ಆದೇಶ, ಎಫ್ ಐಆರ್ ಇಲ್ಲದೇ ನನ್ನ ಗೃಹಬಂಧನ; ರೈತರ ಪ್ರಾಣ ತೆಗೆದ ಮಂತ್ರಿ ಪುತ್ರನ ಬಂಧನವೇಕಿಲ್ಲ: ಪ್ರಧಾನಿಗೆ ಪ್ರಿಯಾಂಕಾ ಗಾಂಧಿ ವಾದ್ರಾ

ಲಖಿಂಪುರ್ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ಥ ರೈತರನ್ನು ಭೇಟಿಮಾಡಲು ತೆರಳಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾಗಾಂಧಿ ವಾದ್ರಾ ಅವರನ್ನು ಪೊಲೀಸರು ಗೃಹ ಬಂಧನದಲ್ಲಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಅವರು ಕಿಡಿಕಾರಿದ್ದಾರೆ.
ಪ್ರಧಾನಿ ಮೋದಿ ವಿರುದ್ದ ಪ್ರಿಯಾಂಕಾ ವಾದ್ರಾ ಆಕ್ರೋಶ
ಪ್ರಧಾನಿ ಮೋದಿ ವಿರುದ್ದ ಪ್ರಿಯಾಂಕಾ ವಾದ್ರಾ ಆಕ್ರೋಶ

ಲಖನೌ: ಲಖಿಂಪುರ್ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ಥ ರೈತರನ್ನು ಭೇಟಿಮಾಡಲು ತೆರಳಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾಗಾಂಧಿ ವಾದ್ರಾ ಅವರನ್ನು ಪೊಲೀಸರು ಗೃಹ ಬಂಧನದಲ್ಲಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಅವರು ಕಿಡಿಕಾರಿದ್ದಾರೆ.

ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡಿರುವ ಪ್ರಿಯಾಂಕಾಗಾಂಧಿ ವಾದ್ರಾ ಅವರು, 'ನರೇಂದ್ರ ಮೋದಿ ಜೀ, ಕಳೆದ 28 ಗಂಟೆಗಳಿಂದ ನಿಮ್ಮ ಸರ್ಕಾರ ಯಾವುದೇ ಆದೇಶವಿಲ್ಲದೇ, ಎಫ್ಐಆರ್ ಇಲ್ಲದೇ ನನ್ನನ್ನು ಗೃಹ ಬಂಧನದಲ್ಲಿರಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.

ಅಂತೆಯೇ ಮತ್ತೊಂದು ವಿಡಿಯೋ ಅಪ್ಲೋಡ್ ಮಾಡಿರುವ ಪ್ರಿಯಾಂಕಾ, ಮೋದಿ ಜೀ ನಮಸ್ಕಾರ.. ನೀವು ಅಮೃತ ಮಹೋತ್ಸವ ಕಾರ್ಯಕ್ರಮಕ್ಕಾಗಿ ಲಖನೌಗೆ ಬರುತ್ತಿದ್ದೀರಿ ಎಂದು ತಿಳಿಯಿತು. ಆದರೆ ನೀವು ಸ್ವಲ್ಪ ಈ ವಿಡಿಯೋ ನೋಡಿ... ಈ ವಿಡಿಯೋದಲ್ಲಿ ಅಮಾಯಕ ರೈತರ ಮೇಲೆ ಕಾರು ಹರಿಸಿ ಕೊಲ್ಲಲಾಗಿದೆ. ಕಾರು ಚಲಾಯಿಸಿದಾತ ಉತ್ತರ ಪ್ರದೇಶದ ಓರ್ವ ಮಂತ್ರಿಯ ಪುತ್ರ. ಆತನ ವಿರುದ್ಧ ಇನ್ನು ಪ್ರಕರಣ ದಾಖಲಾಗಿಲ್ಲ. ಮೃತ ರೈತರಿಗೆ ಸಾಂತ್ವನ ಹೇಳಲು ಬಂದ ನನ್ನನ್ನು ನಿಮ್ಮ ಸರ್ಕಾರ ಬಂಧಿಸಿ ಗೃಹ ಬಂಧನದಲ್ಲಿರಿಸಿದೆ. ಆದರೆ ರೈತರನ್ನು ಹಾಡಹಗಲೇ ಕೊಲೆಗೈದ ಅಪರಾಧಿ ಇನ್ನು ಹೊರಗಡೆ ಏಕೆ ಇದ್ದಾನೆ. ತನ್ನ ಮಗನ ಕುಕೃತ್ಯದ ಹೊರತಾಗಿಯೂ ಆ ಮಂತ್ರಿ ಏಕೆ ನಿಮ್ಮ ಸರ್ಕಾರದಲ್ಲಿ ಸಚಿವನಾಗಿ ಮುಂದುವರೆಯುತ್ತಿದ್ದಾನೆ.? ಆತನ ವಿರುದ್ಧ ಇನ್ನೂ ಏಕೆ ಪ್ರಕರಣ ದಾಖಲಾಗಿಲ್ಲ ಎಂದು ಪ್ರಿಯಾಂಕ ಪ್ರಶ್ನಿಸಿದ್ದಾರೆ.

