ತಿರುಮಲ ಯಾತ್ರೆ ಮುಂದೂಡಿ: ಭೂ ಕುಸಿತದಿಂದ ಘಾಟ್ ರಸ್ತೆ ಸ್ಥಗಿತ, ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ

ಖ್ಯಾತ ಪವಿತ್ರ ಯಾತ್ರಾತಾಣ ತಿರುಮಲದಲ್ಲಿ ಮಳೆ ಮುಂದುವರೆದಿರುವಂತೆಯೇ ಮತ್ತೆ ಭೂ ಕುಸಿತ ಸಂಭವಿಸಿದ್ದು, ಪರಿಣಾಮ ಘಾಟ್ ರಸ್ತೆಗಳು ಹಾನಿಗೊಳಗಾಗಿ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ತಿರುಮಲದಲ್ಲಿ ಭೂ ಕುಸಿತ
ತಿರುಮಲದಲ್ಲಿ ಭೂ ಕುಸಿತ
Updated on

ತಿರುಪತಿ: ಖ್ಯಾತ ಪವಿತ್ರ ಯಾತ್ರಾತಾಣ ತಿರುಮಲ (Tirumala)ದಲ್ಲಿ ಮಳೆ ಮುಂದುವರೆದಿರುವಂತೆಯೇ ಮತ್ತೆ ಭೂ ಕುಸಿತ (Tirumala LandSlide) ಸಂಭವಿಸಿದ್ದು, ಪರಿಣಾಮ ಘಾಟ್ ರಸ್ತೆ (Tirumala ghat roads)ಗಳು ಹಾನಿಗೊಳಗಾಗಿ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ತಿರುಮಲ ಬೆಟ್ಟಕ್ಕೆ ಹೋಗುವ ಹೆದ್ದಾರಿಯ ಮೂರು ಕಡೆಗಳಲ್ಲಿ ಭೂಕುಸಿತ ಸಂಭವಿಸಿದ್ದು, ಘಾಟ್ ನಂಬರ್ 2ರಲ್ಲಿ ಸಂಪೂರ್ಣ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಪರಿಣಾಮ ತಿರುಪತಿ(Tirupati)ಯಿಂದ ತಿರುಮಲಕ್ಕೆ ಹೋಗುವ ಮಾರ್ಗದಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಘಟನೆಯ ಸಮಯದಲ್ಲಿ ವಾಹನ ದಟ್ಟಣೆ ಇಲ್ಲದ ಕಾರಣ, ಅನಾಹುತ ತಪ್ಪಿದೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ. ರಸ್ತೆ ಹಾಳಾಗಿದ್ದರಿಂದ ತಿರುಮಲಕ್ಕೆ ತೆರಳುವ ವಾಹನಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು, ರಸ್ತೆ ದುರಸ್ತಿಯಾಗುವವರೆಗೂ ಸಂಚಾರಕ್ಕೆ ಅನುಮತಿ ಇಲ್ಲ ಎನ್ನಲಾಗಿದೆ.

ಮತ್ತೊಂದೆಡೆ ತಿರುಮಲದಲ್ಲಿ ಎರಡನೇ ಸಂಪರ್ಕ ರಸ್ತೆಯ ಮೇಲೆ ಬೃಹದಾಕಾರದ ಬಂಡೆಗಳು ಅಡ್ಡಲಾಗಿ ಬಿದ್ದಿವೆ. ರಸ್ತೆಗೆ ಅಡ್ಡಲಾಗಿ ಬಂಡೆಗಳು ಬಿದ್ದಿದ್ದರಿಂದ ಸಂಚಾರ ಸ್ಥಗಿತಗೊಂಡಿದೆ. ಸ್ಥಳೀಯರ ಮೂಲಕ ವಿಷಯ ತಿಳಿದು ನಗರ ಪಾಲಿಕೆ ಸಿಬ್ಬಂದಿ ಬಂಡೆಗಳನ್ನು ತೆರವುಗೊಳಿಸಲು ಮುಂದಾದರು. ರಸ್ತೆ ದುರಸ್ತಿ ಪೂರ್ಣಗೊಳ್ಳುವವರೆಗೂ ತಿರುಮಲ ಬೆಟ್ಟಕ್ಕೆ ಹೋಗುವ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಬೆಟ್ಟ ಇಳಿಯುವ ಮಾರ್ಗದಲ್ಲಿ ವಾಹನಗಳಿಗೆ ಅವಕಾಶ ಕಲ್ಪಿಸಲಾಗಿದೆ. ತಿರುಮಲದ ಎರಡನೇ ಘಾಟ್ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಟಿಟಿಡಿ ಘಾಟ್ ರಸ್ತೆಯಲ್ಲಿ ಭಕ್ತರನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಇಂದು ಬೆಳಗ್ಗೆ ರೆಂಡೋವ ಘಾಟ್‌ನ ಸಂಪರ್ಕ ರಸ್ತೆಯ ಬಳಿ ಸುಮಾರು ನಾಲ್ಕು ಸ್ಥಳಗಳಲ್ಲಿ ಭೂಕುಸಿತ ಸಂಭವಿಸಿದೆ. ವಾಹನಗಳು ಮೊದಲೇ ನಿಂತಿದ್ದರಿಂದ ಅನಾಹುತ ತಪ್ಪಿದೆ. 

