ಅಸ್ಸಾಂ: ತೆರವು ಕಾರ್ಯಾಚರಣೆ ವೇಳೆ ಪೊಲೀಸ್ ಗುಂಡಿನ ದಾಳಿ, ಜನರ ಮೇಲಿನ ಹಲ್ಲೆ ಕ್ಯಾಮೆರಾದಲ್ಲಿ ದಾಖಲು
ಅಸ್ಸಾಂನ ದರಾಂಗ್ ಜಿಲ್ಲೆಯಲ್ಲಿ ಒತ್ತುವರಿ ತೆರವುಗೊಳಿಸುವ ವೇಳೆ ಪೊಲೀಸರು ಸ್ಥಳೀಯರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಬಂದೂಕು, ಲಾಠಿಗಳಿಂದ ಸಜ್ಜಿತರಾಗಿದ್ದ ಪೊಲೀಸರು ಜನರನ್ನು ಅಟ್ಟಿಸಿಕೊಂಡು ಹೋಗಿ ಥಳಿಸುವುದು ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.
Published: 24th September 2021 09:30 AM | Last Updated: 24th September 2021 01:25 PM | A+A A-

ಗಾಯಗೊಂಡ ವ್ಯಕ್ತಿಯ ಮೇಲೆ ಹಲ್ಲೆ ನಡೆಸುತ್ತಿರುವ ಕ್ಯಾಮೆರಾಮನ್.
ಗುವಾಹಟಿ: ಅಸ್ಸಾಂನ ದರಾಂಗ್ ಜಿಲ್ಲೆಯಲ್ಲಿ ಒತ್ತುವರಿ ತೆರವುಗೊಳಿಸುವ ವೇಳೆ ಪೊಲೀಸರು ಸ್ಥಳೀಯರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಬಂದೂಕು, ಲಾಠಿಗಳಿಂದ ಸಜ್ಜಿತರಾಗಿದ್ದ ಪೊಲೀಸರು ಜನರನ್ನು ಅಟ್ಟಿಸಿಕೊಂಡು ಹೋಗಿ ಥಳಿಸುವುದು ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಈ ಕುರಿತ ಕೆಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಸಂಘರ್ಷವನ್ನು ವಿಡಿಯೊ ಮಾಡಿಕೊಳ್ಳುತ್ತಿದ್ದ ಕ್ಯಾಮೆರಾಮನ್ ಒಬ್ಬರು ವ್ಯಕ್ತಿಯೊಬ್ಬನನ್ನು ಬೆನ್ನಟ್ಟಿ ಹೋಗಿ ಥಳಿಸುವ ದೃಶ್ಯವೂ ವೈರಲ್ ಆಗಿರುವ ವಿಡಿಯೊದಲ್ಲಿದೆ.ಪೊಲೀಸರಿಂದ ಹೊಡೆತದಿಂದ ನಿಶ್ಚೇಷ್ಟಿತನಾಗಿದ್ದ ವ್ಯಕ್ತಿಯ ಮೇಲೆ ಕ್ಯಾಮೆರಾಮನ್ ಹಾರಿ ಹಲ್ಲೆ ನಡೆಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
What protocol orders firing to the chest of a lone man coming running with a stick @DGPAssamPolice @assampolice ? Who is the man in civil clothes with a camera who repeatedly jumps with bloodthirsty hate on the body of the fallen (probably dead) man? pic.twitter.com/gqt9pMbXDq
— Kavita Krishnan (@kavita_krishnan) September 23, 2021