ಅಲ್ಲದೆ ಸ್ವತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವ ನೀವು ಕೊಂಚ ಯೋಚಿಸಿ.. ನಮಗೆ ಸ್ವಾತಂತ್ರ್ಯ ತಂದುಕೊಟ್ಟವರಲ್ಲಿ ದೇಶದ ರೈತರ ತ್ಯಾಗ ಕೂಡ ಇದೆ. ಇಂದಿಗೂ ಗಡಿಗಳಲ್ಲಿ ಗಡಿ ಕಾಯುತ್ತಿರುವ ನಮ್ಮ ಸೈನಿಕರಲ್ಲಿ ಬಹುತೇಕರು ರೈತರ ಮಕ್ಕಳಾಗಿದ್ದಾರೆ. ರೈತರು ಕಳೆದ ಹಲವು ತಿಂಗಳುಗಳಿಂದ ತನ್ನ ಸಮಸ್ಯೆ ಕುರಿತು ಧನಿ ಎತ್ತುತ್ತಿದ್ದಾರೆ. ಆದರೆ ನಿಮಗೆ ಆ ನೋವು ಕೇಳುತ್ತಿಲ್ಲವೇ. ಅಥವಾ ಸರ್ಕಾರ ಜಾಣ ಕಿವುಡು ಪ್ರದರ್ಶಿಸುತ್ತಿದೆಯೇ...? ಈ ಮೂಲಕ ನಾನು ಆಗ್ರಹಿಸುತ್ತಿದ್ದೇನೆ. ನೀವು ಲಖಿಂ ಪುರ್ ಗೆ ಬನ್ನಿ.. ಈ ದೇಶದ ಅನ್ನದಾತರ ಸಮಸ್ಯೆ ಆಲಿಸಿ... ಅವರ ನೋವುಗಳಿಗೆ ಕಿವಿಕೊಡಿ. ರೈತರ ಸುರಕ್ಷತೆ ಕೂಡ ನಿಮ್ಮ ಕರ್ತವ್ಯವಾಗಿದೆ. ಯಾವ ಸಂವಿಧಾನದ ಮೇಲೆ ನೀವು ಪ್ರಮಾಣವಚನ ಸ್ವೀಕರಿಸಿದಿರೋ ಅದೇ ಸಂವಿಧಾನ ರೈತರ ಪ್ರಾಮುಖ್ಯತೆಯನ್ನು ವಿವರಿಸುತ್ತದೆ. ಕನಿಷ್ಠ ಪಕ್ಷ ಆ ಸಂವಿಧಾನವನ್ನು ಗೌರವಿಸಿ ರೈತರ ನೋವು, ಸಮಸ್ಯೆಗಳನ್ನು ಆಲಿಸಿ.. ಎಂದು ಪ್ರಿಯಾಂಕ ಆಗ್ರಹಿಸಿದ್ದಾರೆ.

ಇನ್ನು ಈ ಹಿಂದೆ ಉತ್ತರ ಪ್ರದೇಶದ ಲಖೀಂಪುರ ಜಿಲ್ಲೆಯಲ್ಲಿ ನಡೆದ ಹಿಂಸಾಚಾರ ನಡೆದ (Lakhimpur Violence) ಸ್ಥಳಕ್ಕೆ ಹೋಗುತ್ತಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ಅವರನ್ನು ಅಡ್ಡಗಟ್ಟಿದ್ದ ಪೊಲೀಸರು ಬಂಧಿಸಿದ್ದರು.

