'ಇಂತಹ ಒಬ್ಬ ನಾಯಕನ ಅವಶ್ಯಕತೆ ಇದೆ'..: 2024ರ ಚುನಾವಣೆಯಲ್ಲಿ ಬಿಜೆಪಿ ಎದುರಿಸುವ ಕುರಿತು ಸಂಜಯ್ ರಾವತ್ ಹೇಳಿಕೆ!

2024ರ ಚುನಾವಣೆಗೆ ಸಿದ್ಧತೆ ನಡೆಸಿರುವ ಶಿವಸೇನೆ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯನ್ನು ಎದುರಿಸಲು ಅಷ್ಟೇ ಪ್ರಭಾವಿ ನಾಯಕರ ನೇತೃತ್ವದ ಅವಶ್ಯಕತೆ ಇದೆ ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.
ಸಂಜಯ್ ರಾವತ್
ಸಂಜಯ್ ರಾವತ್

ಮುಂಬೈ: 2024ರ ಚುನಾವಣೆಗೆ ಸಿದ್ಧತೆ ನಡೆಸಿರುವ ಶಿವಸೇನೆ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯನ್ನು ಎದುರಿಸಲು ಅಷ್ಟೇ ಪ್ರಭಾವಿ ನಾಯಕರ ನೇತೃತ್ವದ ಅವಶ್ಯಕತೆ ಇದೆ ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.

ಒಂದು ಕಡೆ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಪ್ರತಿಪಕ್ಷಗಳನ್ನು ಒಂದುಗೂಡಿಸುವ ಮಾತು ಮುನ್ನೆಲೆಗೆ ಬರುತ್ತಿರುವಂತೆಯೇ ಇತ್ತ ಶಿವಸೇನೆ ಸಂಸದ ಮತ್ತು ವಕ್ತಾರ ಸಂಜಯ್ ರಾವತ್ ಮುಂಬರುವ ಪ್ರಧಾನಿ ಅಭ್ಯರ್ಥಿ ಕುರಿತು ಮಹತ್ವದ ಅಂಶಗಳನ್ನು ಹಂಚಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸ್ಪರ್ಧಿಸಲು ಪ್ರತಿಪಕ್ಷಗಳಿಗೆ ಅವರಷ್ಟೇ ಪ್ರಭಾವಿ ನಾಯಕರಿಲ್ಲ. ಆದರೆ ಪ್ರತಿಪಕ್ಷಗಳು ಪ್ರಭಾವಿ ನಾಯಕನನ್ನು ಆರಿಸುವ ವರೆಗೂ ಚುನಾವಣೆಯಲ್ಲಿ ಬಿಜೆಪಿಗೆ ಪ್ರಬಲ ಪೈಪೋಟಿ ಒಡ್ಡಲು ಸಾಧ್ಯವಿಲ್ಲ ಎಂದು ರಾವತ್ ಅಭಿಪ್ರಾಯಪಟ್ಟಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರಿಗೆ ಹೋಲಿಸಿದರೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅತ್ಯುತ್ತಮ ಅಭ್ಯರ್ಥಿ. ಅಂತೆಯೇ ಹಲವು ನಾಯಕರು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಹೆಸರೂ ಹೇಳುತ್ತಿದ್ದಾರೆ. ಅದಾಗ್ಯೂ ಪ್ರಸ್ತುತ ಪ್ರತಿಪಕ್ಷಗಳ  ಬಳಿ 2024ರ ಚುನಾವಣೆ ಎದುರಿಸಲು ದೊಡ್ಡ ಮತ್ತು ಅವಿರೋಧ ನಾಯಕರ ಹೆಸರಿಲ್ಲ. ಇದು ಹೀಗೆಯೇ ಮುಂದುವರೆದರೆ 2024ರಲ್ಲೂ ಮೋದಿ ನೇತೃತ್ವದ ಬಿಜೆಪಿಯನ್ನು ಸೋಲಿಸುವುದು ಕಷ್ಟವಾಗುತ್ತದೆ. ಎಲ್ಲಾ ವಿರೋಧ ಪಕ್ಷಗಳನ್ನು ಒಟ್ಟುಗೂಡಿಸುವುದು ಮತ್ತು 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು  ಎದುರಿಸಲು ಒಂದು ಪ್ರಭಾವಿ ಮುಖದ ಮೇಲೆ ಒಮ್ಮತವನ್ನು ರೂಪಿಸುವುದು ಒಂದು ದೊಡ್ಡ ಕಾರ್ಯವಾಗಿದೆ. ಪ್ರತಿ ವಿರೋಧ ಪಕ್ಷವು ತನ್ನದೇ ನಾಯಕರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲು ಇಚ್ಛಿಸುತ್ತದೆ.  

