ಪೆಗಾಸಸ್ ಪ್ರಕರಣ: ವ್ಯವಸ್ಥೆ ಮೇಲೆ ನಂಬಿಕೆ ಇಡಿ, ಸಾಮಾಜಿಕ ಜಾಲತಾಣಗಳ ಚರ್ಚೆಯಿಂದ ದೂರವಿರಿ; 'ಸುಪ್ರೀಂ' ಸೂಚನೆ
ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಪೆಗಾಸಿಸ್ ವಿವಾದ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿನ ನಡೆಸಲಾಗುತ್ತಿರುವ 'ಪ್ರತ್ಯೇಕ ಚರ್ಚೆ' ಕುರಿತು ಮಂಗಳವಾರ ಸುಪ್ರೀಂ ಕೋರ್ಟ್ ತೀವ್ರವಾಗಿ ಕಿಡಿಕಾರಿದೆ.
Published: 10th August 2021 12:12 PM | Last Updated: 10th August 2021 02:51 PM | A+A A-

ಸಂಗ್ರಹ ಚಿತ್ರ
ನವದೆಹಲಿ: ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಪೆಗಾಸಿಸ್ ವಿವಾದ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿನ ನಡೆಸಲಾಗುತ್ತಿರುವ 'ಪ್ರತ್ಯೇಕ ಚರ್ಚೆ' ಕುರಿತು ಮಂಗಳವಾರ ಸುಪ್ರೀಂ ಕೋರ್ಟ್ ತೀವ್ರವಾಗಿ ಕಿಡಿಕಾರಿದೆ.
ಪೆಗಾಸಸ್ ಬೇಹುಗಾರಿಕೆಯ ಹಗರಣ ಕುರಿತು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಮಂಗಳವಾರ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ್ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು.
ಈ ಹಿಂದೆ ಪೆಗಾಸಸ್ ವಿವಾದ ಹಿರಿಯ ವಕೀಲ ಕಪಿಲ್ ಸಿಬಲ್, ಹಿರಿಯ ಪತ್ರಕರ್ತ ಎನ್.ರಾಮ್ ಹಾಗೂ ಶಶಿಕುಮಾರ್ ಅವರು ಅರ್ಜಿ ಸಲ್ಲಿಸಿದ್ದು. ಈ ಅರ್ಜಿಯನ್ನು ನ್ಯಾಯಾಲಯದ ವಿಚಾರಣೆ ನಡೆಸಿದ ಬಳಿಕ ಪತ್ರಕರ್ತ ರಾಮ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗಿತ್ತು.
ಈ ವಿಚಾರವನ್ನು ಪ್ರಸ್ತಾಪಿಸಿದ ನ್ಯಾಯಪೀಠವು, ಇದನ್ನೇ ನಾವು ಹೇಳುತ್ತಿರುವುದು. ಅರ್ಜಿ ಸಲ್ಲಿಕೆಯಾದ ಬಳಿಕ ಇಲ್ಲಿ ಪ್ರತಿಯೊಬ್ಬರನ್ನೂ ಪ್ರಶ್ನಿಸಲಾಗುತ್ತದೆ. ಪ್ರತೀಯೊಬ್ಬರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತದೆ. ಈ ವಿಚಾರ ಕುರಿತು ನ್ಯಾಯಾಲಯದಲ್ಲಿಯೇ ಚರ್ಚೆಗಳು ನಡೆಯಬೇಕು. ಸಾಮಾಜಿಕ ಜಾಲತಾಣ, ವೆಬ್ ಸೈಟ್ ಗಳಲ್ಲಿ ನಡೆಯಬಾರದು. ಅರ್ಜಿದಾರರು ಒಂದು ವ್ಯವಸ್ಥೆಯನ್ನು ನೆಚ್ಚಿಕೊಂಡ ಮೇಲೆ ಅದರ ಮೇಲೆ ವಿಶ್ವಾಸವಿಡಬೇಕು. ವಿರೋಧ ಪಕ್ಷ ನಾಯಕರು, ಹಿರಿಯ ಪತ್ರಕರ್ತರು ಸೇರಿದಂತೆ ಯಾರೇ ಆಗಿರಲಿ, ಒಂದು ಬಾರಿ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋದ ಮೇಲೆ ನೀವು ಹೇಳುವುದೇನೇ ಇದ್ದರೂ ಅದನ್ನು ನ್ಯಾಯಾಲಯದಲ್ಲಿ ಪ್ರಸ್ತಾಪಿಸಬೇಕು. ಸಾಮಾಜಿಕ ಜಾಲತಾಣ ಸೇರಿದಂತೆ ಬೇರೆ ಯಾವುದೇ ವೇದಿಕೆಯಲ್ಲಿ ಪೆಗಾಸಸ್ ಬಗ್ಗೆ ಅರ್ಜಿದಾರರು ಚರ್ಚಿಸುವಂತಿಲ್ಲ ಎಂದು ಸೂಚನೆ ನೀಡಿತು.
ಕೇಂದ್ರ ಸರ್ಕಾರದಿಂದ ಉತ್ತರ ನೀಡುವುದಕ್ಕೆ ಸಾಲಿಸಿಟರ ಜನರಲ್ ತುಷಾರ್ ಮೆಹ್ತಾ ಮತ್ತಷ್ಟು ಸಮಯಾವಕಾಶ ನೀಡುವಂತೆ ನ್ಯಾಯಾಲಯದ ಎದುರು ಮನವಿ ಸಲ್ಲಿಸಿದರು. ಈ ಹಿನ್ನೆಲೆ ಆಗಸ್ಟ್ 16ರಂದು ಮುಂದಿನ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಆದೇಶಿಸಿದೆ.