ಜುಲೈ 19ರಿಂದ ಸಂಸತ್ತಿನ ಮುಂಗಾರು ಅಧಿವೇಶನ: ವಿರೋಧ ಪಕ್ಷಗಳಿಗೆ ಪ್ರತಿಭಟನಾ ನಿರತ ರೈತರಿಂದ ಮತದಾರರ ವಿಪ್ ಜಾರಿ!

ಸಂಸತ್ತಿನ ಮುಂಗಾರು ಅಧಿವೇಶನದ ಎಲ್ಲಾ ದಿನ ಸಂಸತ್ತಿನಲ್ಲಿ ಹಾಜರಿದ್ದು ರೈತರ ಸಮಸ್ಯೆಗಳಿಗೆ ಸಹಾಯ ಮಾಡಬೇಕೆಂದು ದೆಹಲಿ ಗಡಿಭಾಗದಲ್ಲಿ ಪ್ರತಿಭಟನಾ ನಿರತ ರೈತರು ವಿರೋಧ ಪಕ್ಷಗಳ ಸಂಸದರಿಗೆ ವೋಟರ್ಸ್ ವಿಪ್(ಮತದಾರರ ವಿಪ್) ಹೊರಡಿಸಿದ್ದಾರೆ.
ಸಂಸತ್ತು
ಸಂಸತ್ತು

ನವದೆಹಲಿ: ಕೇಂದ್ರ ಸರ್ಕಾರ ಸದನದಲ್ಲಿ ರೈತರ ಬೇಡಿಕೆಗಳನ್ನು ಈಡೇರಿಸುವವರೆಗೆ ಕಲಾಪದಲ್ಲಿ ಬೇರೆ ಯಾವ ವಿಷಯಗಳ ಕುರಿತು ಚರ್ಚೆ ನಡೆಯದಂತೆ ಮತ್ತು ಕಲಾಪ ಮುಂದುವರಿಯದಂತೆ ಸಂಸತ್ತಿನ ಮುಂಗಾರು ಅಧಿವೇಶನದ ಎಲ್ಲಾ ದಿನ ಸಂಸತ್ತಿನಲ್ಲಿ ಹಾಜರಿದ್ದು ರೈತರ ಸಮಸ್ಯೆಗಳಿಗೆ ಸಹಾಯ ಮಾಡಬೇಕೆಂದು ದೆಹಲಿ ಗಡಿಭಾಗದಲ್ಲಿ ಪ್ರತಿಭಟನಾ ನಿರತ ರೈತರು ವಿರೋಧ ಪಕ್ಷಗಳ ಸಂಸದರಿಗೆ ವೋಟರ್ಸ್ ವಿಪ್(ಮತದಾರರ ವಿಪ್) ಹೊರಡಿಸಿದ್ದಾರೆ.

ಸದನದಿಂದ ಕಲಾಪ ಬಹಿಷ್ಕರಿಸಿ ಹೊರನಡೆಯದಂತೆ ಮತ್ತು ಒಂದು ವೇಳೆ ಸದನದಿಂದ ಅಮಾನತುಗೊಳಿಸಿದರೆ ಮತ್ತೆ ಹಿಂತಿರುಗಿ ಬಂದು ಬೇರೆ ಕಲಾಪ ಚರ್ಚೆಯನ್ನು ಮುಂದುವರಿಸದಂತೆ ಸರ್ಕಾರಕ್ಕೆ ಒತ್ತಡವನ್ನುಂಟುಮಾಡಬೇಕೆಂದು ಸಹ ವಿಪ್ ನಲ್ಲಿ ರೈತರು ಸೂಚಿಸಿದ್ದಾರೆ.

ಕೇಂದ್ರ ಸರ್ಕಾರದ ಮೂರು ತಿದ್ದುಪಡಿ ಕೃಷಿ ಕಾಯ್ದೆಯನ್ನು ವಿರೋಧಿಸಿ ತೀವ್ರ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚ, ಪಕ್ಷದ ವಿಪ್ ಗಳಿಂದಲೂ ಮತದಾರರ ವಿಪ್ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಿದೆ. ನೀವು ಮತ್ತು ನಿಮ್ಮ ಪಕ್ಷ ಈ ಮತದಾರರ ವಿಪ್ ನ್ನು ಉಲ್ಲಂಘಿಸಿದರೆ ದೇಶದ ರೈತರು ಹೇಗೆ ನೀವು ಆಡಳಿತಾರೂಢ ಪಕ್ಷದವರನ್ನು ಸಾರ್ವಜನಿಕ ವೇದಿಕೆಗಳಲ್ಲಿ ಟೀಕಿಸುತ್ತೀರಿ ಅದೇ ರೀತಿ ನಾವು ಕೂಡ ಪ್ರತಿಯೊಂದು ಸಾರ್ವಜನಿಕ ವೇದಿಕೆಗಳಲ್ಲಿ ನಿಮ್ಮನ್ನು ಟೀಕಿಸಲು, ವಿರೋಧಿಸಲು ಆರಂಭಿಸುತ್ತೇವೆ ಎಂದಿದ್ದಾರೆ.

ಜುಲೈ 22 ರಿಂದ ಸಂಸತ್ತಿನ ಹೊರಗೆ ರೈತರ ಪ್ರತಿಭಟನೆಯ ಪೂರ್ವಭಾವಿಯಾಗಿ ಈ ಪತ್ರವನ್ನು ಶನಿವಾರ ಸಂಸದರಿಗೆ ಹಸ್ತಾಂತರಿಸಲಾಗುವುದು ಅಥವಾ ಕಳುಹಿಸಲಾಗುವುದು ಎಂದು ಸಂಯುಕ್ತ ಕಿಸಾನ್ ಮೋರ್ಚ ತಿಳಿಸಿದೆ.

