ಟೈಮ್ಸ್ ಸಮೂಹದ ಅಧ್ಯಕ್ಷೆ ಇಂದೂ ಜೈನ್ ನಿಧನ

ಕೊರೋನಾ ಸೋಂಕಿಗೊಳಗಾಗಿದ್ದ ಟೈಮ್ಸ್ ಗ್ರೂಪ್ ಅಧ್ಯಕ್ಷೆ ಇಂದೂ ಜೈನ್ (84) ಗುರುವಾರ ವಿಧಿವಶರಾಗಿದ್ದಾರೆ. 
ಇಂದೂ ಜೈನ್
ಇಂದೂ ಜೈನ್

ನವದೆಹಲಿ: ಕೊರೋನಾ ಸೋಂಕಿಗೊಳಗಾಗಿದ್ದ ಟೈಮ್ಸ್ ಗ್ರೂಪ್ ಅಧ್ಯಕ್ಷೆ ಇಂದೂ ಜೈನ್ (84) ಗುರುವಾರ ವಿಧಿವಶರಾಗಿದ್ದಾರೆ. 

ಇಂದೂ ಜೈನ್ ಅವರ ನಿಧನಕ್ಕೆ ಪ್ರಧಾನಿ ಮೋದಿ ಸೇರಿ, ರಾಜಕಾರಣಿಗಳು, ಉದ್ಯಮಿಗಳು, ಆಧ್ಯಾತ್ಮಿಕ ಗುರುಗಳು ಹಾಗೂ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, "ಟೈಮ್ಸ್ ಗ್ರೂಪ್ ಅಧ್ಯಕ್ಷೆ ಶ್ರೀಮತಿ ಇಂದೂಜಿ ಜೈನ್‌ ಅವರ ನಿಧನದಿಂದ ಬೇಸರವಾಯಿತು. ಸಮಾಜ ಸೇವೆ, ಭಾರತದ ಪ್ರಗತಿಯ ಬಗೆಗಿನ ಅವರ ಉತ್ಸಾಹ ಮತ್ತು ನಮ್ಮ ಸಂಸ್ಕೃತಿಯ ಬಗೆಗಿನ ಆಳವಾದ ಆಸಕ್ತಿಯ ಕಾರಣಕ್ಕೆ ಅವರು ಯಾವತ್ತೂ ನೆನಪಿನಲ್ಲಿ ಉಳಿಯುತ್ತಾರೆ. ನಾನು ಅವರೊಂದಿಗಿನ ನನ್ನ ಸಂವಹನಗಳನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಅವರ ಕುಟುಂಬಕ್ಕೆ ಸಂತಾಪಗಳು. ಓಂ ಶಾಂತಿ,” ಎಂದು ಹೇಳಿದ್ದಾರೆ. 

ಇದರಂತೆ ಟೈಮ್ಸ್ ನೌ ಕೂಡ ಟ್ವೀಟ್ ಮಾಡಿದ್ದು, ಇಂದೂ ಜೈನ್‌ರನ್ನು "ಜೀವಮಾನದ ಆಧ್ಯಾತ್ಮಿಕ ಅನ್ವೇಷಕಿ, ಪ್ರವರ್ತಕ ಲೋಕೋಪಕಾರಿ, ಕಲೆಗಳ ವಿಶಿಷ್ಟ ಪೋಷಕಿ ಮತ್ತು ಮಹಿಳೆಯರ ಹಕ್ಕುಗಳ ಉತ್ಸಾಹಭರಿತ ಪ್ರತಿಪಾದಕಿ" ಎಂದು ಕರೆದಿದೆ. 