ಇತ್ತೀಚೆಗೆ ಸುರಿದ ಭಾರಿ ಮಳೆಗೆ ತಿರುಮಲದಲ್ಲಿ ಮತ್ತೆ ಬಂಡೆಗಳು ಮುರಿದು ಬಿದ್ದಿವೆ. ಎರಡನೇ ಘಾಟ್ ರಸ್ತೆಯಲ್ಲಿ ಭೂಕುಸಿತ ಉಂಟಾಗಿದ್ದರಿಂದ ಟಿಟಿಡಿ ಮೊದಲ ಘಾಟ್ ರಸ್ತೆಯಲ್ಲಿ ಭಕ್ತರಿಗೆ ಅವಕಾಶ ಕಲ್ಪಿಸಿದೆ. ಇದರಿಂದ ಅಲಿಪಿರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕಿಲೋಮೀಟರ್ ಗಟ್ಟಲೆ ವಾಹನಗಳು ನಿಂತಿರುವುದರಿಂದ ಯಾತ್ರಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಭಕ್ತರು ದರ್ಶನವನ್ನು ಮುಂದೂಡಬೇಕು ಮತ್ತು ಟಿಕೆಟ್ ಹೊಂದಿರುವವರಿಗೆ ಕೆಲವು ತಿಂಗಳುಗಳವರೆಗೆ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಟಿಟಿಡಿ ತಿಳಿಸಿದೆ.

ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ
ಇನ್ನು ಇಂದು ಬೆಳಗಿನ ಜಾವ 05.45 ರ ಸುಮಾರಿಗೆ ತಿರುಮಲದತ್ತ ಪ್ರಯಾಣಿಸುತ್ತಿದ್ದ ಭಕ್ತರು ಚಾಲಕನ ಸಮಯ ಪ್ರಜ್ಞೆಯಿಂದ ಪ್ರಾಣಾಪಾಯಾದಿಂದ ಬಚಾವ್ ಆಗಿದ್ದಾರೆ. ಬಸ್ ಬೆಟ್ಟದಲ್ಲಿ ಚಲಿಸುವಾಗ ಮೇಲಿನಿಂದ ಬಂಡೆ ಉರುಳುವ ಜೋರಾದ ಶಬ್ದ ಕೇಳಿತ್ತು. ಕೂಡಲೇ ಎಚ್ಚೆತ್ತ ಬಸ್ ಚಾಲಕ ಬಸ್ ಅನ್ನು ಅಲ್ಲಿಯೇ ನಿಲ್ಲಿಸಿದ್ದಾನೆ. ಬಸ್ ನಿಲ್ಲುತ್ತಿದ್ದಂತೆಯೇ ಬಸ್ ನಿಂದ ಒಂದಷ್ಟು ದೂರದಲ್ಲಿ ಬಂಡೆಗಳು ಉರುಳಿ ಬಿದ್ದಿವೆ. ಆದರೆ ಬಸ್ ನಲ್ಲಿದ್ದವರಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.

