ಪೆಗಾಸಸ್ ವಿವಾದ: ಅರ್ಜಿಗಳಿಗೆ ಪ್ರತಿಕ್ರಿಯಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿಂದ ಮತ್ತಷ್ಟು ಕಾಲಾವಕಾಶ
ಪೆಗಾಸಸ್ ಗೂಢಚರ್ಯೆ ಪ್ರಕರಣವನ್ನು ಸ್ವತಂತ್ರವಾಗಿ ತನಿಖೆ ನಡೆಸಲು ಒತ್ತಾಯಿಸಿ ಸಲ್ಲಿಸಿದ್ದ ಅರ್ಜಿಗಳಿಗೆ ಪ್ರತಿಕ್ರಿಯೆ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಇನ್ನಷ್ಟು ಕಾಲಾವಕಾಶ ನೀಡಿದೆ.
Published: 07th September 2021 02:37 PM | Last Updated: 07th September 2021 02:37 PM | A+A A-

ಪೆಗಾಸಸ್ ಸ್ಪೈವೇರ್
ನವದೆಹಲಿ: ಪೆಗಾಸಸ್ ಗೂಢಚರ್ಯೆ ಪ್ರಕರಣವನ್ನು ಸ್ವತಂತ್ರವಾಗಿ ತನಿಖೆ ನಡೆಸಲು ಒತ್ತಾಯಿಸಿ ಸಲ್ಲಿಸಿದ್ದ ಅರ್ಜಿಗಳಿಗೆ ಪ್ರತಿಕ್ರಿಯೆ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಇನ್ನಷ್ಟು ಕಾಲಾವಕಾಶ ನೀಡಿದೆ.
ಸ್ವತಂತ್ರ ತನಿಖೆಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ವಿವಿಧ ಅರ್ಜಿಗಳಿಗೆ ಪ್ರತಿಕ್ರಿಯೆ ನೀಡುವಂತೆ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ತ್ರಿಸದಸ್ಯ ನ್ಯಾಯಮೂರ್ತಿ ಪೀಠ ಆಗಸ್ಟ್ 17ರಂದು ಕೇಂದ್ರಕ್ಕೆ ನೋಟಿಸ್ ನೀಡಿತ್ತು.
ಇದನ್ನೂ ಓದಿ: ಪೆಗಾಸಸ್ ಪ್ರಕರಣದ ಸ್ವತಂತ್ರ ತನಿಖೆಗೆ ಒತ್ತಾಯಿಸಿ ಸಲ್ಲಿಸಲಾಗಿರುವ ಅರ್ಜಿಗಳು ಆಧಾರರಹಿತ: ಕೇಂದ್ರ ಸರ್ಕಾರ
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಅನಿರುದ್ಧ ಬೋಸ್ ಅವರನ್ನೊಳಗೊಂಡ ಪೀಠ ಈ ಅರ್ಜಿಗಳ ವಿಚಾರಣೆ ನಡೆಸಿತು. ಈ ವೇಳೆ ಕೇಂದ್ರದ ಪರ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ‘ಕೆಲವು ತೊಂದರೆಗಳಿಂದಾಗಿ ನ್ಯಾಯಪೀಠ ಕೇಳಿರುವ ಪ್ರಮಾಣ ಪತ್ರವನ್ನು ಸಲ್ಲಿಸಲಾಗಿಲ್ಲ. ಹಾಗಾಗಿ ಈ ಪ್ರಕರಣದ ವಿಚಾರಣೆಯನ್ನು ಗುರುವಾರ ಅಥವಾ ಸೋಮವಾರ ನಡೆಯುವ ವಿಚಾರಣೆ ಪಟ್ಟಿಯಲ್ಲಿ ಸೇರಿಸಲು ಮನವಿ ಮಾಡಿದರು.
ಇನ್ನು ಪತ್ರಕರ್ತ ಎನ್. ರಾಮ್ ಪರ ಹಾಜರಾಗಿದ್ದ ವಕೀಲ ಕಪಿಲ್ ಸಿಬಲ್ ಅವರು ‘ಕೇಂದ್ರದ ಮನವಿಗೆ ಯಾವುದೇ ಆಕ್ಷೇಪಣೆಗಳಿಲ್ಲ‘ ಎಂದು ಹೇಳಿದರು. ಹೀಗಾಗಿ ನ್ಯಾಯಪೀಠ ವಿಚಾರಣೆಯನ್ನು ಸೆಪ್ಟೆಂಬರ್ 13ಕ್ಕೆ ಮುಂದೂಡಿದೆ. ಅಲ್ಲದೆ ಪ್ರಕರಣವನ್ನು ಸೋಮವಾರ ವಿಚಾರಣೆ ನಡೆಸುವ ವಿಷಯಗಳ ಪಟ್ಟಿಗೆ ಸೇರಿಸಲು ಸೂಚಿಸಿದೆ.
ಇದನ್ನೂ ಓದಿ: ಪೆಗಾಸಸ್ ಪ್ರಕರಣ: ವ್ಯವಸ್ಥೆ ಮೇಲೆ ನಂಬಿಕೆ ಇಡಿ, ಸಾಮಾಜಿಕ ಜಾಲತಾಣಗಳ ಚರ್ಚೆಯಿಂದ ದೂರವಿರಿ; 'ಸುಪ್ರೀಂ' ಸೂಚನೆ
ದೇಶಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಈ ಪೆಗಾಸಸ್ ಪ್ರಕರಣದ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ಭಾರತದ ಎಡಿಟರ್ಸ್ ಗಿಲ್ಡ್ ಸಲ್ಲಿಸಿರುವ ಅರ್ಜಿ ಸೇರಿದಂತೆ ನ್ಯಾಯಾಲಯವು ಸುಮಾರು 12 ಅರ್ಜಿಗಳ ವಿಚಾರಣೆ ನಡೆಸುತ್ತಿದೆ.
ಇಸ್ರೇಲ್ ಮೂಲದ ಸಂಸ್ಥೆಯ NSOನ ಸ್ಪೈವೇರ್ ಪೆಗಾಸಸ್ ಅನ್ನು ಬಳಸಿಕೊಂಡು ದೇಶದ ಪ್ರಖ್ಯಾತ ನಾಗರಿಕರು, ರಾಜಕಾರಣಿಗಳು ಮತ್ತು ಪತ್ರಕರ್ತರ ಮೇಲೆ ಗೂಢಚರ್ಯೆ ನಡೆಸಿರುವ ಆರೋಪಗಳು ಕೇಳಿಬಂದಿತ್ತು. 300 ಕ್ಕೂ ಹೆಚ್ಚು ಭಾರತೀಯ ಮೊಬೈಲ್ ಫೋನ್ ಸಂಖ್ಯೆಗಳ ಮೇಲೆ ಈ ಪೆಗಾಸಸ್ ಸ್ಪೈವೇರ್ ಮೂಲಕ ಗೂಢಚರ್ಯೆ ನಡೆಸಲಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ಒಕ್ಕೂಟ ವರದಿ ಮಾಡಿತ್ತು.