'ವಿಶೇಷ ರೈಲು' ಹಣೆಪಟ್ಟಿ ತೆಗೆದು ಕೋವಿಡ್ ಮುಂಚಿನ ದರಗಳನ್ನು ಫಿಕ್ಸ್ ಮಾಡಲು ರೈಲ್ವೇ ಇಲಾಖೆ ಆದೇಶ!

ಕೊರೋನಾ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಆರಂಭಿಸಿದ್ದ ಕೆಲವು ವಿಶೇಷ ರೈಲುಗಳು ಇನ್ನು ಮುಂದೆ ವಿಶೇಷ ಹಣೆಪಟ್ಟಿ ತೆಗೆದು ಪ್ರಯಾಣಿಸಲಿದ್ದು, ರೈಲು ಪ್ರಯಾಣ ದರ ಕೂಡ ಇನ್ನು ಮುಂದೆ ಕೋವಿಡ್ ಮುಂಚೆಗಿನ ದರಗಳಿಗೆ ಇಳಿಕೆಯಾಗಲಿದೆ ಎಂದು ಹೇಳಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೊರೋನಾ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಆರಂಭಿಸಿದ್ದ ಕೆಲವು ವಿಶೇಷ ರೈಲುಗಳು ಇನ್ನು ಮುಂದೆ ವಿಶೇಷ ಹಣೆಪಟ್ಟಿ ತೆಗೆದು ಪ್ರಯಾಣಿಸಲಿದ್ದು, ರೈಲು ಪ್ರಯಾಣ ದರ ಕೂಡ ಇನ್ನು ಮುಂದೆ ಕೋವಿಡ್ ಮುಂಚೆಗಿನ ದರಗಳಿಗೆ ಇಳಿಕೆಯಾಗಲಿದೆ ಎಂದು ಹೇಳಲಾಗಿದೆ.

ಹೌದು.. ಕೇಂದ್ರ ರೈಲ್ವೇ ಇಲಾಖೆ ಎಲ್ಲ ವಿಶೇಷ ರೈಲುಗಳ ಸೇವೆಯನ್ನು ಹಿಂದಕ್ಕೆ ಪಡೆದಿದ್ದು, ಅಲ್ಲದೆ ರೈಲು ಪ್ರಯಾಣ ದರವನ್ನೂ ಕೂಡ ಕೋವಿಡ್ ಸಾಂಕ್ರಾಮಿಕ ರೋಗದ ಮುಂಚಿನ ದಿನಗಳಲ್ಲಿದ್ದ ದರಗಳಿಗೆ ಇಳಿಕೆ ಮಾಡುವಂತೆ ಆದೇಶ ನೀಡಿದೆ. 

ದೇಶದಲ್ಲಿ ಕೋರೋನಾ ಸಾಂಕ್ರಾಮಿಕ ಗಣನೀಯವಾಗಿ ತಗ್ಗಿದ್ದು, ರೈಲ್ವೇ ಕೂಡ ಕ್ರಮೇಣ ತನ್ನ ಎಲ್ಲ ರೈಲುಗಳನ್ನು ಹಳಿಗೆ ಇಳಿಸಿದೆ. ಬಹುತೇಕ ಎಕ್ಸ್‌ಪ್ರೆಸ್ ಮತ್ತು ಮೇಲ್ ರೈಲುಗಳು ಈಗ ಹಳಿಗೆ ಮರಳಿದ್ದು, ಈ ಮಧ್ಯೆ, ವಿಶೇಷ ರೈಲುಗಳ ಕಾರ್ಯಾಚರಣೆಯನ್ನು ಶೀಘ್ರದಲ್ಲೇ ರೈಲ್ವೆ ಇಲಾಖೆ ಸ್ಥಗಿತಗೊಳಿಸಲಿದೆ. ಶೀಘ್ರದಲ್ಲೇ ಈ ವಿಶೇಷ ರೈಲು ಸೇವೆಯನ್ನು ನಿಲ್ಲಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸೂಚಿಸಿದ್ದಾರೆ ಎನ್ನಲಾಗಿದ್ದು, ವಿಶೇಷ ರೈಲುಗಳಲ್ಲಿ, ಪ್ರಯಾಣಿಕರು ಸಾಮಾನ್ಯ ರೈಲುಗಳಿಗಿಂತ ಶೇಕಡಾ 30 ರಷ್ಟು ಹೆಚ್ಚಿನ ದರವನ್ನು ಪಾವತಿಸಬೇಕಾಗುತ್ತಿತ್ತು. ಇದೀಗ ಈ ವಿಶೇಷ ಟ್ಯಾಗ್ ಗಳನ್ನು ತೆಗೆಯುವುದರಿಂದ ಈ ರೈಲುಗಳ ಪ್ರಯಾಣಿಕರಿಗೂ ಸಾಮಾನ್ಯ ದರ ಜಾರಿಯಾಗಲಿದೆ ಎನ್ನಲಾಗಿದೆ.

