ಮೇಕೆದಾಟು: ಕರ್ನಾಟಕದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು ಸರ್ಕಾರ

ಕರ್ನಾಟಕ ಸರ್ಕಾರದ ಬಹು ನಿರೀಕ್ಷಿತ ಮೇಕೆದಾಟು ಯೋಜನೆಗೆ ಮತ್ತೆ ತಮಿಳುನಾಡು ಸರ್ಕಾರ ಅಡ್ಡಗಾಲು ಹಾಕಿದ್ದು, ವಿಸ್ತೃತ ಯೋಜನಾ ವರದಿ (ಡಿಪಿಆರ್) ತಿರಸ್ಕರಿಸಲು ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕರ್ನಾಟಕ ಸರ್ಕಾರದ ಬಹು ನಿರೀಕ್ಷಿತ ಮೇಕೆದಾಟು ಯೋಜನೆಗೆ ಮತ್ತೆ ತಮಿಳುನಾಡು ಸರ್ಕಾರ ಅಡ್ಡಗಾಲು ಹಾಕಿದ್ದು, ವಿಸ್ತೃತ ಯೋಜನಾ ವರದಿ(ಡಿಪಿಆರ್) ತಿರಸ್ಕರಿಸಲು ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದೆ. 

ಮೇಕೆದಾಟು ಪ್ರಕರಣದ ತುರ್ತು ವಿಚಾರಣೆ ಕೋರಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದೆ. ಅರ್ಜಿಯಲ್ಲಿ ಡಿಪಿಆರ್ ತಿರಸ್ಕರಿಸಲು ಸೂಚಿಸುವಂತೆ ಮನವಿ ಮಾಡಿಕೊಂಡಿದೆ.

9,000 ಕೋಟಿ ವೆಚ್ಚದಲ್ಲಿ 76.16 ಟಿಎಂಸಿ ನೀರು ಸಂಗ್ರಹಣೆ ಉದ್ದೇಶದಿಂದ ಜಲಾಶಯ ನಿರ್ಮಿಸಲು ಕರ್ನಾಟಕ ಮುಂದಾಗಿದೆ. ವಿದ್ಯುತ್ ಉತ್ಪಾದನೆಯನ್ನು ಮಾಡಲು ಕರ್ನಾಟಕ ಯೋಜನೆ ರೂಪಿಸಿದೆ. ಈ ಯೋಜನೆ ನ್ಯಾಯಲಯದ ಆದೇಶ ಉಲ್ಲಂಘಿಸಿದ್ದು, ಈ ಯೋಜನೆಗೆ ಕೂಡಲೇ ತಡೆ ನೀಡಬೇಕು. ಕರ್ನಾಟಕಕ್ಕೆ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಬೇಕು ಮತ್ತು ಕರ್ನಾಟಕ ಸಲ್ಲಿಸಿರುವ ಡಿಪಿಆರ್‍ ನ್ನು ಕೇಂದ್ರ ಜಲ ಆಯೋಗ(ಸಿಡಬ್ಲ್ಯೂಸಿ)ತಿರಸ್ಕರಿಸಲು ಸೂಚಿಸಬೇಕು ಮತ್ತು ಪ್ರಕರಣ ಅಂತ್ಯವಾಗುವವರೆಗೂ ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಯಾವುದೇ ಅನುಮತಿ ನೀಡದಂತೆ ಸೂಚಿಸಬೇಕು ಎಂದು ತಮಿಳುನಾಡು ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದೆ.

ಪ್ರಸ್ತಾವಿತ ಜಲಾಶಯವು ಕಬಿನಿ ಜಲಾಶಯದ ಕೆಳಗಿರುವ ಕಬಿನಿ ಉಪ ಜಲಾನಯನ ಪ್ರದೇಶ, ಕೆಆರ್ ಎಸ್ ಅಣೆಕಟ್ಟಿನ ಕೆಳಭಾಗದ ಕಾವೇರಿ ನದಿ, ಶಿಂಷಾ, ಅರ್ಕಾವತಿ ಮತ್ತು ಸುವರ್ಣಾವತಿ ಉಪನದಿಗಳಲ್ಲಿ, ಬಿಳಿಗುಂಡ್ಲುವಿನಲ್ಲಿ 177.25 ಟಿಎಂಸಿಯನ್ನು ಖಾತ್ರಿಪಡಿಸುವ ಮೂಲಗಳಾದ ಜಲಾನಯನ ಪ್ರದೇಶಗಳು ಮತ್ತು ವಿವಿಧ ಸಣ್ಣ ತೊರೆಗಳಲ್ಲಿ ಅನಿಯಂತ್ರಿತ ಹರಿವುಗಳಿಂದ ಕಾವೇರಿ ನದಿಯಲ್ಲಿ ಉತ್ಪತ್ತಿಯಾಗುವ ಹರಿವನ್ನು ತಡೆಯುತ್ತದೆ. ಯಾವುದೇ ಹೊಸ ಯೋಜನೆಯನ್ನು ಇತರ ಜಲಾನಯನ ರಾಜ್ಯಗಳ ಒಪ್ಪಿಗೆಯೊಂದಿಗೆ ಮಾತ್ರ ತೆಗೆದುಕೊಳ್ಳಬೇಕು. ಏಕೆಂದರೆ ಅವುಗಳು ಮೇಲ್ಭಾಗದ ನದಿಯ ರಾಜ್ಯದ ಏಕಪಕ್ಷೀಯ ಕ್ರಮದಿಂದ ಪ್ರಭಾವಿತವಾಗಿವೆ. ಪ್ರಸ್ತಾವಿತ ಯೋಜನೆಯು ಕಾವೇರಿ ನದಿಯ ಹರಿವಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ತಮಿಳುನಾಡಿನ ಕಾವೇರಿ ಜಲಾನಯನ ಪ್ರದೇಶದ ನೀರಾವರಿ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಅರ್ಜಿಯಲ್ಲಿ ಹೇಳಿದೆ.

ಮೇಕೆದಾಟು ಆಣೆಕಟ್ಟು ನಿರ್ಮಾಣ ವಿಚಾರವಾಗಿ ಕರ್ನಾಟಕ ಯೋಜನೆಯನ್ನು ನಾವು ಆರಂಭಿಸುತ್ತೇವೆ ಎಂದು ಪಟ್ಟುಹಿಡಿದಿದೆ. ಈಗಾಗಲೇ ಮೇಕೆದಾಟು ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಆಗಿದ್ದು, ಶೀಘದಲ್ಲೇ ಕೇಂದ್ರದ ಜೊತೆ ಅನುಮತಿ ಪಡೆದು ಯೋಜನೆ ಆರಂಭಿಸುತ್ತೇವೆ ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com