಿಡ್ ಲಸಿಕೆ ಪಡೆದವರಿಗೂ ಒಕ್ಕರಿಸುತ್ತದೆ ಎಂದು ಹೇಳಲಾಗಿದೆ. ಇದಕ್ಕೆ ಇಂಬು ನೀಡುವಂತೆ, ಮಧ್ಯಪ್ರದೇಶದ ಇಂಧೋರ್ ನಲ್ಲಿ ಆರು ಮಂದಿ ಸೋಂಕಿತರನ್ನು ಪರೀಕ್ಷೆ ಮಾಡಿದಾಗ AY.4 ಕೊರೊನಾ ರೂಪಾಂತರಿ ಇರುವುದು ದೃಢಪಟ್ಟಿತ್ತು. ಈ ಆರೂ ಸೋಂಕಿತರು ಡಬಲ್ ಡೋಸ್ ಪಡೆದವರಾಗಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಬ್ರಿಟನ್ ನಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿರೋದು AY.4 ಕರೋನಾ ರೂಪಾಂತರಿ. ಈ ರೋಗದ ಲಕ್ಷಣಗಳು ಈಗ ಭಾರತದಲ್ಲಿಯೂ ಪತ್ತೆಯಾಗಿದೆ. ಮಧ್ಯಪ್ರದೇಶದಲ್ಲಿ ಈ ರೂಪಾಂತರಿ ಸೋಂಕಿನಿಂದ ಆರು ಮಂದಿ ಬಳಲುತ್ತಿದ್ದಾರೆ. ಅವರೆಲ್ಲ ಎರಡು ಬಾರಿ ಲಸಿಕೆ ಪಡೆದವರು ಎಂದು ಸಿಎಂಎಚ್ಒ ಬಿ.ಎಸ್.ಸತ್ಯ ತಿಳಿಸಿದ್ದಾರೆ.

AY.4 ರೂಪಾಂತರಿ ಹೆಚ್ಚು ಸಾಂಕ್ರಾಮಿಕವೇ?
ಈ ಕುರಿತು ಸೆಂಟರ್ ಫಾರ್ ಸೆಲ್ಯೂಲಾರ್ ಆಂಡ್ ಮಾಲಿಕ್ಯೂಲರ್ ಬಯಾಲಜಿ (ಸಿಸಿಎಂಬಿ) ಮಾಜಿ ನಿರ್ದೇಶಕ ರಾಕೇಶ್ ಮಿಶ್ರಾ ಹೇಳಿಕೆ ಪ್ರಕಾರ, ಡೆಲ್ಟಾ ರೂಪಾಂತರಿಗಿಂತ AY.4 ಹೆಚ್ಚು ಸಾಂಕ್ರಾಮಿಕ ಅನ್ನೋದಕ್ಕೆ ಯಾವುದೇ ಪುರಾವೆಗಳಿಲ್ಲ. ಅಲ್ಲದೆ ಸೋಂಕು ಉಲ್ಬಣಗೊಳಿಸುತ್ತದೆ ಅನ್ನೋದಕ್ಕೆ ಯಾವುದೇ ಸಾಕ್ಷಿಗಳಿಲ್ಲ. AY.4 ಅನ್ನೋದು ಕೊರೋನಾ ವೈರಸ್ ನ ಡೆಲ್ಟಾ ರೂಪಾಂತರದ ಉಪ ವಂಶವಾಗಿದೆ. ಇದೇನು ಹೊಸದೇನಲ್ಲ. ಆದಾಗ್ಯೂ ಕೊರೋನಾ ರೋಗದ ಬಗ್ಗೆ ಸರ್ಕಾರದ ಗೈಡ್ ಲೈನ್ಸ್ ಗಳನ್ನು ಪಾಲಿಸಬೇಕು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com