ಉಗ್ರರ ದಾಳಿ ಭೀತಿ: ಪಂಡಿತರ ಬಳಿಕ ಕಾಶ್ಮೀರ ತೊರೆದು ತವರು ರಾಜ್ಯಗಳತ್ತ ಹೆಜ್ಜೆ ಹಾಕಿದ ಜನತೆ!
ಉಗ್ರರ ಸತತ ದಾಳಿಗಳಿಂದ ಬೆದರಿದ ಕಾಶ್ಮೀರಿ ಪಂಡಿತರು ಕಣಿವೆ ರಾಜ್ಯ ಕಾಶ್ಮೀರ ತೊರೆದು ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದರು. ಆದರೆ ಇದೀಗ ಇತರೆ ರಾಜ್ಯಗಳಿಂದ ಬಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಯೂಸಿದ್ದವರೂ ಕೂಡ ಕಾಶ್ಮೀರ ತೊರೆಯುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿವೆ.
Published: 19th October 2021 09:05 AM | Last Updated: 19th October 2021 09:12 AM | A+A A-

ಸಂಗ್ರಹ ಚಿತ್ರ
ಶ್ರೀನಗರ: ಉಗ್ರರ ಸತತ ದಾಳಿಗಳಿಂದ ಬೆದರಿದ ಕಾಶ್ಮೀರಿ ಪಂಡಿತರು ಕಣಿವೆ ರಾಜ್ಯ ಕಾಶ್ಮೀರ ತೊರೆದು ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದರು. ಆದರೆ ಇದೀಗ ಇತರೆ ರಾಜ್ಯಗಳಿಂದ ಬಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಯೂಸಿದ್ದವರೂ ಕೂಡ ಕಾಶ್ಮೀರ ತೊರೆಯುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿವೆ.
ನಮಗಿಲ್ಲಿ ಇರಲು ಭಯವಾಗುತ್ತಿದೆ. ನಾನು ಗೋಲ್ ಗಪ್ಪ ಮಾರಾಟಗಾರನಾಗಿದ್ದು, ಈಗಾಗಲೇ ಇಬ್ಬರು ಗೋಲ್ ಗಪ್ಪ ಮಾರಾಟಗಾರರನ್ನು ಇಲ್ಲಿ ಹತ್ಯೆ ಮಾಡಲಾಗಿದೆ. ಅರ್ಬಿಂದ್ ಕುಮಾರ್ ಎಂಬಾತನನ್ನು ಶ್ರೀನಗರದ ಈದ್ಗಾ ಪ್ರದೇಶದಲ್ಲಿ ಹತ್ಯೆ ಮಾಡಲಾಗಿದೆ. ಈ ಪ್ರದೇಶ ನಾನು ನೆಲೆಯೂರಿರುವ ಗ್ರಾಮದ ಹತ್ತಿರದಲ್ಲೇ ಇದೆ. ಇದೀಗ ನನ್ನ ಜೀವದ ಮೇಲೆ ನನಗೆ ಭಯವಾಗುತ್ತಿದೆ. ಹೀಗಾಗಿ ನನ್ನ ರಾಜ್ಯಕ್ಕೆ ಹಿಂತಿರುಗುತ್ತಿದ್ದೇನೆಂದು ಕಾಶ್ಮೀರದಲ್ಲಿರುವ ಬಿಹಾರ ರಾಜ್ಯದ ನಿವಾಸಿ ವಿಕಾಸ್ ಚೌಧರಿ ಎಂಬುವವರು ಹೇಳಿದ್ದಾರೆ.
ಶ್ರೀನಗರದಲ್ಲಿ ಕಾರ್ಮಿಕನಾಗಿರುವ ಬಿಹಾರ ರಾಜ್ಯದ ಮತ್ತೊಬ್ಬ್ ನಿವಾಸಿ ಆಶಿಶ್ ಕುಮಾರ್ ಅವರು ಮಾತನಾಡಿ, ಗುರಿ ಮಾಡಿ ಹತ್ಯೆ ಮಾಡಲಾಗುತ್ತಿದೆ. ಪ್ರಾಣ ಭೀತಿಯಿಂದಾಗಿ ನಾನು ಸಂಬಂಧಿಕರೊಬ್ಬರ ಮನೆಗೆ ತೆರಳುತ್ತಿದ್ದೇನೆ. ಕುಟುಂಬದ ಒತ್ತಾಯ ಹಾಗೂ ಪರಿಸ್ಥಿತಿ ಆಧರಿಸಿ ನಾನು ಮತ್ತು ನನ್ನ ಕುಟುಂಬ ಕಾಶ್ಮೀರ ತೊರೆಯುತ್ತಿದ್ದೇನೆ. ಪ್ರಾಣವನ್ನು ಅಪಾಯಕ್ಕೆ ಸಿಲುಕಿಸಿಕೊಳ್ಳುವುದಕ್ಕಿಂತಲೂ ತವರಿಗೆ ಮರಳುವುದು ಉತ್ತಮ ಎಂದು ತಿಳಿಸಿದ್ದಾರೆ.