ಏನಿದು ಘಟನೆ:
ಭಾನುವಾರ ರಾತ್ರಿ ಕೇಂದ್ರ ಸಚಿವ ಅಜಯ್​ ಮಿಶ್ರಾ ಅವರ ತಂದೆಯ ಊರು ಲಖೀಂಪುರ ಖೇರಿಯ ಟಿಕೂನಿಯಾ ಎಂಬಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಮುಖ್ಯ ಅತಿಥಿಯಾಗಿ ಆಗಮಿಸಬೇಕಿತ್ತು. ಆದರೆ ಕೃಷಿ ಕಾಯ್ದೆ ವಿರೋಧಿಸಿ ರೈತರು ಒಟ್ಟುಗೂಡಿ ಪ್ರತಿಭಟನೆ ನಡೆಸುವ ಮೂಲಕ ಕಾರನ್ನು ತಡೆದಿದ್ದರು. ಈ ವೇಳೆ ಎರಡು ಕಾರು ಅವರ ಮೇಲೆ ಹರಿದು ಇಬ್ಬರು ರೈತರು ಮೃತಪಟ್ಟಿದ್ದರು. ಈ ಘಟನೆಯಿಂದ ಹಿಂಸಾಚಾರ ನಡೆದಿದ್ದು, ಇಲ್ಲಿಯವರೆಗೆ 8 ಮಂದಿ ಸಾವನ್ನಪ್ಪಿದ್ದಾರೆ.

ನಿನ್ನೆ ರಾತ್ರಿ ಲಖೀಂಪುಕ್ಕೆ ಭೇಟಿ ನೀಡಿದ್ದ ಪ್ರಿಯಾಂಕಾ ಗಾಂಧಿ ಈ ಹಿಂಸಾಚಾರ ಘಟನೆಯಲ್ಲಿ ಮೃತಪಟ್ಟ ನಾಲ್ಕು ರೈತರ ಕುಟುಂಬಗಳನ್ನು ಭೇಟಿ ಮಾಡಿದ್ದರು. ಈ ವೇಳೆ ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಪೊಲೀಸರು ವಶಕ್ಕೆ ಪಡೆದ ವಿಡಿಯೋ ಕೂಡ ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಪ್ರಿಯಾಂಕಾ ಗಾಂಧಿ, ಸಾವನ್ನಪ್ಪಿದ ಅಮಾಯಕ ಜನರಿಗಿಂತ ನಾನು ಮುಖ್ಯವಾದವಳಲ್ಲ. ನೀವು ಸರ್ಕಾರವನ್ನು ರಕ್ಷಿಸುತ್ತಿದ್ದೀರ. ನನ್ನನ್ನು ಬಂಧಿಸಲು ನಿಮ್ಮ ಬಳಿ ವಾರೆಂಟ್ ಇದೆಯೇ? ವಾರೆಂಟ್ ನೀಡದಿದ್ದರೆ ನೀವು ನನ್ನನ್ನು ಮುಟ್ಟುವಂತಿಲ್ಲ ಎಂದು ಹೇಳಿದ್ದರು. ಆದರೂ ಪೊಲೀಸರು ಅವರನ್ನು ಕರೆದುಕೊಂಡು ಹೋಗಿ ಗೃಹ ಬಂಧನದಲ್ಲಿರಿಸಿದ್ದರು.

ಉತ್ತರ ಪ್ರದೇಶದ ಸೀತಾಪುರದ ಪಿಎಸಿ ಗೆಸ್ಟ್ ಹೌಸ್ ನಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಗೃಹ ಬಂಧನದಲ್ಲಿರಿಸಲಾಗಿದ್ದು, ಬಂಧನ ಬಳಿಕ ಪ್ರಿಯಾಂಕಾ ಗಾಂಧಿ ತಮ್ಮ ಕೊಠಡಿಯನ್ನು ಖುದ್ದು ತಾವೇ ಪೊರಕೆ ಹಿಡಿದು ಕಸ ಗುಡಿಸಿರುವ ವಿಡಿಯೋ ಕೂಡ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com