1999ರಲ್ಲಿ ಟೈಮ್ಸ್ ಗ್ರೂಪ್‌ನ ಅಧ್ಯಕ್ಷರಾದ ನಂತರ ಅವರು ಸಹಾನುಭೂತಿ ಮತ್ತು ಅಂತರ್ಗತತೆಯಿಂದ ಕೂಡಿದ ವಿಶಿಷ್ಟ ನಾಯಕತ್ವ ಶೈಲಿಯನ್ನು ವಿಕಸಿಸಿದರು. ಇದು ಟೈಮ್ಸ್‌ ಗ್ರೂಪ್‌ನ್ನು ಹೊಸ ಎತ್ತರಕ್ಕೇರಿಸಲು ಸಹಾಯ ಮಾಡಿತು.

ಸುಸ್ಥಿರ ಅಭಿವೃದ್ಧಿ ಮತ್ತು ಪರಿವರ್ತನೆಯ ಬದಲಾವಣೆಯ ಗುರಿಯೊಂದಿಗೆ ಅವರು 2000ರಲ್ಲಿ ಟೈಮ್ಸ್ ಫೌಂಡೇಶನ್‌ನ್ನು ಸ್ಥಾಪಿಸಿದರು. ಇವತ್ತು ದೇಶದಲ್ಲೇ ಪ್ರಮುಖ ಲಾಭ ರಹಿತ ಸಂಸ್ಥೆಯಾಗಿ ಇದು ಹೆಸರುವಾಸಿಯಾಗಿದೆ. ಅವರು ಹುಟ್ಟುಹಾಕಿದ ಹೆಮ್ಮೆಯ ಸಂಸ್ಥೆಯು ಜನ ಸಮುದಾಯಕ್ಕೆ ಸೇವೆಗಳನ್ನು ನೀಡುತ್ತಿರುವುದಲ್ಲದೆ ಚಂಡಮಾರುತಗಳು, ಭೂಕಂಪಗಳು, ಪ್ರವಾಹಗಳು, ಸಾಂಕ್ರಾಮಿಕ ರೋಗಗಳು ಮತ್ತು ಇತರ ಬಿಕ್ಕಟ್ಟುಗಳ ಸಮಯದಲ್ಲಿ ಸಹಾಯ ನೀಡಲು ಟೈಮ್ಸ್ ರಿಲೀಫ್ ಫಂಡ್‌ನ್ನೂ ನಡೆಸುತ್ತಿದೆ.

ಇಂದೂ ಜೈನ್ ಅವರು, ತಮ್ಮ ಜೀವಿತಾವಧಿಯಲ್ಲಿ ಅವರು ಹಲವು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಜನವರಿ 2016ರಲ್ಲಿ ದೇಶದ ಮೂರನೇ ಅತ್ಯುನ್ನತ ಪ್ರಶಸ್ತಿ ಪದ್ಮಭೂಷಣ ಪ್ರಶಸ್ತಿ, 2019 ರಲ್ಲಿ ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾದಿಂದ ಜೀವಮಾನ ಸಾಧನೆ ಪ್ರಶಸ್ತಿ, ಮಾಧ್ಯಮ ಕ್ಷೇತ್ರಕ್ಕೆ ನೀಡಿದ ಜೀವಮಾನದ ಕೊಡುಗೆಗಾಗಿ ಆಲ್ ಇಂಡಿಯಾ ಮ್ಯಾನೇಜ್ಮೆಂಟ್ ಅಸೋಸಿಯೇಷನ್‌ನಿಂದ 2018ರಲ್ಲಿ ಪ್ರಶಸ್ತಿ, ಭಾರತೀಯ ಮಹಿಳಾ ಕಾಂಗ್ರೆಸ್‌ನಿಂದ ಜೀವಮಾನ ಸಾಧನೆಗಾಗಿ 2000ನೇ ಇಸವಿಯಲ್ಲಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಮಿಲೇನಿಯಮ್ ವಿಶ್ವ ಶಾಂತಿ ಶೃಂಗಸಭೆಯಲ್ಲಿ ವಿಶ್ವಸಂಸ್ಥೆಯನ್ನುದ್ದೇಶಿಸಿಯೂ ಅವರು ಮಾತನಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com