ಸ್ಥಳೀಯರಲ್ಲ ಐವರು, ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ಮೂವರು ಹಾಗೂ ಮೂವರು ಸ್ಥಳೀಯ ಮುಸ್ಲಿಮರು ಸೇರಿ 12 ಮಂದಿ ನಾಗರೀಕರನ್ನು ಉಗ್ರರು ಈ ವರೆಗೂ ಹತ್ಯೆ ಮಾಡಿದ್ದಾರೆ.
ಸ್ಥಳೀಯರಲ್ಲದ ಕಾರ್ಮಿಕರನ್ನು ಇದೇ ಮೊದಲ ಬಾರಿಗೆ ಗುರಿ ಮಾಡಿ ಉಗ್ರರು ಹತ್ಯೆ ಮಾಡುತ್ತಿದ್ದಾರೆ. ಇದು ಜನರಲ್ಲಿ ಸಾಕಷ್ಟು ಆತಂಕವನ್ನು ಮೂಡಿಸಿದೆ ಎಂದು ಬಿಹಾರ ಮೂಲದ ಮುಖೇಶ್ ಕುಮಾರ್ ಅವರು ಹೇಳಿದ್ದಾರೆ. ಈಗಾಗಲೇ ನನ್ನ ಕುಟುಂಬ ಬಿಹಾರಕ್ಕೆ ಮರಳಿದೆ. ಇದೀಗ ನನ್ನನ್ನೂ ಕಾಶ್ಮೀರ ತೊರೆಯುವಂತೆ ತಿಳಿಸುತ್ತಿದ್ದಾರೆ. ಹೃದಯ ಭಾರದಿಂದ ಕಾಶ್ಮೀರ ಬಿಡುತ್ತಿದ್ದೇನೆಂದು ಹೇಳಿದ್ದಾರೆ.
ಮತ್ತೊಬ್ಬ ಕಾರ್ಮಿಕ ಧನಂಜಯ್ ಅವರು ಮಾತನಾಡಿ, ಭದ್ರತೆ ಕಾರಣದಿಂದಾಗಿ ನಾನು ಕಾಶ್ಮೀರ ತೊರೆಯುತ್ತಿದ್ದೇನೆ. ನಾನೊಬ್ಬ ಐಸ್ ಕ್ರೀಮ್ ಮಾರಾಟಗಾರನಾಗಿದ್ದೇನೆ. ಕಳೆದ 6 ವರ್ಷಗಳಿಂದ ಕಾಶ್ಮೀರದಲ್ಲಿದ್ದೇನೆ. ನಾನೆಂದೂ ಇಂತಹ ಪರಿಸ್ಥಿತಿಯನ್ನು ನೋಡಿರಲಿಲ್ಲ ಎಂದು ಹೇಳಿದ್ದಾರೆ.
ಮಣಿಲಾಲ್ ಪಾಸ್ವಾನ್ ಎಂಬ ಮತ್ತೊಬ್ಬ ಕಾರ್ಮಿಕ ಮಾತನಾಡಿ, ಕಾಶ್ಮೀರ ತೊರೆಯುವಂತೆ ಯಾರೂ ನಮಗೆ ಬಲವಂತ ಮಾಡುತ್ತಿಲ್ಲ. ಭದ್ರತಾ ಕಾರಣದಿಂದ ನಾವೇ ಕಾಶ್ಮೀರ ತೊರೆಯುತ್ತಿದ್ದೇವೆ. ಕಾಶ್ಮೀರಿಗರು ಉತ್ತಮವಾಗಿ ಆತಿತ್ಯವನ್ನು ನೀಡಿದ್ದಾರೆ. ನಮ್ಮನ್ನು ಸದಾಕಾಲ ಗೌರವದಿಂದ ನೋಡಿದ್ದಾರೆಂದು ಹೇಳಿದ್ದಾರೆ.