ಕೋವಿಡ್ ಮಾರ್ಗ ಸೂಚಿಯಂತೆ ರೈಲ್ವೆ ವಿಶೇಷ ವಿಭಾಗಗಳಲ್ಲಿ ರೈಲುಗಳನ್ನು ಓಡಿಸಲು ಪ್ರಾರಂಭಿಸಿದೆ. ರೈಲುಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವುದು ಇದರ ಉದ್ದೇಶವಾಗಿತ್ತು. ಹೀಗಾಗಿ ದರ ಏರಿಕೆ ಮಾಡಿ ವಿಶೇಷ ಪರಿಸ್ಥಿತಿಗಳಲ್ಲಿ ರೈಲು ಓಡಿಸಲು ಇಲಾಖೆ ನಿರ್ಧರಿಸಿತ್ತು. ಆದರೆ ಕೋವಿಡ್ ಸಾಂಕ್ರಾಮಿಕ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಬಹುತೇಕ ಎಲ್ಲ ರೈಲುಗಳು ಹಳಿಗೆ ಮರಳಿವೆ. ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಪ್ರಸ್ತುತ ಶೇಕಡ 95 ರಷ್ಟು ಮೇಲ್ ಎಕ್ಸ್‌ಪ್ರೆಸ್ ರೈಲುಗಳು (Express trains) ಟ್ರ್ಯಾಕ್‌ಗೆ ಮರಳಿವೆ. ಇವುಗಳಲ್ಲಿ ಸುಮಾರು 25 ಪ್ರತಿಶತ ರೈಲುಗಳು ವಿಶೇಷ ವರ್ಗದಲ್ಲಿ ಓಡುತ್ತಿವೆ.  ಈ ವಿಶೇಷ ರೈಲುಗಳ ದರವು (Train fare) ಸಾಮಾನ್ಯ ರೈಲಿಗಿಂತ ಹೆಚ್ಚಾಗಿರುತ್ತವೆ. ರೈಲ್ವೆಯು ಪ್ರಯಾಣಿಕ ರೈಲುಗಳಲ್ಲಿ ಸುಮಾರು 70 ಪ್ರತಿಶತ ರೈಲುಗಳಿಗೆ ಮೇಲ್ ಎಕ್ಸ್‌ಪ್ರೆಸ್ ಸ್ಥಾನಮಾನವನ್ನು ನೀಡಿದೆ. ಇವುಗಳಲ್ಲಿ ಪ್ರಯಾಣಿಸಬೇಕಾದರೆ ಪ್ರಯಾಣಿಕರು ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಇನ್ನು ಮುಂದೆ ಈ ರೈಲುಗಳ ಮೇಲಿನ ವಿಶೇಷ ಟ್ಯಾಗ್ ಗಳನ್ನು ತೆಗೆಯುವುದರಿಂದ ಜನ ಸಾಮಾನ್ಯರು ಕಡಿಮೆ ದರದಲ್ಲಿ ಇದೇ ರೈಲಿನಲ್ಲಿ ಪ್ರಯಾಣಿಸಬಹುದು ಎಂದು ಇಲಾಖೆ ಹೇಳಿಕೊಂಡಿದೆ. ಕೊರೋನವೈರಸ್ ಸಾಂಕ್ರಾಮಿಕದ ಮೊದಲು, ಭಾರತೀಯ ರೈಲ್ವೇ ಸುಮಾರು 1,700 ಮೇಲ್ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸುತ್ತಿತ್ತು. ಈ ಪೈಕಿ ಬಹುತೇಕ ರೈಲುಗಳು ಪುನರಾರಂಭಗೊಂಡಿವೆ. ಕೊರೋನಾ ಬಿಕ್ಕಟ್ಟಿನ ಮೊದಲು ಸುಮಾರು 3500 ಪ್ಯಾಸೆಂಜರ್ ರೈಲುಗಳು ಓಡಾಡುತ್ತಿದ್ದವು. ಇದರಲ್ಲಿ ಕೇವಲ 1000 ಪ್ಯಾಸೆಂಜರ್ ರೈಲುಗಳನ್ನು ಓಡಿಸಲಾಗುತ್ತಿದೆ. ಇದೀಗ ಕೋವಿಡ್ ನಂತರ ರೈಲ್ವೆಯಲ್ಲಿ ಕೈಗೊಂಡಿರುವ ಕ್ರಮಗಳನ್ನು ಹಿಂಪಡೆಯಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. 

ಇಲಾಖೆಯ ನಿರ್ಧಾರದಿಂದ ರೈಲ್ವೆ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಸಾಮಾನ್ಯ ರೈಲುಗಳಲ್ಲಿ ಪ್ರಯಾಣಿಸಲು ಕಡಿಮೆ ದರವನ್ನು ಪಾವತಿಸಬೇಕಾಗುತ್ತದೆ. ಆದರೆ ಪ್ರಯಾಣದ ಸಮಯದಲ್ಲಿ ಪ್ರಯಾಣಿಕರು ಇನ್ನೂ ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸಬೇಕಾಗುತ್ತದೆ. ಆದಾಗ್ಯೂ, ಕೋವಿಡ್‌ನಿಂದಾಗಿ ಪರಿಚಯಿಸಲಾದ ರಿಯಾಯಿತಿಗಳು, ಬೆಡ್‌ರೋಲ್‌ಗಳು ಮತ್ತು ಊಟ ಸೇವೆಗಳ ಮೇಲಿನ ತಾತ್ಕಾಲಿಕ ನಿರ್ಬಂಧಗಳಂತಹ ನಿರ್ಬಂಧಗಳು ಜಾರಿಯಲ್ಲಿರುತ್ತವೆ. ವಿಶೇಷ ರೈಲುಗಳ ಕಾರ್ಯಾಚರಣೆ ಮತ್ತು ಯಾವುದೇ ರಿಯಾಯಿತಿಗಳಿಲ್ಲದೆ, ರೈಲ್ವೆಯ ಆದಾಯವು ಗಣನೀಯ ಬೆಳವಣಿಗೆಯನ್ನು ಕಂಡಿದೆ. ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ 2021-2022 ರ ಎರಡನೇ ತ್ರೈಮಾಸಿಕದಲ್ಲಿ ಸಾಗಣೆದಾರರು ಪ್ರಯಾಣಿಕರ ವಿಭಾಗದಿಂದ ಗಳಿಕೆಯಲ್ಲಿ ಇಲಾಖೆ ಶೇ. 113 ರಷ್ಟು ಹೆಚ್ಚಳವನ್ನು ದಾಖಲಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com