ತುರ್ತು ಪರಿಸ್ಥಿತಿ ನಂತರದ ಚುನಾವಣೆಗಳಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ಜಯ ಪ್ರಕಾಶ್ ನಾರಾಯಣ್, ರಾಜೀವ್ ಗಾಂಧಿ ವಿರುದ್ಧ ವಿ.ಪಿ.ಸಿಂಗ್ ರಂತಹ ದಿಗ್ಗಜರು ಸೆಣಸಿದ್ದರು. ಬಳಿಕ ಪ್ರಧಾನಿ ಮನಮೋಹನ್ ಸಿಂಗ್, ಸೋನಿಯಾಗಾಂಧಿ ವಿರುದ್ಧ ನರೇಂದ್ರ ಮೋದಿ ಸವಾಲು ಒಡ್ಡಿದ್ದರು. ಅಂತಹ  ಪ್ರಭಾವಿ ವರ್ಚಸ್ಸುಳ್ಳ ನಾಯಕರು ನಮಗೆ ಬೇಕು. ಇದಕ್ಕೆ ಶರದ್ ಪವಾರ್ ಅವರೇ ಸರಿಯಾದ ಆಯ್ಕೆ ಎಂದು ರಾವತ್ ಹೇಳಿದ್ದಾರೆ.

ರಾಹುಲ್ ಗಾಂಧಿಗಿಂತ ದೊಡ್ಡ ನಾಯಕರಿದ್ದಾರೆ
ಇದೇ ವೇಳೆ ರಾಹುಲ್ ಗಾಂಧಿ ಕುರಿತಂತೆ ಮಾತನಾಡಿದ ಸಂಜಯ್ ರಾವತ್ ಅವರು, 'ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ದೊಡ್ಡ ಮುಖಂಡರಾಗಿದ್ದಾರೆ. ಆದರೆ ಅವರಿಗಿಂತ ಹಿರಿಯ ಮತ್ತು ಪ್ರಭಾವಿ ಮುಖಂಡರೂ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಕಾಂಗ್ರೆಸ್‌ನಲ್ಲಿ ನಾಯಕತ್ವದ ಬಗ್ಗೆ ಬಿಕ್ಕಟ್ಟು ಇದೆ. ಅದಕ್ಕಾಗಿಯೇ ಕಾಂಗ್ರೆಸ್  ಪಕ್ಷಕ್ಕೇ ಇನ್ನೂ ಅಧ್ಯಕ್ಷರನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ ಎಂದು ಸಂಜಯ್ ರಾವತ್ ಹೇಳಿದ್ದಾರೆ.

ಪ್ರಶಾಂತ್ ಕಿಶೋರ್ ಉತ್ತಮ ನೆರವಾಗಬಹುದು
ಇದೇ ವೇಳೆ ರಾಜಕೀಯ ಮತ್ತು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಬಗ್ಗೆ ಮಾತನಾಡಿದ ಸಂಜಯ್ ರಾವತ್, 'ಪ್ರಶಾಂತ್ ಕಿಶೋರ್ ಬಂಗಾಳದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ. ತೃಣಮೂಲ ಕಾಂಗ್ರೆಸ್ ಮತ್ತು ಪ್ರಶಾಂತ್ ಕಿಶೋರ್ ನಡುವೆ ಒಪ್ಪಂದವೂ  ನಡೆದಿತ್ತು. ಪ್ರಶಾಂತ್ ಕಿಶೋರ್ ಮಹಾರಾಷ್ಟ್ರದಲ್ಲಿ ಕೆಲಸ ಮಾಡಿದ್ದರು. ನಮ್ಮೊಂದಿಗೂ ಸ್ವಲ್ಪ ಕೆಲಸ ಮಾಡಿದ್ದಾರೆ. ಬಹುಶಃ ಮುಂದಿನ ಪ್ರಧಾನಿ ಅಭ್ಯರ್ಥಿ ಆಯ್ಕೆಯಲ್ಲಿ ಪ್ರಶಾಂತ್ ಕಿಶೋರ್ ನೆರವಾಗಬಹುದು ಎಂದು ಹೇಳಿದರು.

ಕೊರೋನಾ ವೈರಸ್ 2ನೇ ಅಲೆ ಬಳಿಕ ಪ್ರಧಾನಿ ಮೋದಿ ಖ್ಯಾತಿ ಕುಸಿದಿದೆ. ಪ್ರಶಾಂತ್ ಕಿಶೋರ್ ಸರ್ಕಾರದ ವಿರುದ್ಧದ ವಿರೋಧವನ್ನು ಒಂದುಗೂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಊಹಾಪೋಹಗಳಿವೆ. ಪ್ರಶಾಂತ್ ಕಿಶೋರ್ ಮತ್ತು ಶರದ್ ಪವಾರ್ ಅವರು ಸ್ವಲ್ಪ ಸಮಯದ ಹಿಂದೆ ಹಲವಾರು ಸಭೆಗಳನ್ನು  ನಡೆಸಿದ್ದರು. ಈ ಸಭೆಗಳನ್ನು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಒಗ್ಗಟ್ಟಿನ ವಿರೋಧವನ್ನು ನಿರ್ಮಿಸುವ ಪ್ರಯತ್ನಗಳಾಗಿ ನೋಡಲಾಗುತ್ತಿದೆ ಎಂದು ಹೇಳಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com