ಟ್ರಾಫಿಕ್ ಜಾಮ್ ತಡೆಯಲು 1ನೇ ಘಾಟ್ ರಸ್ತೆಯಲ್ಲಿ ದ್ವಿಮುಖ ಸಂಚಾರ
ಮತ್ತೊಂದೆಡೆ ಘಾಟ್ ರಸ್ತೆಯಲ್ಲಿ ನಿಲ್ಲಿಸಿದ ವಾಹನಗಳಿಗೆ ಸಂಪರ್ಕ ರಸ್ತೆ ದಾಟಲು ಅವಕಾಶ ಕಲ್ಪಿಸಲಾಗಿದೆ. ಮೊದಲ ಘಾಟ್ ರಸ್ತೆಯಿಂದ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಅಧಿಕಾರಿಗಳು ತಿರುಪತಿಯಿಂದ ತಿರುಮಲಕ್ಕೆ ತೆರಳುವ ವಾಹನಗಳಿಗೆ ಒಂದು ಗಂಟೆ ಹಾಗೂ ತಿರುಮಲದಿಂದ ತಿರುಪತಿಗೆ ಬರುವ ವಾಹನಗಳಿಗೆ ಇನ್ನೊಂದು ಗಂಟೆ ಇದೇ ಘಾಟ್ ರಸ್ತೆಯಲ್ಲಿ ಅವಕಾಶ ಕಲ್ಪಿಸಲಿದ್ದಾರೆ. 

ಘಟನಾ ಸ್ಥಳಕ್ಕೆ ಟಿಟಿಡಿ ಅಧ್ಯಕ್ಷರ ಭೇಟಿ
ಇನ್ನು ಭೂ ಕುಸಿತ ವಿಚಾರ ತಿಳಿಯುತ್ತಲೇ ಘಟನಾ ಪ್ರದೇಶಕ್ಕೆ ಟಿಟಿಡಿ(TTD) ಅಧ್ಯಕ್ಷ ವೈವಿ ಸುಬ್ಬಾರೆಡ್ಡಿ (YV SubbaReddy) ಅವರು ಅಧಿಕಾರಿಗಳ ಸಹಿತ ಆಗಮಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಟಿಟಿಡಿ ಇಂಜಿನಿಯರಿಂಗ್ ಅಧಿಕಾರಿಗಳು ಉರುಳಿದ ಬಂಡೆಗಳನ್ನು ತೆಗೆಯುಲು ದುರಸ್ತಿ ಕಾರ್ಯದ ಕುರಿತು ಸುಬ್ಬಾರೆಡ್ಡಿ ಅವರಿಗೆ ಮಾಹಿತಿ ನೀಡಿದರು. 

ಅಂತೆಯೇ ಮಳೆಗಾಲದಲ್ಲಿ ಘಾಟ್ ರಸ್ತೆಯಲ್ಲಿ ಪದೇ ಪದೇ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ ದೆಹಲಿಯಿಂದ ಐಟಿ ತಜ್ಞರನ್ನು ಕರೆತಂದು ಭೂಕುಸಿತ ಪ್ರದೇಶಗಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

ಯಾತ್ರೆ ಮುಂದೂಡಿ
ಇದೇ ವೇಳೆ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ವೈವಿ ಸುಬ್ಬಾರೆಡ್ಡಿ ಅವರು, ತಿರುಮಲದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದು, ಘಾಟ್ ರಸ್ತೆ ದುರಸ್ತಿ ಕಾರ್ಯ ಮುಂದುವರಿದಿರುವುದರಿಂದ ಸೀಮಿತ ಸಂಖ್ಯೆಯ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ದುರಸ್ತಿಗೆ ಕೆಲವು ದಿನಗಳು ಹಿಡಿಯುವ ಸಾಧ್ಯತೆ ಇರುವುದರಿಂದ ದರ್ಶನ ಟಿಕೆಟ್ ಹೊಂದಿರುವ ಭಕ್ತರಿಗೆ ದಿನಾಂಕ ಬದಲಿಸುವಂತೆ ಟಿಟಿಡಿ ಮನವಿ ಮಾಡುತ್ತಿದೆ. ಆನ್ ಲೈನ್ ನಲ್ಲಿ ದರ್ಶನ ಟಿಕೆಟ್ ಪಡೆದ ಭಕ್ತರಿಗೆ ಇನ್ನು ಆರು ತಿಂಗಳ ಕಾಲ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.  ಭಕ್ತರು ಒಂದಷ್ಟು ದಿನಗಳ ಕಾಲ ಯಾತ್ರೆ ಮುಂದೂಡಬಹುದು. ಅಲ್ಲದೆ ಪ್ರಸ್ತುತ ಬುಕ್ ಆಗಿರುವ ದರ್ಶನ ಟಿಕೆಟ್ ಗಳ ಕಾಲಾವಧಿಯನ್ನು ಆರು ತಿಂಗಳಿಗೆ ಏರಿಕೆ ಮಾಡಲಾಗಿದೆ. ಹೀಗಾಗಿ ಭಕ್ತರು ತಮ್ಮ ತಮ್ಮ ದರ್ಶನ ವೇಳಾಪಟ್ಟಿಯನ್ನು ಮುಂದೂಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com