ಪ್ರತಿಭಟನಾ ನಿರತ ರೈತರು ಸಂಸದರಿಗೆ ತಮ್ಮ ಸಮಸ್ಯೆಗಳನ್ನು ಎತ್ತಿಹಿಡಿಯಲು ಒತ್ತಾಯಿಸುತ್ತಿದ್ದು, ನಾಡಿದ್ದು ಸೋಮವಾರದಿಂದ ಪ್ರಾರಂಭವಾಗುವ ಸಂಸತ್ತಿನ ಮುಂಗಾರು ಅಧಿವೇಶನದ ಎಲ್ಲಾ ದಿನಗಳವರೆಗೆ ನೀವು ಸಂಸತ್ತಿನಲ್ಲಿ ಹಾಜರಾಗಬೇಕು; ನೀವು ಮತ್ತು ನಿಮ್ಮ ಪಕ್ಷವು ಕಡ್ಡಾಯವಾಗಿ, ವಿರಾಮವಿಲ್ಲದೆ, ರೈತರ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಎತ್ತಿಹಿಡಿದು ರೈತರ ಪ್ರತಿಭಟನೆಯನ್ನು ಬೆಂಬಲಿಸಬೇಕು ಎಂದು ವಿಪ್ ನಲ್ಲಿ ಸೂಚಿಸಲಾಗಿದೆ.

ಆಗಸ್ಟ್ 13ರವರೆಗೆ ಸಂಸತ್ತಿನ ಮುಂಗಾರು ಅಧಿವೇಶನ ಸಾಗಲಿದ್ದು ಅಲ್ಲಿಯವರೆಗೆ ಪ್ರತಿದಿನ ಸುಮಾರು 200 ಮಂದಿ ರೈತರು ಸಂಸತ್ತಿನ ಹೊರಗೆ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ಅಲ್ಲದೆ ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸುವವರಿಗೆ ಐ-ಕಾರ್ಡನ್ನು ನೀಡಲು ಸಹ ಸಂಘಟನೆ ಮುಂದಾಗಿದೆ.

ಪಂಜಾಬ್ ಮತ್ತು ಹರಿಯಾಣಗಳಲ್ಲದೆ, ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ, ಪಶ್ಚಿಮ ಬಂಗಾಳ, ಅಸ್ಸಾಂ, ತ್ರಿಪುರ, ಮಣಿಪುರ, ಛತ್ತೀಸ್ ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ಬಿಹಾರ, ಜಾರ್ಖಂಡ್ ಪ್ರತಿಭಟನೆಯಲ್ಲಿ ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ರೈತರು ಸಹ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.

ಪ್ರಧಾನಿ ಮೋದಿಗೆ ಪಂಜಾಬ್ ಸಿಎಂ ಒತ್ತಾಯ: ಪ್ರತಿಭಟನಾ ನಿರತ ರೈತರೊಂದಿಗೆ ಮಾತುಕತೆ ಆರಂಭಿಸುವಂತೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ನಿನ್ನೆ ಪ್ರಧಾನಿ ಮೋದಿಯವರನ್ನು ಒತ್ತಾಯಿಸಿದ್ದಾರೆ.ಐಎಸ್ ಐ ಬೆಂಬಲಿತ ಗುಂಪುಗಳಿಂದ ಅಂತರಾಜ್ಯ ಬೆದರಿಕೆಯಿದೆ ಎಂದು ಅವರು ನಿನ್ನೆ ಪ್ರಧಾನಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ರೈತರು ಪ್ರತಿಭಟನೆಯನ್ನು ಹಿಂತೆಗೆದುಕೊಂಡು ಪರಸ್ಪರ ಸೂಕ್ತ ಪರಿಹಾರ ಕಂಡುಕೊಳ್ಳಲು ಪಂಜಾಬ್ ನಿಂದ ಸರ್ವಪಕ್ಷ ನಿಯೋಗವನ್ನು ಕರೆದುಕೊಂಡು ಹೋಗಲು ಸಮಯಾವಕಾಶ ನೀಡಬೇಕೆಂದು ಸಹ ಅವರು ಕೇಂದ್ರ ಸರ್ಕಾರವನ್ನು ಕೇಳಿದ್ದಾರೆ.

ಗಡಿಯಾಚೆಗಿನ ಬೆದರಿಕೆ ಮತ್ತು ಐಎಸ್ಐ ಬೆಂಬಲಿತ ಗುಂಪುಗಳಿಂದ ಹೆಚ್ಚಿದ ಡ್ರೋನ್ ಮತ್ತು ಇತರ ಭಯೋತ್ಪಾದಕ ಚಟುವಟಿಕೆಗಳು, ಕೆಲವು ರೈತ ಮುಖಂಡರನ್ನು ಗುರಿಯಾಗಿಸಲು ಖಲಿಸ್ತಾನಿ ಬೆಂಬಲಿತ ಭಯೋತ್ಪಾದಕ ಗುಂಪುಗಳು ಸಂಚು ರೂಪಿಸುತ್ತಿವೆ ಎಂದು ಸಹ ಪತ್ರದಲ್ಲಿ ಪಂಜಾಬ್ ಮುಖ್ಯಮಂತ್ರಿ ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com