ಬ್ಯಾಂಕ್ ಲಾಕರ್ ನಿಂದ 6 ಕೆಜಿ ಚಿನ್ನ ಕಳವು: ಸಿಬ್ಬಂದಿಗಾಗಿ ಪೊಲೀಸರ ಹುಡುಕಾಟ

ಬ್ಯಾಂಕ್ ನಲ್ಲಿ ಚಿನ್ನ ಕಳವಾಗಿರುವ ಸುದ್ದಿ ಹೊರಬರುತ್ತಲೇ ಬ್ಯಾಂಕ್ ಗ್ರಾಹಕರು ಆತಂಕಕ್ಕೊಳಗಾಗಿ ಬ್ಯಾಂಕ್ ಬಳಿ ಜಮಾಯಿಸಿದ್ದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗುಂಟೂರು: ಬ್ಯಾಂಕ್ ಆಫ್ ಬರೋಡಾದಲ್ಲಿ 5.8 ಕೆ.ಜಿ ತೂಕದ ಚಿನ್ನದ ಕಾಣೆಯಾಗಿರುವುದು ಬೆಳಕಿಗೆ ಬಂದಿದ್ದು ಓರ್ವ ಬ್ಯಾಂಕ್ ಸಿಬ್ಬಂದಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆಂಧ್ರಪ್ರದೇಶ ರಾಜ್ಯದ ಬಾಬಾಪಟ್ಲಾ ಶಾಖೆಯ ಬ್ಯಾಂಕ್ ಆಫ್ ಬರೋಡಾ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಕಾಣೆಯಾಗಿರುವ ಚಿನ್ನದ ಮೊತ್ತ 2.65 ಕೋಟಿ ರೂ.

ಸೆಪ್ಟೆಂಬರ್ 2ರಂದು ಆಡಿಟ್ ನಡೆದ ಸಂದರ್ಭ ಬ್ಯಾಂಕ್ ಅಧಿಕಾರಿಗಳು 5.8 ಕೆ.ಜಿ ಚಿನ್ನ ಕಾಣೆಯಾಗಿರುವುದು ಕಂಡುಬಂದಿತ್ತು. ಈ ಸಂಬಂಧ ಬ್ಯಾಂಕ್ ಅಧಿಕಾರಿಗಳು ಪೊಲೀಸ್ ದೂರು ದಾಖಲಿಸಿದ್ದರು. ಸೆಪ್ಟೆಂಬರ್ 2ರಂದೇ ಕಚೇರಿಗೆ ನಾಗರಾಜು ಎಂಬ ಬ್ಯಾಂಕ್ ಸಿಬ್ಬಂದಿ ಕಚೇರಿಗೆ ಗೈರು ಹಾಜರಾಗಿದ್ದ. 

ಅಂದಿನಿಂದ ಇಂದಿನವರೆಗೂ ಆತನ ಸುಳಿವು ಪತ್ತೆಯಾಗಿಲ್ಲ. ಪೊಲೀಸರು ಆತನಿಗೂ ಪ್ರಕರಣಕ್ಕೂ ಸಂಬಂಧ ಇರಬಹುದು ಎಂದು ಶಂಕಿಸಿದ್ದಾರೆ. ಹೀಗಾಗಿ ಆತನ ಪತ್ತೆಗಾಗಿ ಜಾಲ ಬೀಸಿದ್ದಾರೆ. 

ಆಡಿಟ್ ನಡೆಯುವ ಸಂದರ್ಭ ಆತ ಹೇಳದೇ ಕೇಳದೆ ಕಚೇರಿಯಿಂದ ಹೊರಬಿದ್ದಿದ್ದ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. ತನ್ನ ಕಳವು ಕೃತ್ಯ ಎಲ್ಲಘೊರಬರುವುದೋ ಎಂಬ ಭಯದಿಂದ ಆತ ಕಾಲ್ಕಿತ್ತಿರಬಹುದು ಎಂದು ಬ್ಯಾಂಕ್ ಅಧಿಕಾರಿಗಳು ಶಂಕಿಸಿದ್ದಾರೆ. 

ಬ್ಯಾಂಕ್ ನಲ್ಲಿ ಚಿನ್ನ ಕಳವಾಗಿರುವ ಸುದ್ದಿ ಹೊರಬರುತ್ತಲೇ ಬ್ಯಾಂಕ್ ಗ್ರಾಹಕರು ಆತಂಕಕ್ಕೊಳಗಾಗಿ ಬ್ಯಾಂಕ್ ಬಳಿ ಜಮಾಯಿಸಿದ್ದರು. ಪೊಲೀಸರು ಹಾಗೂ ಬ್ಯಾಂಕ್ ಅಧಿಕಾರಿಗಳು ಅವರನ್ನು ಸಮಾಧಾನ ಪಡಿಸಿ ಅವರ ಚಿನ್ನದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ ಘಟನೆ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com