ಘಟನೆ ಸಂಬಂಧ ಇದೀಗ ಪೊಲೀಸರು ಕ್ಯಾಮೆರಾಮನ್ನನ್ನು ಪೊಲೀಸರು ಬಂಧಿಸಿದ್ದಾರೆ. ಸಂಘರ್ಷದ ಬಗ್ಗೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಧೋಲ್ಪುರದಲ್ಲಿ ಸುಮಾರು 800 ಕುಟುಂಬಗಳನ್ನು ಸೋಮವಾರ ಅಸ್ಸಾಂ ಸರ್ಕಾರ ತೆರವುಗೊಳಿಸಿತ್ತು. ಕೃಷಿ ಯೋಜನೆಗಾಗಿ 4,500 ಬಿಘಾದಷ್ಟು ಜಮೀನನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ. ಸ್ಥಳೀಯರು ಕಲ್ಲುತೂರಾಟ ನಡೆಸಿದ್ದರಿಂದ ಅನಿವಾರ್ಯವಾಗಿ ಬಲಪ್ರಯೋಗ ಮಾಡಬೇಕಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಘಟನೆಯಲ್ಲಿ 9 ಪೊಲೀಸ್ ಸಿಬ್ಬಂದಿ, 2 ನಾಗರಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸುಶಾಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಸ್ಥಳೀಯರು ಸಂಘರ್ಷಕ್ಕೆ ಇಳಿದ ಕಾರಣ ಒತ್ತುವರಿ ತೆರವು ಕಾರ್ಯಾಚರಣೆ ಪೂರ್ಣಗೊಳ್ಳಲಿಲ್ಲ. ಪ್ರಸ್ತುತ ಪೊಲೀಸರು ಅಲ್ಲಿಂದ ವಾಪಸ್ ಬಂದಿದ್ದಾರೆ. ನಂತರದ ದಿನಗಳಲ್ಲಿ ಪರಿಸ್ಥಿತಿಯನ್ನು ಮತ್ತೊಮ್ಮೆ ಅವಲೋಕಿಸುತ್ತೇವೆ ಎಂದು ತಿಳಿಸಿದ್ದಾರೆ.
ಸ್ಥಳೀಯ ವ್ಯಕ್ತಿಯೊಬ್ಬರ ಮೇಲೆ ಗುಂಡು ಹಾರಿಸಿ, ನಂತರ ಹಲ್ಲೆ ಮಾಡಿರುವ ಘಟನೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ಸ್ಥಳ ತುಂಬಾ ದೊಡ್ಡದಿತ್ತು. ನಾನು ಮತ್ತೊಂದು ಭಾಗದಲ್ಲಿದ್ದೆ ಎಂದಿದ್ದಾರೆ.
ಈ ನಡುವೆ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂದಿಯವರು, ಸ್ಸಾಂನ ಬಿಜೆಪಿ ಸರ್ಕಾರವನ್ನು ಹೊಣೆ ಮಾಡಿ ಟ್ವೀಟ್ ಮಾಡಿದ್ದಾರೆ.
ಅಸ್ಸಾಂ ರಾಜ್ಯವು ಸರ್ಕಾರ ಪ್ರಾಯೋಜಿತ ಬೆಂಕಿಯಲ್ಲಿ ಬೇಯುತ್ತಿದೆ. ರಾಜ್ಯದ ಸೋದರ-ಸೋದರರೊಂದಿಗೆ ನಾನು ನಿಲ್ಲುತ್ತೇನೆ. ಭಾರತಾಂಬೆಯ ಯಾವುದೇ ಮಕ್ಕಳಿಗೆ ಹೀಗಾಗಬಾರದು ಎಂದು ಹೇಳಿದ್ದಾರೆ.
ಒತ್ತುವರಿ ತೆರವು ಕಾರ್ಯಾಚರಣೆ ನಡೆದ ಸ್ಥಳದಲ್ಲಿ ಸುಮಾರು 200 ಕುಟುಂಬಗಳು ಇದ್ದವು. ಆಗಸ್ಟ್ ಅಂತ್ಯದಲ್ಲಿ ಈ ಕುಟುಂಬಗಳು ಗುವಾಹಟಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದವು. ಇದು ಸರ್ಕಾರಿ ಭೂಮಿ, ಅಲ್ಲಿರುವವರಿಗೆ ಭೂಮಿಯ ಮೇಲೆ ಯಾವುದೇ ಹಕ್ಕು ಇಲ್ಲ ಎಂದು ಸರ್ಕಾರವು ನಂತರದ ದಿನಗಳಲ್ಲಿ ಅಫಿಡವಿಟ್ ಸಲ್ಲಿಸಿತ್ತು. ಅಫಿಡವಿಟ್ ಬಗ್ಗೆ ಅರ್ಜಿದಾರರು ಪ್ರತಿಕ್ರಿಯೆ ದಾಖಲಿಸುವ ಮೊದಲೇ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ ಎಂಬುದನ್ನು ಹಲವು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.