'ಹೆಸರಿನೊಳೇನಿದೆ, ಹೆಸರು ಬದಲಿನಿಂದ ಪರಿಸ್ಥಿತಿ ಬದಲಾಗುತ್ತದೆಯೇ?': ಅರುಣಾಚಲ ಪ್ರದೇಶದಲ್ಲಿ ಚೀನಾ ಕ್ರಮಕ್ಕೆ ಭಾರತ ಟೀಕೆ

ಅರುಣಾಚಲ ಪ್ರದೇಶದಲ್ಲಿನ ಸ್ಥಳಗಳ ಹೆಸರುಗಳನ್ನು ಬದಲಾಯಿಸಿದರೆ ಅಲ್ಲಿನ ಪರಿಸ್ಥಿತಿ ಬದಲಾಗುವುದಿಲ್ಲ, ಅರುಣಾಚಲ ಪ್ರದೇಶ ಯಾವಾಗಲೂ ಭಾರತದ ಭಾಗವಾಗಿಯೇ ಇರುತ್ತದೆ ಎಂದು ಭಾರತ ಪುನರುಚ್ಛರಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಅರುಣಾಚಲ ಪ್ರದೇಶದಲ್ಲಿನ ಸ್ಥಳಗಳ ಹೆಸರುಗಳನ್ನು ಬದಲಾಯಿಸಿದರೆ ಅಲ್ಲಿನ ಪರಿಸ್ಥಿತಿ ಬದಲಾಗುವುದಿಲ್ಲ, ಅರುಣಾಚಲ ಪ್ರದೇಶ ಯಾವಾಗಲೂ ಭಾರತದ ಭಾಗವಾಗಿಯೇ ಇರುತ್ತದೆ ಎಂದು ಭಾರತ ಪುನರುಚ್ಛರಿಸಿದೆ. 

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಗ್ಚಿ, ಅರುಣಾಚಲ ಪ್ರದೇಶ ಯಾವಾಗಲೂ ಭಾರತದ ಅವಿಭಾಜ್ಯ ಅಂಗ. ಅಲ್ಲಿನ ಸ್ಥಳಗಳ ಹೆಸರುಗಳನ್ನು ಬದಲಾವಣೆ ಮಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೇಳಿದ್ದಾರೆ.

ಚೀನಾ ಅರುಣಾಚಲ ಪ್ರದೇಶದಲ್ಲಿನ ಕೆಲವು ಸ್ಥಳಗಳ ಹೆಸರುಗಳನ್ನು ತನ್ನ ಭಾಷೆಗಳಲ್ಲಿ ಮರುನಾಮಕರಣ ಮಾಡಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯಿಸಿದ್ದಾರೆ. 

ಅರುಣಾಚಲ ಪ್ರದೇಶದಲ್ಲಿನ ಸ್ಥಳಗಳ ಹೆಸರುಗಳನ್ನು ಬದಲಾಯಿಸಲು ಚೀನಾ ಮುಂದಾಗಿರುವುದು ಇದು ಮೊದಲ ಸಲವೇನಲ್ಲ, 2017ರ ಏಪ್ರಿಲ್ ನಲ್ಲಿ ಕೂಡ ಚೀನಾ ಇದೇ ರೀತಿ ಹೆಸರು ಬದಲಿಸಲು ನೋಡಿತ್ತು ಎಂದು ಹೇಳಿದ್ದಾರೆ. 

ಕಳೆದ ಬುಧವಾರ ಚೀನಾ ಸರ್ಕಾರ ಅರುಣಾಚಲ ಪ್ರದೇಶದ 15 ಸ್ಥಳಗಳ ಹೆಸರುಗಳನ್ನು ತನ್ನ ಭೂಪಟದಲ್ಲಿ ಮರುನಾಮಕರಣ ಮಾಡಿದೆ. ಚೀನಾವು ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ಎಂದು ಕರೆಯುತ್ತದೆ, ಅಲ್ಲದೆ ಇಲ್ಲಿನ 90 ಸಾವಿರ ಚದರ ಕಿಲೋ ಮೀಟರ್ ಭಾಗ ತನಗೆ ಸೇರಿದ್ದು ಎಂದು ಪ್ರತಿಪಾದಿಸುತ್ತಾ ಬಂದಿದೆ.

ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಅರುಣಾಚಲದ 15 ಸ್ಥಳಗಳಿಗೆ 'ಪ್ರಮಾಣೀಕೃತ' ಹೆಸರುಗಳನ್ನು ಹೊಂದಿದ್ದು, ಚೀನಾದ ನಕ್ಷೆಗಳಲ್ಲಿ ಬಳಸಲು ಹೇಳಿಕೆ ನೀಡಿದೆ. ಚೀನೀ ಅಕ್ಷರಗಳು, ಟಿಬೆಟಿಯನ್ ಮತ್ತು ರೋಮನ್ ವರ್ಣಮಾಲೆಯ ಹೆಸರುಗಳನ್ನು ಜಂಗ್ನಾನ್‌ನಲ್ಲಿರುವ ಸ್ಥಳಗಳಿಗೆ ಘೋಷಿಸಿದ್ದಾರೆ, ಅರುಣಾಚಲ ಪ್ರದೇಶಕ್ಕೆ ಚೀನೀ ಹೆಸರು ಎಂದು ಸರ್ಕಾರಿ ಗ್ಲೋಬಲ್ ಟೈಮ್ಸ್ ಗುರುವಾರ ವರದಿ ಮಾಡಿದ್ದು ಮಾಧ್ಯಮಗಳಲ್ಲಿ ಕೂಡ ಪ್ರಕಟವಾಗಿದೆ. 

ಚೀನಾದ ಉನ್ನತ ಶಾಸಕಾಂಗ ಸಂಸ್ಥೆಯಾದ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್‌ನ ಸ್ಥಾಯಿ ಸಮಿತಿಯು ಕಳೆದ ಅಕ್ಟೋಬರ್ 23 ರಂದು ಅಂಗೀಕರಿಸಿದ ಹೊಸ ಗಡಿ ಕಾನೂನನ್ನು ಜಾರಿಗೆ ತರಲು ಕೇವಲ ಎರಡು ದಿನಗಳ ಮುಂಚಿತವಾಗಿ ಸ್ಥಳಗಳನ್ನು ಮರುನಾಮಕರಣ ಮಾಡಲಾಗಿದೆ. 

ದೇಶದ ಭೂ ಗಡಿ ಪ್ರದೇಶಗಳ ರಕ್ಷಣೆ ಮತ್ತು ಶೋಷಣೆಯನ್ನು ಉಲ್ಲೇಖಿಸಿ ಹೊಸ ಕಾನೂನನ್ನು ಅಂಗೀಕರಿಸಲಾಗಿದೆ. ಜನವರಿ 1ರಿಂದ ಹೊಸ ಕಾನೂನು ಜಾರಿಗೆ ಬರಲಿದೆ ಎಂದು ಸಮಿತಿ ಹೇಳಿತ್ತು. ಹೊಸ ಕಾನೂನು ನಿರ್ದಿಷ್ಟವಾಗಿ ಭಾರತದ ಗಡಿಗೆ ಸಂಬಂಧಿಸಿದ್ದಲ್ಲ. ಚೀನಾ ತನ್ನ 22,457 ಕಿ ಮೀ ಭೂ ಗಡಿಯನ್ನು ಭಾರತ ಸೇರಿದಂತೆ 14 ದೇಶಗಳೊಂದಿಗೆ ಹಂಚಿಕೊಂಡಿದೆ.

ಕಾನೂನಿನ ಪ್ರಕಾರ, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಗಡಿಯನ್ನು ಸ್ಪಷ್ಟವಾಗಿ ಗುರುತಿಸಲು ತನ್ನ ಎಲ್ಲಾ ಭೂ ಗಡಿಗಳಲ್ಲಿ ಗಡಿ ಗುರುತುಗಳನ್ನು ಸ್ಥಾಪಿಸುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com